Advertisement
ಹಂಗಾರಕಟ್ಟೆ ಬ್ರೇಕ್ ವಾಟರ್‌ಗೆ ಒಕ್ಕೊರಳ ಆಗ್ರಹ
ಹಂಗಾರಕಟ್ಟೆ ಅಳಿವೆಯಲ್ಲಿ ಬ್ರೇಕ್ ವಾಟರ್‌ಗೆ ಇಲ್ಲದಿರುವುದರಿಂದ ಮೀನುಗಾರಿಕೆ ಚಟುವಟಿಕೆಗೆ ಹಿನ್ನಡೆಯಾಗಿದ್ದು ದೊಡ್ಡ ಬೋಟ್‌ಗಳ ಸಂಚಾರ ಕಷ್ಟಸಾಧ್ಯವಾಗಿದೆ. ಹೀಗಾಗಿ ಪ್ರತಿವರ್ಷ ಒಂದೆರಡು ತಿಂಗಳು ತಡವಾಗಿ ಇಲ್ಲಿ ಮೀನುಗಾರಿಕೆ ಆರಂಭವಾಗುತ್ತದೆ. ಆದ್ದರಿಂದ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸುವ ಮೊದಲು ಬ್ರೇಕ್ ವಾಟರ್ ನಿರ್ಮಿಸಬೇಕು ಎಂದು ಮೂರು ಜೆಟ್ಟಿಗಳ ಮೀನುಗಾರ ಪ್ರಮುಖರ ಒಕ್ಕೊರಳ ಬೇಡಿಕೆ ಸಲ್ಲಿಸಿದ್ದಾರೆ.
ಕೋಡಿಕನ್ಯಾಣ ಜೆಟ್ಟಿಯ ಹೂಳೆತ್ತುವ ಕಾಮಗಾರಿಗೆ 2017ರಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಜಂಟಿಯಾಗಿ ಸುಮಾರು 6ಕೋಟಿ ರೂ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ಚಾಲನೆ ನೀಡಿತ್ತು. ಆದರೆ ಹಲವು ಕಾರಣಗಳನ್ನು ನೀಡಿ ಗುತ್ತಿಗೆ ವಹಿಸಿಕೊಂಡ ಕಂಪೆನಿ ಕಾಮಗಾರಿಯನ್ನು ವರ್ಷಗಟ್ಟಲೆ ಸ್ಥಗಿತಗೊಳಿಸಿತ್ತು. ಜತೆಗೆ ಸಿ.ಆರ್.ಝಡ್ ಸಮಸ್ಯೆ ಕೂಡ ಕಾಮಗಾರಿಗೆ ಹಿನ್ನಡೆಯಾಗಿತ್ತು. ಹೀಗಾಗಿ ಈ ಕಾಮಗಾರಿ ಮತ್ತೆ ಆರಂಭಿಸಬೇಕು ಎನ್ನುವುದು ಮೀನುಗಾರರ ಬೇಡಿಕೆಯಾಗಿದೆ ಮತ್ತು ಕೋಡಿ-ಸಾಸ್ತಾನ ಸಂಪರ್ಕ ರಸ್ತೆಯ ಬಳಿ ಇರುವ ಸರಕಾರಿ ಜಾಗವನ್ನು ಮೀನುಗಾರಿಕೆ ಇಲಾಖೆಗೆ ಹಸ್ತಾಂತರ ಮಾಡಬೇಕು. ಜಟ್ಟಿಯನ್ನು 300ಮೀಟರ್ ವಿಸ್ತರಣೆ ಮತ್ತು ಈಗಾಗಲೇ ಮಂಜೂರಾಗಿರುವ 60ಮೀಟರ್ ವಿಸ್ತರಣೆ ಕಾಮಗಾರಿಯನ್ನು ಬಲಭಾಗದಲ್ಲಿ ನಡೆಸಬೇಕು ಎನ್ನುವುದು ಇಲ್ಲಿನ ಮೀನುಗಾರರ ಬೇಡಿಕೆಯಾಗಿದೆ. ಕೋಡಿಬೆಂಗ್ರೆಯ ಮೀನುಗಾರರ ಮನವಿ
ಜೆಟ್ಟಿ ಅಭಿವೃದ್ಧಿ ಹಾಗೂ ಅಗತ್ಯ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಕೋಡಿಬೆಂಗ್ರೆಯಲ್ಲಿ ಮೀನುಗಾರಿಕೆ ಚಟುವಟಿಕೆಗೆ ಅನುಕೂಲ ಮಾಡಿಕೊಡಬೇಕು ಎನ್ನುವುದು ಇಲ್ಲಿನ ಮೀನುಗಾರರ ಬೇಡಿಕೆಯಾಗಿದೆ.
Related Articles
ಇತ್ತೀಚೆಗೆ ಕೋಡಿಕನ್ಯಾಣ ಜೆಟ್ಟಿಗೆ ಭೇಟಿ ನೀಡಿದ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಮೀನುಗಾರರ ಮನವಿ ಸ್ವೀಕರಿಸಿ ಎಲ್ಲಾ ಕಾಮಗಾರಿಗಳನ್ನು ಆರಂಭಿಸಲು ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ಕಾನೂನಾತ್ಮಕ ತೊಡಕಿನಿಂದಾಗಿ ಸ್ಥಗಿತಗೊಂಡ ಹೂಳೆತ್ತುವ ಕಾಮಗಾರಿಯನ್ನು ಸಿ.ಆರ್.ಝಡ್. ಅನುಮತಿ ಪಡೆದು ಪುನರಾರಂಭಿಸುವುದಾಗಿ ಹಾಗೂ ಡಿಸೆಂಬರ್ ಅಂತ್ಯದಲ್ಲಿ ಬ್ರೇಕ್ ವಾಟರ್ ಕಾಮಗಾರಿಗೆ ಅಂದಾಜುಪಟ್ಟಿ ಸಿದ್ಧಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
Advertisement
ಸೂಕ್ತ ಕ್ರಮಕೈಗೊಳ್ಳಲಾಗುವುದುಹಂಗಾರಕಟ್ಟೆ ಬ್ರೇಕ್ ವಾಟರ್ ಕಾಮಗಾರಿಗೆ ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಹೂಳೆತ್ತುವ ಕಾಮಗಾರಿಯ ಕಾನೂನು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಾಗುತ್ತಿದೆ. ಜೆಟ್ಟಿ ಬಳಿ ಇರುವ ಸರಕಾರಿ ಜಾಗವನ್ನು ಮೀನುಗಾರಿಕೆ ಇಲಾಖೆಗೆ ಹಸ್ತಾಂತರಿಸುವ ಕಡತ ಪರಿಶೀಲನೆ ಹಂತದಲ್ಲಿದ್ದು ಈ ಕುರಿತು ಕ್ರಮಕೈಗೊಳ್ಳಲಾಗುವುದು, ಮಂಜೂರಾಗಿರುವ 60ಮೀಟರ್ ವಿಸ್ತರಣೆಗೆ ಈಗಾಗಲೇ ಸೂಚನೆ ನೀಡಲಾಗಿದೆ.
-ಕೋಟ ಶ್ರೀನಿವಾಸ ಪೂಜಾರಿ,
ಮೀನುಗಾರಿಕೆ ಸಚಿವರು -ರಾಜೇಶ ಗಾಣಿಗ ಅಚ್ಲಾಡಿ