Advertisement

ಹಳೆ ಹೀರೋ ಹೊಸ ಎಂಟ್ರಿ

10:01 AM Oct 22, 2019 | Sriram |

ಎಂದು ನಿನ್ನ ನೋಡುವೆ, ಎಂದು ನಿನ್ನ ಸೇರುವೆ,
ನಿಜ ಹೇಳಲೇನು, ನನ್ನ ಜೀವ ನೀನು…
ಡಾ. ರಾಜಕುಮಾರ್‌ ಅಭಿನಯದ ಈ ಹಾಡುಗಳಿಗೆ ಮನಸೋಲದವರಿಲ್ಲ. ಈ ಹಾಡಿನಲ್ಲಿ ಅಣ್ಣಾವ್ರು, ಬಜಾಜ್‌ ಚೇತಕ್‌ ಸ್ಕೂಟರ್‌ನಲ್ಲಿ ಹಳ್ಳಿಗೆ ಓಡೋಡುತ್ತಾ ಬರೋದೇನು? ಹಾದಿಯಲ್ಲೇ ಕನಸು ಕಾಣೋದೇನು? ಮಧ್ಯಮ ವರ್ಗದ ಮೆಚ್ಚುಗೆ ಗಳಿಸಿದ್ದ ಅದೇ ಬಜಾಜ್‌ ಚೇತಕ್‌, ಇದೀಗ ಹೊಸ ರೂಪದೊಂದಿಗೆ ರೀ ಲಾಂಚ್‌ ಆಗುತ್ತಿದೆ!

Advertisement

ಭಾರತೀಯ ದ್ವಿಚಕ್ರ ಸವಾರರ ಮನದಲ್ಲಿ ಬಜಾಜ್‌ ಚೇತಕ್‌ಗೆ ಯಾವತ್ತಿಗೂ ಕ್ಲಾಸಿಕ್‌ ಸ್ಥಾನ ಇದ್ದೇ ಇರುತ್ತದೆ. ಹಳೇ ಸಿನಿಮಾಗಳಲ್ಲಷ್ಟೇ ಅಲ್ಲ, ತೀರಾ 15-20 ವರ್ಷಗಳ ಹಿಂದೆಯೂ ಬಜಾಜ್‌ ಚೇತಕ್‌ ಸ್ಕೂಟರ್‌ ಮಧ್ಯಮ ವರ್ಗದವರಲ್ಲಿ ಅಂಥ ಹುಚ್ಚನ್ನೇ ಹಿಡಿಸಿತ್ತು. ಅದಕ್ಕೆ ಕಾರಣ, ಆ ಬೈಕಿನ ವಿನ್ಯಾಸ. ಆದರೆ, ಅದೇಕೋ ಗೊತ್ತಿಲ್ಲ, ಬಜಾಜ್‌ ಕಂಪನಿ, 14 ವರ್ಷಗಳ ಹಿಂದೆ ಈ ಬೈಕ್‌ನ ತಯಾರಿಕೆಯನ್ನೇ ನಿಲ್ಲಿಸಿಬಿಟ್ಟಿತ್ತು. ಬಳಿಕ ಹೊಸ ಮಾದರಿಯ ಸ್ಕೂಟರ್‌ಗಳ ಜಮಾನಕ್ಕೆ ತಿರುಗಿತ್ತು ಆ ಮಾತು ಬೇರೆ…

ಈಗ ಮತ್ತೆ 14 ವರ್ಷಗಳ ನಂತರ, ಬಜಾಜ್‌ ಚೇತಕ್‌ ಗಾಡಿಯನ್ನು ರೀ ಲಾಂಚ್‌ ಮಾಡಲಾಗುತ್ತಿದೆ. ಆದರೆ, ಬಜಾಜ್‌ ಚೇತಕ್‌ ಹಿಂದಿನ ರೀತಿಯಲ್ಲಿ ಪೆಟ್ರೋಲ್‌ ಗಾಡಿಯಾಗಿ ಬರುತ್ತಿಲ್ಲ. ಬದಲಾಗಿ, ಎಲೆಕ್ಟ್ರಿಕ್‌ ಮಾದರಿಯಲ್ಲಿ ಮಾರುಕಟ್ಟೆಗೆ ಪರಿಚಯಿಸಲ್ಪಡುತ್ತಿದೆ.

ಮಾರುಕಟ್ಟೆ ಪ್ರವೇಶ ಯಾವತ್ತು?
ವಿಶೇಷವೆಂದರೆ, ಸೆ.25 ರಿಂದಲೇ ಈ ಗಾಡಿಯ ಉತ್ಪಾದನೆ ಆರಂಭವಾಗಿದೆ. ಅಧಿಕೃತವಾಗಿ 2020ರ ಜನವರಿಯಲ್ಲಿ, ಪುಣೆಯಲ್ಲಿ ಈ ಸ್ಕೂಟರ್‌ ಲಾಂಚ್‌ ಆಗಲಿದೆ. ಇದಾದ ನಂತರ, ಬೆಂಗಳೂರಿನಲ್ಲಿ ಅನಾವರಣ ಮಾಡಲಿದ್ದೇವೆ ಎಂದು ಬಜಾಜ್‌ ಆಟೋ ಕಂಪನಿಯ ಎಂ.ಡಿ ರಾಜೀವ್‌ ಬಜಾಜ್‌ ಹೇಳಿದ್ದಾರೆ. ಮೊದಲಿಗೆ ಈ ಎರಡು ನಗರಗಳಲ್ಲಿ ಸ್ಕೂಟರನ್ನು ಪ್ರಯೋಗಾತ್ಮಕವಾಗಿ ಓಡಿಸಿ, ಬಳಿಕ ಉಳಿದ ನಗರಗಳಿಗೂ ವಿಸ್ತರಣೆ ಮಾಡಲಿದ್ದೇವೆ ಎಂದಿದ್ದಾರೆ ಅವರು.

ರೆಟ್ರೊ ವಿನ್ಯಾಸ
ಈ ಸ್ಕೂಟರ್‌, ಹೊಸ ವಿನ್ಯಾಸದೊಂದಿಗೆ ಡಿಸೈನ್‌ನೊಂದಿಗೆ ಮಾರುಕಟ್ಟೆಗೆ ಪ್ರವೇಶ ಮಾಡಲಿದೆ. ನಿಯೋ ರೆಟ್ರೋ ಮಾದರಿಯಲ್ಲಿ ಮೆಟಲ್‌ ಬಾಡಿ ಜತೆಗೆ ಸ್ಕೂಟರ್‌ಅನ್ನು ಸಿದ್ಧ ಪಡಿಸಲಾಗಿದೆ. 12 ಇಂಚಿನ ಅಲಾಯ್‌ ವೀಲ್‌ ಇದೆ. ಎಲ್‌ಇಡಿ ಹೆಡ್‌ಲೈಟ್‌ ಹಾಗೂ ಸಾಲಿಂಗ್‌ ಎಲ್‌ಇಡಿ ಬ್ಲಿಂಕರ್ಗಳಿವೆ. ರೆಟ್ರೋ ಸ್ಟೈಲ್‌ ನ ಡಿಜಿಟಲ್‌ ಮೀಟರ್‌ಅನ್ನು ಅಳವಡಿಸಲಾಗಿದೆ. ಈ ಬೈಕು, ಇತರೆ ಎಲೆಕ್ಟ್ರಿಕ್‌ ಬೈಕುಗಳಿಗಿಂತ ಭಿನ್ನವಾಗಿರಲಿದೆ.

Advertisement

ಫಾಸ್ಟ್‌ ಚಾರ್ಜಿಂಗ್‌
ಸದ್ಯದ ಮಾಹಿತಿಯ ಪ್ರಕಾರ, ಐಪಿ67 ಶ್ರೇಣಿಯ ಅತ್ಯಂತ ಹೆಚ್ಚು ತಾಂತ್ರಿಕತೆಯುಳ್ಳ ಲಿಥಿಯಂ-ಇಯಾನ್‌ ಬ್ಯಾಟರಿ, ಜತೆಗೆ ನಿಕ್ಕೆಲ್‌ ಕೋಬಾಲ್ಟ… ಅಲ್ಯೂಮಿನಿಯಂ ಆಕ್ಸೆçಡ್‌ ಸೆಲ್‌ಗ‌ಳನ್ನು ಬಳಕೆ ಮಾಡಲಾಗಿದೆ. ಇವುಗಳನ್ನು ಸ್ವಾಪ್‌ ಮಾಡಲು ಸಾಧ್ಯವಿಲ್ಲ. ಅಂದರೆ ಇವು ರಿಮೂವೆಬಲ್‌ ಬ್ಯಾಟರಿಗಳಲ್ಲ. ಸಂಸ್ಥೆ ಹೇಳಿಕೊಂಡಿರುವಂತೆ ಅತ್ಯಂತ ವೇಗವಾಗಿ ಚಾರ್ಜ್‌ ಆಗುವ ಗುಣ ಹೊಂದಿರುವುದೇ ಈ ಬ್ಯಾಟರಿಗಳ ಹೆಗ್ಗಳಿಕೆ. ಹಾಗೆಯೇ, ಇದರಲ್ಲಿ ಸ್ಪೋರ್ಟ್ಸ್ ಮತ್ತು ಎಕಾನಮಿ ಎಂಬ ಎರಡು ಮಾದರಿಗಳಿವೆ. ಎಕಾನಮಿಯಲ್ಲಿ ಒಮ್ಮೆ ಚಾರ್ಜ್‌ ಮಾಡಿದರೆ 100 ಕಿ.ಮೀ. ಓಡಿಸಬಹುದು ಎಂದು ಹೇಳಲಾಗುತ್ತಿದೆ.

ಬೆಲೆ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಜನವರಿಯಲ್ಲಿ ಪುಣೆಯಲ್ಲಿ ಲಾಂಚ್‌ ಮಾಡುವಾಗಲೇ ಬೆಲೆಯನ್ನೂ ಘೋಷಿಸುವುದಾಗಿ ಹೇಳಲಾಗಿದೆ. ಆದರೂ, 1.5 ಲಕ್ಷ ರೂ.ಗಳ ಒಳಗೆಯೇ ದರವನ್ನು ಫಿಕ್ಸ್ ಮಾಡಲಾಗುತ್ತದೆ ಎಂದು ರಾಜೀವ್‌ ಬಜಾಜ್‌ ಹೇಳಿದ್ದಾರೆ. ಮಾರುಕಟ್ಟೆಯ ತಜ್ಞರ ಪ್ರಕಾರ ಇದರ ಬೆಲೆ ಸುಮಾರು 1.25 ಲಕ್ಷ ರೂ.ಗಳಿರಬಹುದು.

ಸಿವಿಟಿ ಮಾದರಿಯಲ್ಲಿ ಡಟ್ಸನ್‌
ಇದು ಫೇಸ್‌ ಲಿಫ್ಟ್ ನ ಕಾಲ. ಈಗಾಗಲೇ ಹಲವಾರು ಕಾರುಗಳು ಮತ್ತೂಂದಿಷ್ಟು ಸವಲತ್ತುಗಳನ್ನು ತುಂಬಿಕೊಂಡು ಮಾರುಕಟ್ಟೆ ಪ್ರವೇಶಿಸಿವೆ. ಇದೀಗ ನಿಸ್ಸಾನ್‌ ಸರದಿ. ಇದು, ಡಟ್ಸನ್‌ ಗೊ ಮತ್ತು ಗೊ+ನಲ್ಲಿ ಸಿವಿಟಿ ಎಂಬ ಜಪಾನ್‌ ತಂತ್ರಜ್ಞಾನವನ್ನು ಸೇರಿಸಿಕೊಂಡು ಮತ್ತೆ ಮಾರುಕಟ್ಟೆಗೆ ಪರಿಚಯಿಸಿದೆ. ಸಿವಿಟಿ ತಂತ್ರಜ್ಞಾನವು ಎಎಂಟಿ ತಂತ್ರಜ್ಞಾನಕ್ಕಿಂತಲೂ ಚೆನ್ನಾಗಿದ್ದು, ಈ ರೇಂಜಿನ ಕಾರುಗಳಲ್ಲಿ ಇದೇ ಮೊದಲ ಬಾರಿಗೆ ಬಳಕೆಯಾಗುತ್ತಿದೆ. ಸಿವಿಟಿಯಲ್ಲಿ ಕಡಿಮೆ ಪೆಟ್ರೋಲ್‌ ಬಳಕೆ ಮತ್ತು ಕಡಿಮೆ ಹೊಗೆ ಉಗುಳುತ್ತದೆ. ಹೀಗಾಗಿ ಡ್ರೈವರ್‌ಗೆ ಹೊಸ ರೀತಿಯ ಫೀಲ್‌ ಸಿಕ್ಕುತ್ತದೆ. ಜತೆಗೆ, 7 ಇಂಚಿನ ಇನ್ಫೋಟೈನ್‌ಮೆಂಟ್‌, ವಾಯ್ಸ ರೆಕಗ್ನೆ„ಸಿಂಗ್‌ ಸಿಸ್ಟಮ್‌(ಧ್ವನಿ ಪತ್ತೆ ಪಚ್ಚುವ ತಂತ್ರಜ್ಞಾನ), ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್‌ ಕಾರ್‌ ಪ್ಲೇ ಸೌಲಭ್ಯವೂ ಇದೆ. ಎಕ್ಸ್‌ ಶೋರೂಂ ಬೆಲೆ 5.94 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ.

-ಸೋಮಶೇಖರ ಸಿ.ಜೆ.

Advertisement

Udayavani is now on Telegram. Click here to join our channel and stay updated with the latest news.

Next