Advertisement

ಮಂಗಳೂರು: ಹೊಸ ಹೆಲಿಪ್ಯಾಡ್‌ನ‌ಲ್ಲಿ ಯಶಸ್ವಿ ಕಾರ್ಯಾಚರಣೆ

11:06 PM May 03, 2023 | Team Udayavani |

ಮಂಗಳೂರು/ ಮೂಲ್ಕಿ: ಒಂದು ಕಡೆ ಹೆದ್ದಾರಿ, ಇನ್ನೊಂದು ಕಡೆ ಕೈಗಾರಿಕಾ ಪ್ರದೇಶ, ಜತೆಗೆ ಸುತ್ತಮುತ್ತ ಜನವಸತಿಯೂ ಇರುವ ಪ್ರದೇಶ. ಇವೆಲ್ಲದರ ನಡುವೆಯೇ ನಿರ್ಮಿಸಲಾದ ಹೆಲಿಪ್ಯಾಡ್‌ನ‌ಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್‌ ಸೇರಿದಂತೆ ಒಟ್ಟು 3 ಹೆಲಿಕಾಪ್ಟರ್‌ಗಳ ಯಶಸ್ವಿ ಕಾರ್ಯಾಚರಣೆ ನಡೆಯಿತು.

Advertisement

ಪೈಲಟ್‌ಗಳು ಯಾವುದೇ ಸಮಸ್ಯೆ ಯಾಗದಂತೆ ಹೆಲಿಕಾಪ್ಟರ್‌ಗಳನ್ನು ಇಳಿಸಿ ಟೇಕಾಫ್‌ ಮಾಡಿದರು. ಮೂರು ಕಡೆಗಳಲ್ಲಿ ಹೆಲಿಪ್ಯಾಡ್‌ಗಳನ್ನು ಸಿದ್ಧಗೊಳಿಸಲಾಗಿತ್ತು. ಒಂದು ಸಮಾವೇಶ ಸ್ಥಳದಿಂದ 500 ಮೀ. ದೂರದಲ್ಲಿರುವ ಕೊಲಾ°ಡಿನ ಕೃಷಿ ಮೇಳ ಮೈದಾನದಲ್ಲಿ. ಇನ್ನೆರಡು ಎನ್‌ಎಂ ಪಿಎ ಮತ್ತು ಎನ್‌ಐಟಿಕೆ ಮೈದಾನ. ಎಸ್‌ಪಿಜಿಯವರು ಮೊದಲೇ ಪರಿಶೀಲನೆ ನಡೆಸಿ ಕೊಲಾ°ಡಿನ ಹೆಲಿಪ್ಯಾಡ್‌ ಸಭಾಂಗಣಕ್ಕೆ ಹತ್ತಿರ ಮತ್ತು ಲ್ಯಾಂಡಿಂಗ್‌ಗೆ ಸೂಕ್ತ ಎಂದು ಸೂಚಿಸಿದ್ದ ಹಿನ್ನೆಲೆಯಲ್ಲಿ ಅಲ್ಲಿಯೇ ಲ್ಯಾಂಡಿಂಗ್‌ಗೆ ಅನುಕೂಲ ಮಾಡಿದ್ದರು.

ಮೋದಿ ಅವರಿಗಾಗಿ ತಾತ್ಕಾಲಿಕವಾಗಿ ನಿರ್ಮಿಸಲಾದ ಹೆಲಿಪ್ಯಾಡ್‌ ಆಗಿದ್ದರೂ ಸುಸಜ್ಜಿತವಾಗಿತ್ತು. ಸ್ಥಳದಲ್ಲಿ ಎರಡು ಅಗ್ನಿಶಾಮಕ ವಾಹನಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿತ್ತು. ಹೆಲಿಕಾಪ್ಟರ್‌ ಇಳಿಯುವಾಗ ಧೂಳು ಏಳದಂತೆ ತಡೆಯುವ ನಿಟ್ಟಿನಲ್ಲಿ ಟ್ಯಾಂಕರ್‌ನಲ್ಲಿ ನೀರು ಹಾಯಿಸಲಾಯಿತು. ಲ್ಯಾಂಡಿಂಗ್‌ ಮತ್ತು ಟೇಕಾಫ್‌ ಆಗುವಾಗ ಪೈಲಟ್‌ಗಳಿಗೆ ಗಾಳಿಯ ದಿಕ್ಕು ತಿಳಿಯಲು ಸ್ಥಳದಲ್ಲಿ “ವಿಂಡ್‌ ಸಾಕ್‌’ ಅಳವಡಿಸಲಾಗಿತ್ತು. ಮೋದಿಯವರ ಬಂದಿದ್ದ ಹೆಲಿಕಾಪ್ಟರ್‌ಗೆ ಇಂಡಿಯನ್‌ ಆಯಿಲ್‌ ಏವಿಯೇಶನ್‌ ಟ್ಯಾಂಕರ್‌ ಮೂಲಕ ಹೆಲಿಪ್ಯಾಡ್‌ನ‌ಲ್ಲೇ ಇಂಧನವನ್ನೂ ತುಂಬಿಸಲಾಯಿತು.

ಮೂರನೇ ಹೆಲಿಕಾಪ್ಟರ್‌ನಲ್ಲಿ ಮೋದಿ
ಲ್ಯಾಂಡಿಂಗ್‌ ಆದ 3 ಹೆಲಿಕಾಪ್ಟರ್‌ಗಳ ಪೈಕಿ ಮೊದಲ ಹೆಲಿಕಾಪ್ಟರ್‌ನಲ್ಲಿ ಮೋದಿಯವರ ಛಾಯಾಚಿತ್ರಗ್ರಾಹಕರು, ಇತರ ಆಪ್ತ ಸಿಬಂದಿ ಬಂದಿಳಿದರು. ಬಳಿಕ ಆ ಹೆಲಿಕಾಪ್ಟರ್‌ ಸ್ಥಳದಿಂದ ನಿರ್ಗಮಿಸಿತು. ಅನಂತರದ ಹೆಲಿಕಾಪ್ಟರ್‌ ಹೆಚ್ಚುವರಿ (ಸ್ಪೇರ್‌) ಆಗಿದ್ದ ಕಾರಣ ಪೈಲಟ್‌ ಮಾತ್ರ ಇದ್ದರು. ಕೊನೆಯದಾಗಿ ಮೋದಿಯವರಿದ್ದ ಝಡ್‌ಪಿ 5230 ಹೆಲಿಕಾಪ್ಟರ್‌ ಆಗಮಿಸಿತು. ಮೊದಲಿನ ಹೆಲಿಕಾಪ್ಟರ್‌ ಮತ್ತೆ ಬಂದು ಲ್ಯಾಂಡ್‌ ಆಯಿತು. ಸಮಾವೇಶ ಮುಗಿದ ಬಳಿಕ ಮೂರು ಕೂಡ ನಿರ್ಗಮಿಸಿದವು.

ಎಸ್‌ಪಿಜಿ, ಪೊಲೀಸರಿಂದ ನಿಯಂತ್ರಣ
ಹೆಲಿಪ್ಯಾಡ್‌ನ‌ ಸುತ್ತಮುತ್ತಲಿನ ಪ್ರದೇಶವನ್ನು ಎಸ್‌ಪಿಜಿ ಮತ್ತು ಸ್ಥಳೀಯ ಪೊಲೀಸರು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದರು. ಸುತ್ತಲೂ ಪೊಲೀಸರನ್ನು ನಿಯೋಜಿಸಲಾಗಿತ್ತು. ನಾಲ್ಕು ಮಂದಿ ಬ್ಲ್ಯಾಕ್‌ ಕ್ಯಾಟ್‌ ಸಿಬಂದಿ ಬೈನಾಕ್ಯುಲರ್‌ ಮೂಲಕ ಹೆಲಿಪ್ಯಾಡ್‌ನ‌ ಸುತ್ತಲೂ ಆಗಾಗ ಪರಿಶೀಲಿಸುತ್ತಿದ್ದರು. ಹೆಲಿಪ್ಯಾಡ್‌ ಪಾಸ್‌ ಇದ್ದವರಿಗಷ್ಟೇ ಸುತ್ತಮುತ್ತ ಅಡ್ಡಾಡಲು ಅವಕಾಶವಿತ್ತು. ಹೆದ್ದಾರಿಯಲ್ಲಿ ಸಮಾವೇಶಕ್ಕೆ ಬರುತ್ತಿದ್ದ ಜನರನ್ನು ಸ್ವಲ್ಪ ಹೊತ್ತು ನಿಲ್ಲಲೂ ಪೊಲೀಸರು ಅವಕಾಶ ನೀಡುತ್ತಿರಲಿಲ್ಲ. ಆಗಾಗ್ಗೆ ಟ್ರಾಫಿಕ್‌ ಪೊಲೀಸರು ವಾಹನದಲ್ಲಿ ಅನೌನ್ಸ್‌ ಮಾಡಿ ಜನರನ್ನು ಸಮಾವೇಶ ಸ್ಥಳಕ್ಕೆ ಕಳುಹಿಸುತ್ತಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next