Advertisement

ಪ್ರಾಥಮಿಕ ತರಗತಿ ಆರಂಭಕ್ಕೆ ಮಾರ್ಗಸೂಚಿ

10:08 PM Oct 21, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ 1ರಿಂದ 5ನೇ ತರಗತಿ (ಪ್ರಾಥಮಿಕ ಶಾಲೆ)ಗಳನ್ನು ಅ. 25ರಿಂದ ಆರಂಭಿಸಲು ಬೇಕಾದ ಮಾರ್ಗಸೂಚಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿದ್ದು, ವಿದ್ಯಾರ್ಥಿಗಳ ಪ್ರತ್ಯೇಕ ತಂಡ ರಚಿಸಿ ಬೋಧನೆ ಮಾಡಬೇಕು ಮತ್ತು 50 ವರ್ಷ ಮೇಲ್ಪಟ್ಟ ಶಿಕ್ಷಕರು ಕಡ್ಡಾಯವಾಗಿ ಫೇಸ್‌ಶೀಲ್ಡ್‌ ಧರಿಸಬೇಕೆಂದು ಸೂಚಿಸಿದೆ.

Advertisement

ನ. 2ರಿಂದ ಶಾಲೆಗಳಲ್ಲಿ ಬಿಸಿಯೂಟ ನೀಡಲಾಗುತ್ತದೆ. ಮಕ್ಕಳು ಬಿಸಿನೀರು ಮನೆಯಿಂದಲೇ ತರುವುದು ಉತ್ತಮ. ಅ. 25ರಿಂದ 30ರ ವರೆಗೆ ಸರಕಾರಿ, ಅನುದಾನಿತ, ಖಾಸಗಿ ಶಾಲೆಗಳು ವಿದ್ಯಾರ್ಥಿಗಳ ತಂಡ ರಚನೆ ಮಾಡಿ ಅರ್ಧ ದಿನ ಮಾತ್ರ ಭೌತಿಕ ತರಗತಿಗಳು ನಡೆಸಬೇಕಿದೆ. ನ. 2ರಂದು ಪೂರ್ಣ ಪ್ರಮಾಣದಲ್ಲಿ ತರಗತಿ ಆರಂಭಿಸಬೇಕು. 1ರಿಂದ 5ನೇ ತರಗತಿಯ ಎಲ್ಲ ವಿದ್ಯಾರ್ಥಿಗಳ ಭೌತಿಕ ಹಾಜರಾತಿ ಕಡ್ಡಾಯವಲ್ಲ. ಶಾಲೆಗೆ ಹಾಜರಾಗುವ ವಿದ್ಯಾರ್ಥಿಗಳು ಪಾಲಕರಿಂದ ಒಪ್ಪಿಗೆ ಪತ್ರ ಕಡ್ಡಾಯವಾಗಿ ತರಬೇಕು ಎಂದು ನಿರ್ದೇಶಿಸಿದೆ.

ವಿದ್ಯಾರ್ಥಿಗಳು, ಶಿಕ್ಷಕರು, ಸಿಬಂದಿ ವರ್ಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಶಿಕ್ಷಕರು ಕಡ್ಡಾಯವಾಗಿ ಎರಡು ಡೋಸ್‌ ಲಸಿಕೆ ಪಡೆದಿರಬೇಕು. ಶಾಲೆಯಲ್ಲಿ ಬಿಸಿನೀರಿನ ವ್ಯವಸ್ಥೆ ಮಾಡಬೇಕು. ಒಂದೂವರೆ ವರ್ಷದ ಅನಂತರ ಭೌತಿಕ ತರಗತಿ ಆರಂಭವಾಗುತ್ತಿರುವುದರಿಂದ ಮೊದಲ ವಾರ ಸೇತುಬಂಧಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದೆ.

ಗರಿಷ್ಠ 20 ಮಕ್ಕಳ ತಂಡ ರಚನೆ ಮಾಡಬೇಕು. ಮಕ್ಕಳಲ್ಲಿ ದಿಢೀರ್‌ ಅಸ್ವಸ್ಥತೆ ಅಥವಾ ರೋಗ ಲಕ್ಷಣ ಇದ್ದರೆ, ಪ್ರತ್ಯೇಕ ಕೊಠಡಿ ವ್ಯವಸ್ಥೆ ಕಲ್ಪಿಸಿ, ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ  ಚಿಕಿತ್ಸೆಗೆ ಸೂಚಿಸಬೇಕು. ತರಗತಿಗಳನ್ನು ಆಗಿಂದಾಗೇ ಸ್ಯಾನಿಟೈಸ್‌ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.

ಪ್ರಾಥಮಿಕ ತರಗತಿ ವೇಳಾಪಟ್ಟಿ :

Advertisement

ಅ.25ರಿಂದ 30ರ ವರೆಗೆ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 10ರಿಂದ ಅಪರಾಹ್ನ 1.30ರ ವರೆಗೆ ಹಾಗೂ ಶನಿವಾರ ಬೆಳಗ್ಗೆ 8ರಿಂದ 11.40ರ ವರೆಗೆ ತರಗತಿಗಳನ್ನು ನಡೆಸಬೇಕು. ನ.2ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 10.30ರಿಂದ ಸಂಜೆ 4.30ರ ವರೆಗೆ ಹಾಗೂ ಶನಿವಾರ ಬೆಳಗ್ಗೆ 8ರಿಂದ 11.40ರ ವರೆಗೆ ತರಗತಿ ನಡೆಸಲು ಸೂಚನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next