Advertisement
ಹವಾಮಾನ ವೈಪರಿತ್ಯ, ರೋಗ ರುಜಿನದಿಂದ ಬಾಯ್ಲರ್ ಕೋಳಿಗಳ ಮೃತ್ಯು ದರ ಹೆಚ್ಚಾಗುತ್ತಿದ್ದರಿಂದ ಮಧ್ಯಪ್ರದೇಶದ ಸ್ಥಳೀಯ ತಳಿ ಕಡಕನಾಥ ತಳಿ ಕೋಳಿ ಬೆಳೆಸಲು ಮುಂದಾಗಿದ್ದಾರೆ. ಮಧ್ಯಪ್ರದೇಶದಲ್ಲಿ ಜಾಬುವಾ ಜಿಲ್ಲೆಯಲ್ಲಿ ಆದಿವಾಸಿಗಳು ಇದನ್ನು ಬೆಳೆಸುತ್ತಿದ್ದು, ಮಧ್ಯಪ್ರದೇಶ ಸರಕಾರ ಕಡಕನಾಥ ಕೋಳಿ ಮಾಂಸ ಹಾಗೂ ಮೊಟ್ಟೆಯಲ್ಲಿನ ವಿಶೇಷತೆ ಪರಿಗಣಿಸಿ ಅದನ್ನು ವಿಸ್ತರಿಸಿ ರಾಜ್ಯಾದ್ಯಂತ ಪಸರಿಸಿತು. ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ ಮೊದಲಾದೆಡೆ ಕಡಕನಾಥ ತಳಿಯನ್ನೇ ಹೆಚ್ಚಾಗಿ ಬೆಳೆಸಲಾಗುತ್ತಿದ್ದು, ಈಗ ಕರ್ನಾಟಕದಲ್ಲಿಯೂ ಇದರ ಫಾರ್ಮ್ ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವರು ದೊಡ್ಡ ಮಟ್ಟದಲ್ಲಿ ಬೆಳೆಸುತ್ತಿದ್ದರೆ, ಇನ್ನು ಸಣ್ಣ ರೈತರು ಹಿತ್ತಲದಲ್ಲಿ ಸಾಕಣೆ ಮಾಡುತ್ತಿದ್ದಾರೆ.
Related Articles
Advertisement
ಇದಕ್ಕಿದೆ ಔಷಧೀಯ ಗುಣ: ಔಷಧೀಯ ಗುಣದಿಂದಾಗಿ ಈ ಕೋಳಿಯ ಮಾಂಸ 700ರಿಂದ 800ರೂ. ಪ್ರತಿ ಕೆಜಿಗೆ ಬಿಕರಿಯಾದರೆ, ಮೊಟ್ಟೆ 20ರಿಂದ 40 ರೂ.ಗೆ ಮಾರಾಟವಾಗುತ್ತವೆ. ಕಡಕನಾಥ ಕೋಳಿ ಮಾಂಸದಲ್ಲಿ ಕಬ್ಬಿಣಾಂಶ ಹೆಚ್ಚಾಗಿದ್ದರಿಂದ ಇದು ಕಪ್ಪಾಗಿರುತ್ತದೆ. ಇದರಲ್ಲಿ ಆರೋಗ್ಯಕ್ಕೆ ಪೂರಕ ಅಂಶಗಳಿರುವುದರಿಂದ ಬೆಲೆ ಹೆಚ್ಚಾಗಿದೆ. ಇತರ ಕೋಳಿಗಳಿಗೆ ಹೋಲಿಸಿದರೆ
ಇದರಲ್ಲಿ ಪ್ರೋಟೀನ್ ಹೆಚ್ಚಾಗಿದ್ದು, ಕೊಬ್ಬು ಹಾಗೂ ಕೊಲೆಸ್ಟ್ರಾಲ್ ಪ್ರಮಾಣ ಅತಿ ಕಡಿಮೆ ಇರುತ್ತದೆ. ಇದರ ಮಾಂಸದಲ್ಲಿ ಬಿ1, ಬಿ2, ಬಿ6 ಹಾಗೂ ಬಿ12 ಸಿ, ಇರುವುದು ವಿಶೇಷ. ಕ್ಯಾಲಿÏಯಂ, ಮೆಲೆನಿನ್ ಪ್ರಮಾಣ ಹೇರಳವಾಗಿದೆ. ಕಡಕನಾಥ ಚಿಕನ್ ರೋಗನಿರೋಧಕ ಗುಣ ಹೊಂದಿದೆ. ವಿವಿಧ ರಾಜ್ಯಗಳ ಕ್ರೀಡಾನಿಲಯಗಳಲ್ಲಿ ಕಡಕನಾಥ ಮೊಟ್ಟೆ ಹಾಗೂ ಚಿಕನ್ ನೀಡಲಾಗುತ್ತದೆ.
ಕಾನೂನು ಸಮರದಿಂದ ಮೂಲ ಹುಡುಕಾಟ!: ಕಡಕನಾಥ ಕೋಳಿಯ ಮೂಲದ ಬಗ್ಗೆ ಮಧ್ಯಪ್ರದೇಶ ಹಾಗೂ ಛತ್ತೀಸಗಡ ರಾಜ್ಯಗಳ ಮಧ್ಯೆ ಕಾನೂನು ಸಮರವೇ ನಡೆಯಿತು. ಕೊನೆಗೆ ಈ ತಳಿ ಮಧ್ಯಪ್ರದೇಶದ್ದೆಂದು ತೀರ್ಮಾನವಾಯಿತು. ನಂತರ ಕಡಕ್‌ನಾಥ ಕೋಳಿಯ ಮಹತ್ವ ಅರಿತ ಮಧ್ಯಪ್ರದೇಶ ಸರಕಾರ ಕೋಳಿಗಳ ಸಂಖ್ಯೆ ಹೆಚ್ಚಿಸಿತಲ್ಲದೇ ಇದರ ಮಾಂಸ–ಮೊಟ್ಟೆಗೆ ರಾಜ್ಯದಲ್ಲಿ ಮಾರುಕಟ್ಟೆ ಒದಗಿಸಲು ಯೋಜನೆ ರೂಪಿಸಿತು. ರಾಜ್ಯಾದ್ಯಂತ ಫ್ರಾಂಚೈಸಿ ಮೂಲಕ ಚಿಕನ್ ಮಾರಾಟದ ಮಳಿಗೆಗಳನ್ನು ಆರಂಭಿಸಲಾಯಿತು. ಇದರ ಮಾರುಕಟ್ಟೆ ವಿಸ್ತರಿಸಿದ ನಂತರ ಇತರ ರಾಜ್ಯಗಳಲ್ಲಿ ಕಡಕ್‌ನಾಥ ಪಾಲನೆ ಹೆಚ್ಚಾಗುತ್ತಿದೆ.
ಬಹು ಲಾಭದಾಯಕ ಕೋಳಿ: ನಾನು ಕೆಲವು ವರ್ಷಗಳಿಂದ ಬಾಯ್ಲರ್ ಫಾರ್ಮ್ ಮಾಡುತ್ತಿದ್ದೆ. ಆದರೆ ಇದರಿಂದ ನಿರೀಕ್ಷಿತ ಲಾಭ ಸಿಗಲಿಲ್ಲ. ಆದ್ದರಿಂದ ಕಳೆದ 1 ವರ್ಷದಿಂದ ಕಡಕನಾಥ ಕೋಳಿ ಸಾಕಣೆ ಮಾಡುತ್ತಿದ್ದು, ಉತ್ತಮ ಆದಾಯ ಸಿಗುತ್ತಿದೆ. ಕಡಕನಾಥ ಕೋಳಿಗಳು ಮೊಟ್ಟೆಗಳನ್ನು ಮರಿ ಮಾಡಲ್ಲ. ನಾಟಿ ಕೋಳಿಗಳ ಬುಡಕ್ಕೆ ಕಡಕನಾಥ ಮೊಟ್ಟೆಗಳನ್ನಿಡುವುದರಿಂದ ಅವು ಮರಿ ಮಾಡಿ ಬೆಳೆಸುತ್ತವೆ. ಕಡಕನಾಥ ಕೋಳಿಯ ಮಹತ್ವ ಗೊತ್ತಿದ್ದವರು ಇದನ್ನು ಖರೀದಿಸುತ್ತಾರೆ. ನಾನು ಮೊಟ್ಟೆಗಳನ್ನು ಬೆಂಗಳೂರಿಗೆ ಕಳಿಸುತ್ತಿದ್ದೇನೆ. ಪ್ರತಿ ಮೊಟ್ಟೆಗೆ 38ರೂ. ಸಿಗುತ್ತಿದೆ. ಅಮೆಜಾನ್‌ನಲ್ಲಿ ಕಡಕನಾಥ ಮೊಟ್ಟೆ 80 ರೂ.ಗೊಂದರಂತೆ ಮಾರಾಟವಾಗುತ್ತಿದೆ ಎನ್ನುತ್ತಾರೆ ಕುಕ್ಕುಟೋದ್ಯಮಿ ಉದಯ.
–ವಿಶ್ವನಾಥ ಕೋಟಿ