ಬೆಂಗಳೂರು: ಲೋಕಸಭೆ ಸಹಿತ ಮುಂದೆ ಬರಲಿರುವ ಸರಣಿ ಚುನಾವಣೆಗಳ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ವಿಜಯ ದಶಮಿ ಹಬ್ಬದ ಬಳಿಕ ಹೊಸ ಪಡೆ ರಚನೆಯಾಗುವ ಸಾಧ್ಯತೆಗಳು ಹೆಚ್ಚಿವೆ.
ಪಕ್ಷ ಸಂಘಟನೆ ಜತೆಗೆ ಚುನಾವಣೆಯ ಸಮರ್ಥ ನಿರ್ವಹಣೆ ಹಾಗೂ ಸರಕಾರದ ವಿವಿಧ ಗ್ಯಾರಂಟಿ ಯೋಜನೆಗಳ ಬಗ್ಗೆ ಮನೆ ಮನೆಗೆ ತೆರಳಿ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಕೆಪಿಸಿಸಿ ರೂಪಿಸಲಿರುವ ಹೊಸ ಹೊಸ ಕಾರ್ಯಕ್ರಮಗಳ ಜಾರಿಗೆ ಹೊಸ ಮುಖಗಳ ಶೋಧ ನಡೆದಿದೆ. ಸದ್ಯ ಜೆಂಬೋಜೆಟ್ ಗಾತ್ರದಂತಿರುವ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿಗೆ ಮೇಜರ್ ಸರ್ಜರಿ ಆಗಲಿದ್ದು, ಕಾರ್ಯಾಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳ ಪಟ್ಟಿಯಲ್ಲಿ ಬಹುತೇಕ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ.
ಸದ್ಯ ಕೆಪಿಸಿಸಿಯಲ್ಲಿ ಐವರು ಕಾರ್ಯಾಧ್ಯಕ್ಷರಿದ್ದು, ಅವರಲ್ಲಿ ಮೂವರು ಸಚಿವರು ಹಾಗೂ ಒಬ್ಬರು ವಿಧಾನ ಪರಿಷತ್ತಿನ ಸರಕಾರಿ ಮುಖ್ಯ ಸಚೇತಕರಾಗಿದ್ದಾರೆ. ಪ್ರಸ್ತುತ ಕಾರ್ಯಾಧ್ಯಕ್ಷರಾಗಿರುವ ಸಚಿವರಾದ ರಾಮಲಿಂಗಾ ರೆಡ್ಡಿ, ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ ಹಾಗೂ ಮುಖ್ಯ ಸಚೇತಕ ಸಲೀಂ ಅಹ್ಮದ್ ಬದಲಿಗೆ ಹೊಸಬರ ನೇಮಕಗೊಳ್ಳುವ ಸಾಧ್ಯತೆಗಳಿವೆ. ಮತ್ತೂಬ್ಬ ಕಾರ್ಯಾಧ್ಯಕ್ಷ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮುಂದುವರಿಯಲಿದ್ದಾರೆ.
ಹೊಸದಾಗಿ ನೇಮಕಗೊಳ್ಳಲಿರುವ ಕಾರ್ಯಾಧ್ಯಕ್ಷ ಸ್ಥಾನಗಳಿಗೆ ಕಾಂಗ್ರೆಸ್‌ನ ಹಿರಿಯ ನಾಯಕ ಡಾ| ಬಿ.ಎಲ್.ಶಂಕರ್ ಅಥವಾ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ಶಾಸಕರಾದ ತನ್ವೀರ್ ಸೇs…, ವಿನಯ ಕುಲಕರ್ಣಿ ಅವರ ಹೆಸರು ಕೇಳಿ ಬರುತ್ತಿವೆ. ಜತೆಗೆ 20ರಿಂದ 25 ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಬದಲಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.