2010ರ ಬೇಸಿಗೆ ರಜೆಯ ದಿನಗಳವು. ಗ್ರಾಮ ಪಂಚಾಯತ್ ಚುನಾವಣೆಯ ಕಾವು ಎಲ್ಲೆಡೆ ಮನೆಮಾಡಿತ್ತು. ಚುನಾವಣೆಯ ಆದೇಶಗಳು ಬರುವುದರಿಂದ ಶಿಕ್ಷಕರಾರೂ ಕಾರ್ಯಕ್ಷೇತ್ರದಿಂದ ಹೊರಹೋಗುವಂತಿಲ್ಲ ಎಂಬ ಶಿಕ್ಷಣಾಧಿಕಾರಿಯ ಆದೇಶದ ಬಿಸಿ ಒಂದೆಡೆ. ಈ ಮಧ್ಯದಲ್ಲಿ ಸಮಯ ಮಾಡಿಕೊಂಡು ಒಂದೆರೆಡು ದಿನಗಳ ಮಟ್ಟಿಗಾದರೂ ಸ್ವಗ್ರಾಮಕ್ಕೆ ಹೋಗಿ ಬರಬೇಕೆಂಬ ತುಡಿತದಿಂದಾಗಿ ಯಾವುದನ್ನೂ ಲೆಕ್ಕಿಸದೆ ಕೊಪ್ಪಳದಿಂದ ನಮ್ಮೂರು ಸಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿಗೆ ಬಂದೇಬಿಟ್ಟಿದ್ದೆ. ಕೆಲ ಸಮಯ ಕುಟುಂಬಸ್ಥರು, ಸ್ನೇಹಿತರೊಡನೆ ಕಾಲ ಕಳೆಯೋಣವೆಂದು ಬಂದಿದ್ದ ನನಗೆ, “ಈ ಬಾರಿ ಮೊದಲಿನಂತೆ ಹೇಳುವ ಹಾಗೇ ಇಲ್ಲ. ಏನೇ ಆದ್ರೂ ಸರಿ ಈ ಹುಡುಗಿಯ ಮನೆಗೆ ಹೋಗಿ ನೋಡಿ ಹೋಗಬೇಕು’ ಎಂದು ಫೋಟೋವೊಂದನ್ನು ಹಿಡಿದು ಅಮ್ಮ ಖಡಕ್ಕಾಗಿ ಹೇಳಿಬಿಟ್ಟಳು. “ಅವನಿಗೇನು, ಇನ್ನೂ ಇಪ್ಪತ್ತು ಅಂದುಕೊಂಡಿದಾನಾ? ಕತ್ತೆಗಾಗೋಷ್ಟು ವಯಸ್ಸಾಗಿದೆ. ಇನ್ನೂ ಏನು ಮುದುಕ ಆದ್ಮೇಲೆ ನೋಡ್ತಾನಂತ ಹುಡುಗೀನಾ?’ ಎಂಬ ಅಪ್ಪನ ಎಚ್ಚರಿಕೆ ಬೇರೆ. ಈ ಹಿಂದೆಲ್ಲಾ ಬಹಳಷ್ಟು ಹುಡುಗೀರ ಫೋಟೊ ಹಿಡಿದು ಹಿಂದೆ ಬಿದ್ದವರನ್ನೆಲ್ಲಾ ನಾಜೂಕಾಗಿ ಸರಿಸಿದ್ದ ನನಗೆ ಈ ಬಾರಿ ಯಾಕೋ ಇದಕ್ಕೊಂದು ಮುಕ್ತಾಯ ಹಾಡಬೇಕೆನಿಸಿತು. ಮರುದಿನ ಬೆಳಗ್ಗೆಯೇ ನಮ್ಮ ಸಿಆರ್‌ಪಿಯಿಂದ ಚುನಾವಣಾದೇಶ ಬಂದಿರುವುದಾಗಿ ಫೋನ್ ಬಂತು. ಅದೇ ನೆಪವೊಡ್ಡಿ ಹೋಗೋಣವೆಂದರೆ ಮನೆಯವರ ಬೈಗುಳ ಕೇಳಬೇಕು. ಸರಿ ಮರುದಿನವೇ ಹೋಗಿ ಹುಡುಗಿ ನೋಡಿ ಬರುವುದಾಗಿ ತೀರ್ಮಾನಿಸಿ ಅಮ್ಮನಿಗೆ ತಿಳಿಸಿದೆ. ಅವರ ಮುಖದಲ್ಲಿನ ಖುಷಿ ವರ್ಣಿಸಲಾಗದು. ಬೆಳಗ್ಗೆ ಏಳುವಷ್ಟರಲ್ಲಿ ನಮ್ಮ ಚಿಕ್ಕಪ್ಪ ಕಾಫಿ ಕುಡೀತಾ ಕೂತಿದ್ದರು. ಅವರೂ ನನ್ನೊಡನೆ ಹುಡುಗಿ ಮನೆಗೆ ಬರುವವರಿದ್ದರು. ಸ್ನಾನ ಮುಗಿಸಿ ಮನೆಯ ವಿಳಾಸ ತಿಳಿದುಕೊಂಡು ಚಿಕ್ಕಪ್ಪನೊಂದಿಗೆ ಬೈಕಿನಲ್ಲಿ ಸಿರಾದ ಕಡೆಗೆ ಹೊರಟೆ. ಹುಡುಗಿ ಮನೆಯವರಿಗೆ ಅದಾಗಲೇ ನಾವು ಬರುವ ಸುದ್ದಿಯನ್ನು ನಮ್ಮಪ್ಪ ತಲುಪಿಸಿದ್ದರೇನೋ, ಮಾವನವರು ನಮ್ಮನ್ನು ಆದರದಿಂದ ಬರಮಾಡಿಕೊಂಡು ಕುಶಲೋಪರಿ ವಿಚಾರಿಸಿದರು. ಅಷ್ಟರಲ್ಲಿ ಅತ್ತೆಯವರು ಬಿಸಿ ಕಾಫಿ ಹಾಗೂ ಬಿಸ್ಕೇಟಿನೊಡನೆ ಬಂದು ಕಿರುನಕ್ಕರು. ಕಾಫಿ ಹೀರುತ್ತಾ ಹುಡುಗಿಯ ಬರುವಿಕೆಗಾಗಿ ಕಾದು ಕೂತೆ. ಅಷ್ಟರಲ್ಲಿ ಬಳೆಗಳ ಸದ್ದಾಗಿ ಆಸೆ ಕಂಗಳಿಂದ ನೋಡಿದ ನನಗೆ ಮತ್ತೆ ಉಪ್ಪಿಟ್ಟಿನೊಡನೆ ಬಂದ ಅತ್ತೆಯ ಕಿರುನಗೆ ಕಂಡಿತು. ಬಲವಂತವಾಗಿ ನಕ್ಕು ಸುಮ್ಮನಾದೆ. ನನ್ನ ಚಡಪಡಿಕೆ ಅರ್ಥ ಮಾಡಿಕೊಂಡ ಮಾವ ಮಗಳನ್ನು ಕರೆತರಲು ಹೇಳಿದಾಗ ಅತ್ತೆಯು, ಸೀರೆಯುಟ್ಟು ಸಿಂಗರಿಸಿದ ಮಗಳನ್ನು ಹಾಲು ಕೊಡುವ ನೆಪದಲ್ಲಿ ಕರೆತಂದರು. ಉಪ್ಪಿಟ್ಟು ಖಾಲಿ ಆಗಿದ್ದರಿಂದ ಹಾಲನ್ನು ಪಡೆದು ನಾಚಿಕೆಯಿಂದ ಹುಡುಗಿಯ ಮುಖ ನೋಡಿದೆ. ಅವಳೂ ನಾಚಿ ನೋಡಿ ಮುಖ ತಿರುಗಿಸಿದಳು. ವಾಪಸ್ ಹೋಗುವಾಗ ಧೈರ್ಯವಾಗಿ ತಲೆ ಎತ್ತಿ ನೋಡಿ ಅವಳನ್ನು ಕಣ್ತುಂಬಿಕೊಂಡೆ. ಬರೀ ನೋಡಲು ಬಂದದ್ದಕ್ಕೇ ಇಷ್ಟೊಂದು ರೆಡಿಯಾಗಿದ್ದಾಳಲ್ಲಾ ಎಂದು ಯೋಚಿಸುವಾಗಲೇ ಮಾವನವರು, “ನಮ್ಮ ಹುಡುಗಿಗೆ ಇವತ್ತು ಪ್ರಾಕ್ಟಿಕಲ್ ಎಕ್ಸಾಮ್ ಇದೆ. ಅದಕ್ಕಾಗಿ ರೆಡಿಯಾಗಿದ್ದಾಳೆ. ಅವಳಿಗೆ ಲೇಟ್ ಆಗುತ್ತೇನೋ, ಕಳಿಸ್ಲಾ?’ ಎಂದು ಕೇಳಿದಾಗ, ನಮ್ಮ ಚಿಕ್ಕಪ್ಪನವರು “ಪರವಾಗಿಲ್ಲ ಕಳಿಸಿ, ನೋಡಾಯ್ತಲ್ಲ’ ಎಂದು ಹೂಂಕರಿಸಿದರು. ನಾಚುತ್ತಲೇ ಬಂದ ಹುಡುಗಿ, ಸೀರೆಯಲ್ಲಿಯೇ ಸ್ಕೂಟಿ ಸ್ಟಾರ್ಟ್ ಮಾಡಿಕೊಂಡು ಹೊರಟೇಬಿಟ್ಟಳು. ಹೋಗುವ ಮುನ್ನ ಒಮ್ಮೆ ತಿರುಗಿ ಒಳಗಿದ್ದ ನನ್ನನ್ನು ನೋಡಿದಂತಾಯ್ತು. ಮನಸ್ಸಿನ ಯಾವುದೋ ಮೂಲೆಯಲ್ಲಿ ನಾಳೆ ಡ್ನೂಟಿಗೆ ಹೋಗ್ಲೆಬೇಕಾ? ಎಂದೆನಿಸಿದ್ದು ಯಾರಿಗೂ ಕೇಳಿಸಲಿಲ್ಲ! ಪಾಪ, ಗಂಡಸಾಗಿ ನಾನೇ ಇಷ್ಟು ನಾಚಬೇಕಾದರೆ ಅವಳು ಹುಡುಗಿ, ಹೇಗಾಗಿರಬೇಡ ಅವಳ ಸ್ಥಿತಿ ಎನಿಸಿ ಮುಸಿಮುಸಿ ನಕ್ಕೆ. ನಂಗೂ ಹೊಸದು ಅವಳೂ ಹೊಸದು, ಬ್ಯಾಡ ನಮ್ ಫಜೀತಿ…
ಪ.ನಾ.ಹಳ್ಳಿ.ಹರೀಶ್ ಕುಮಾರ್