ನವದೆಹಲಿ: ಗೂಗಲ್ ತನ್ನ ಮ್ಯಾಪ್ ಅನ್ನು ಪರಿಷ್ಕರಿಸಿದ್ದು, ಇದೀಗ ನ್ಯಾವಿಗೇಶನ್ ಮತ್ತಷ್ಟು ಸುಲಭವಾಗಲಿದೆ. ಕಳೆದ ವರ್ಷ ಗೂಗಲ್ ಮ್ಯಾಪ್ ಲೈವ್ ವಿವ್ಯೂ ಫೀಚರ್ ಅನ್ನು ಪರಿಚಯಿಸಿತ್ತು. ಇದರಿಂದ ಜಿಪಿಎಸ್ ಬಳಸಿಕೊಂಡು ಯಾವುದೇ ಸ್ಥಳದ ನಕ್ಷೆಯನ್ನು ಸ್ಮಾರ್ಟ್ ಫೋನ್ ನಲ್ಲಿ ನೇರವಾಗಿ ನೋಡಬಹುದಿತ್ತು.
ಇದರ ಮುಂದುವರೆದ ಭಾಗವಾಗಿ ಗೂಗಲ್ ತನ್ನ ಮ್ಯಾಪ್ ನಲ್ಲಿ ಲ್ಯಾಂಡ್ ಮಾರ್ಕ್ ಗುರುತಿಸುವ ಫೀಚರ್ ಹೊರತಂದಿದೆ. ಇದರಿಂದ ನಿರ್ದಿಷ್ಟ ಸ್ಥಳವನ್ನು ಸುಲಭವಾಗಿ ಗುರುತಿಸಬಹುದು. ಮಾತ್ರವಲ್ಲದೆ ನಾವು ತೆರಳಬೇಕಾದ ಸ್ಥಳಕ್ಕಿರುವ ಶಾರ್ಟ್ ಕಟ್ ಗಳು, ಸೇರಿದಂತೆ ಇತರ ಮಾಹಿತಿಗಳು ಕೂಡ ಲಭ್ಯವಾಗಲಿದೆ.
ಹೊಸ ಫೀಚರ್ ಗೂಗಲ್ ಮ್ಯಾಪ್ ಬಳಕೆದಾರರಿಗೆ ತಾವಿರುವ ಸ್ಥಳದ ಲ್ಯಾಂಡ್ ಮಾರ್ಕ್ ಅನ್ನು ತೋರಿಸುತ್ತದೆ. ಇದರಿಂದ ಅಪರಿಚಿತ ಸ್ಥಳದಲ್ಲಿಯೂ ಯಾವುದೇ ಭಯಪಡಬೇಕಾದ ಅವಶ್ಯಕತೆಯಿರುವುದಿಲ್ಲ. ಲ್ಯಾಂಡ್ ಮಾರ್ಕ್ ನಲ್ಲಿ ಪ್ರಸಿದ್ದ ಸ್ಥಳಗಳು, ಪ್ರಖ್ಯಾತ ಅಪಾರ್ಟ್ ಮೆಂಟ್ ಅಥವಾ ಕಟ್ಟಡಗಳು, ಸುಲಭವಾಗಿ ತೆರಳಬಹುದಾದದ ಪಾರ್ಕ್ ಗಳನ್ನು ತೋರ್ಪಡಿಸಲಾಗುತ್ತದೆ.
ಸದ್ಯ ಲ್ಯಾಂಡ್ ಮಾರ್ಕ್ ಫೀಚರ್ ಈ ಸ್ಥಳಗಳಲ್ಲಿ ಮಾತ್ರ ಲಭ್ಯವಿದೆ: ಅಮ್ ಸ್ಟರ್ ಡ್ಯಾಂ, ಬ್ಯಾಂಕಾಕ್ , ಬಾರ್ಸಿಲೋನಾ, ಬರ್ಲಿನ್, ದುಬೈ, ಫ್ಲೋರೆನ್ಸ್, ಇಸ್ಥಾನ್ ಬುಲ್, ಕೌಲಾಲಂಪುರ್, ಕಿಯೋಟೋ, ಲಂಡನ್, ಲಾಸ್ ಎಂಜಲಿಸ್, ಮ್ಯಾಡ್ರಿಡ್, ಮಿಲಾನ್, ಮ್ಯೂನಿಚ್, ನ್ಯೂ ಯಾರ್ಕ್, ಒಸಾಕಾ, ಪ್ಯಾರಿಸ್, ರೋಮ್, ಸನ್ ಫ್ರಾನ್ಸಿಸ್ಕೋ, ಸಿಡ್ನಿ, ಟೋಕ್ಯೋ, ವಿಯೆನ್ನಾ
ಸದ್ಯದಲ್ಲೇ ಇತರ ನಗರಗಳಿಗೂ ಈ ಫೀಚರ್ ದೊರೆಯಲಿದ್ದು, ಆ್ಯಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರಿಗೆ ಲಭ್ಯವಾಗಲಿದೆ. ಈ ಫೀಚರ್ ಜೊತೆಗೆ ಗೂಗಲ್ ತನ್ನ ಲೈವ್ ವಿವ್ಯೂ ಬಟನ್ ಅನ್ನು ಇತರ ನಗರಗಳಿಗೂ ವಿಸ್ತರಿಸಿದೆ.