Advertisement
ದಾರಿಯಲ್ಲಿ ಹೋಗುವಾಗ ಯಾರಾದರೂ ಪ್ಯಾಂಟನ್ನು ಉಲ್ಟಾಪಲ್ಟಾ ತೊಟ್ಟುಕೊಂಡು ನಡೆಯುತ್ತಿದ್ದರೆ ಅವರ ಬಳಿ ತೆರಳಿ ಅಪ್ಪಿತಪ್ಪಿಯೂ “ನೀವು ಪ್ಯಾಂಟನ್ನು ಉಲ್ಟಾ ತೊಟ್ಟುಕೊಂಡಿದ್ದೀರಾ?’ ಅಂತ ಹೇಳದಿರಿ. ಯಾಕೆಂದರೆ, ಇದು ಲೇಟೆಸ್ಟ್ ಫ್ಯಾಷನ್. ಉಲ್ಟಾಪಲ್ಟಾ ಫ್ಯಾಷನ್ ಶೈಲಿ ಜಗತ್ತನ್ನು ಆವರಿಸಿಕೊಳ್ಳುತ್ತಿದೆ. ಅದರ ಹೆಸರು ಇನ್‌ವರ್ಟೆಡ್ ಜೀನ್ಸ್.
ಇನ್‌ವರ್ಟೆಡ್ ಜೀನ್ಸ್ ಎಂಬ ಹೆಸರನ್ನು ಹೊತ್ತಿರುವ ಈ ಜೀನ್ಸ್ ಹೇಗೆ ವಿನ್ಯಾಸಗೊಳಿಸಲ್ಪಟ್ಟಿದೆ ಗೊತ್ತಾ? ಬಟ್ಟೆ ಒಗೆಯುವಾಗ ಒಳಗನ್ನು ಹೊರಗು ಮಾಡಿ ಒಗೆಯುತ್ತಾರಲ್ಲ, ಹಾಗಂತೂ ಈ ಜೀನ್ಸ್ ಇಲ್ಲ. ಮತಾöವ ಲೆಕ್ಕದಲ್ಲಿ ಇದು ಇನ್‌ವರ್ಟೆಡ್ ಜೀನ್ಸ್ ಎನ್ನುವ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿರಬಹುದು. ಉತ್ತರ ಸಿಂಪಲ್. ಪ್ಯಾಂಟನ್ನು ಇದ್ದ ಹಾಗೆಯೇ ತಲೆ ಕೆಳಗು, ಕಾಲು ಮೇಲೆ ಮಾಡಿ. ಈಗ ಯಾವ ವಿನ್ಯಾಸ ಕಾಣುತ್ತದೆಯೋ ಅದೇ ವಿನ್ಯಾಸವನ್ನು ಇನ್‌ವರ್ಟೆಡ್ ಜೀನ್ಸ್ ಮೇಲೆ ಮೂಡಿಸಲಾಗಿದೆ. ಅದನ್ನು ಮಿಕ್ಕೆಲ್ಲಾ ಪ್ಯಾಂಟುಗಳಂತೆಯೇ ಧರಿಸಬೇಕು. ಆದರೆ, ವಿನ್ಯಾಸ ಮಾತ್ರ ತಲೆ ಕೆಳಗೆ, ಕಾಲು ಮೇಲೆ ಮಾಡಿದ ಪ್ಯಾಂಟಿನ ಥರ ಇರುತ್ತೆ. ಕಾಲಲ್ಲಿ ಜೇಬು ಮತ್ತು ಬೆಲ್ಟ್ ಪಾಕೆಟ್
ಸೊಂಟದ ಬಳಿ ಬರುವ ಜೇಬು ಮತ್ತು ಬೆಲ್ಟ್ ಪಾಕೆಟ್‌ಗಳು ಇನ್‌ವರ್ಟೆಡ್ ಜೀನ್ಸ್ ಪ್ಯಾಂಟುಗಳಲ್ಲಿ ಕಾಲ ಬಳಿ ಇವೆ. ಬೆಲ್ಟ್ ಪಾಕೆಟ್‌ಗಳನ್ನು ಬಳಸಲಾಗದಿದ್ದರೂ, ಜೇಬನ್ನು ಬಳಸಬಹುದು. ಅನೇಕರು ಈ ಜೀನ್ಸ್ ಅನ್ನು ಆಕ್ಷೇಪಿಸಲು ಕಾರಣ, ಜೇಬುಗಳನ್ನು ಕಾಲ ಬಳಿ ಇಟ್ಟಿರೋದು. ಪ್ಯಾಂಟುಗಳಲ್ಲಿನ ಜೇಬುಗಳನ್ನು ಬಳಸಲು ಕಷ್ಟವಾಗುವುದಾದರೂ, ಡೆನಿಮ್ ಶಾರ್ಟುಗಳಲ್ಲಿ ಜೇಬು ಚೆಂದ ಕಾಣುತ್ತದೆ ಎಂಬ ಅಭಿಪ್ರಾಯಗಳೂ ಕೇಳಿ ಬಂದಿವೆ. ಜೇಬು ನೋಡಲು ಉಲ್ಟಾಪಲ್ಟಾ ಆಗಿ ಕಂಡರೂ ಆ ಜೇಬನ್ನು ಸಹಜವಾಗಿಯೇ ಬಳಸಬಹುದು.
Related Articles
ಇಂಥದ್ದೊಂದು ವಿನೂತನ, ವಿಲಕ್ಷಣ ಐಡಿಯಾ ಸುಮ್ಮನೆಯೇ ಹುಟ್ಟಿಕೊಂಡಿದ್ದಲ್ಲ. ಅದರ ಹಿಂದೆಯೂ ಒಂದು ಕತೆ ಇದೆ. ಇನ್‌ವರ್ಟೆಡ್ ಜೀನ್ಸ್‌ಗೆ ಪ್ರೇರಣೆಯಾಗಿದ್ದು ಹಾಲಿವುಡ್‌ನ “ಸ್ಟ್ರೇಂಜರ್ ಥಿಂಗ್ಸ್’ ಧಾರಾವಾಹಿ ಸರಣಿ. ಅದು ಮಕ್ಕಳ ಸಾಹಸಮಯ ಕಥಾನಕವನ್ನು ಹೊಂದಿದೆ. ಅದರಲ್ಲಿ ನಾಲ್ವರು ಮಕ್ಕಳು ತಲೆಕೆಳಗಾದ ಪ್ರಪಂಚದೊಳಕ್ಕೆ ಹೋಗುವ ಸನ್ನಿವೇಶ ಬಂದಿತ್ತು. ಜಗತ್ತಿನಾದ್ಯಂತ ಹಿರಿಯ, ಕಿರಿಯ ಅಭಿಮಾನಿಗಳನ್ನು ಸಂಪಾದಿಸಿರುವ ಜನಪ್ರಿಯ ಧಾರಾವಾಹಿಯ ಈ ಎಳೆಯಿಂದಲೇ ಸ್ಫೂರ್ತಿ ಪಡೆದು ತಯಾರಾಗಿದ್ದು ಇನ್‌ವರ್ಟೆಡ್ ಜೀನ್ಸ್.
Advertisement
ಪ್ಯಾಂಟಿಗೊಂದು ಹೆಸರುಇನ್ವರ್ಟೆಡ್ ಜೀನ್ಸ್‌ಅನ್ನು ತಯಾರಿಸಿರುವುದು ಅಮೆರಿಕದ “ಸಿಐಇ’ ಎನ್ನುವ ಕಂಪನಿ. ಹದಿಹರೆಯದವರು ಸಮಾಜದ ಕಟ್ಟಳೆಗಳನ್ನು ಮುರಿಯುವ ಮನಸ್ಥಿತಿ ಉಳ್ಳವರಾಗಿರುತ್ತಾರೆ. ಮಿಕ್ಕೆಲ್ಲರಿಗಿಂತ ತಾವು ವಿಶೇಷವಾಗಿ ಕಾಣಬಯಸುತ್ತಾರೆ. ಹೀಗಾಗಿಯೇ ಉಡುಗೆಯ ವಿಷಯದಲ್ಲೂ ಅವರು ಹೊಸತನವನ್ನು ಬಯಸುತ್ತಾರೆ. ಆದರೆ, ಈ ಟ್ರೆಂಡನ್ನು ಅವರು ಹೇಗೆ ಸ್ವೀಕರಿಸುವರು ಎಂದು ತಿಳಿಯಲು ವಸ್ತ್ರವಿನ್ಯಾಸಕಾರರು ಕಾತರರಾಗಿದ್ದಾರೆ. ಸಿಐಇ ಕಂಪನಿ ಐದು ಬಗೆಗಳಲ್ಲಿ ಜೀನ್ಸ್ ಉಡುಪುಗಳನ್ನು ಬಿಡುಗಡೆ ಮಾಡಿದ್ದು ಎಲ್ಲವಕ್ಕೂ “ಸ್ಟ್ರೇಂಜರ್ ಥಿಂಗ್ಸ್’ ಧಾರಾವಾಹಿಯ ಪ್ರಮುಖ ಪಾತ್ರಗಳಾದ ನ್ಯಾನ್ಸಿ, ವಿಲ್, ಮೈಕ್, ಎಲ್ ಮತ್ತು ಲೂಕಸ್ ಹೆಸರುಗಳನ್ನು ಇಡಲಾಗಿದೆ. ಮುಂದೆ ಇತರೆ ವಸ್ತ್ರ ತಯಾರಕ ಕಂಪನಿಗಳೂ ಇನ್‌ವರ್ಟೆಡ್ ಶೈಲಿಯ ಪ್ಯಾಂಟುಗಳನ್ನು ಮಾರುಕಟ್ಟೆಗೆ ಬಿಟ್ಟರೆ ಆಶ್ಚರ್ಯವೇನಿಲ್ಲ. ಇಂಥ ಜೀನ್ಸ್‌ಗಳೂ ಇದ್ದವು…!
ಜೀನ್ಸ್ ಪ್ರಪಂಚದಲ್ಲಿ ನಡೆದ ವಿಲಕ್ಷಣ ಪ್ರಯೋಗ ಇದೇ ಮೊದಲೇನಲ್ಲ. ಈ ಹಿಂದೆಯೂ ಆಗಿದೆ. ಅವು ಯಶಸ್ವಿಯಾಗದೇ ಮೂಲೆಯನ್ನೂ ಸೇರಿವೆ.
1. ಹೈ ರೈಸ್ ಜೀನ್ಸ್: ಎದೆಯ ಮಟ್ಟಕ್ಕೆ ಬರುವಷ್ಟು ಉದ್ದವಿದ್ದವು. 2. ಕಟ್ ಔಟ್ ಜೀನ್ಸ್: ಒಳಉಡುಪು ಇಣುಕುವ ರೀತಿಯಲ್ಲಿ ಕಟ್ ಮಾಡಲ್ಪಟ್ಟ ಜೀನ್ಸ್ 3. ಬೆಲ್ಟ್ ಜೀನ್ಸ್: ಬೆಲ್ಟ್ಗೆ ಬದಲಾಗಿ ತೊಡಬಹುದಾದ ಶಾರ್ಟ್ಸ್ ಇದು. “ಲೇಝಿ ಜೀನ್ಸ್’ ಎಂದೇ ಕುಖ್ಯಾತವಾಗಿತ್ತು ಈ ಜೀನ್ಸ್. 4. ಮಲ್ಟಿ ಕಫ್ ಜೀನ್ಸ್: ಪ್ಯಾಂಟ್ ಉದ್ದವಿದ್ದಾಗ ತುದಿಯಲ್ಲಿ ಮಡಚುತ್ತೇವಲ್ಲ, ಅಂಥದ್ದೇ 3- 4 ವಿನ್ಯಾಸಗಳನ್ನು ಮಂಡಿಯ ಬಳಿ ಈ ಪ್ಯಾಂಟ್ ಹೊಂದಿತ್ತು.