ಅಲ್ಲಿಯವರೆಗೂ 60 ಗಂಡುಗಳು ಬಂದು ಆಕೆಯನ್ನು ನೋಡಿ ರಿಜೆಕ್ಟ್ ಮಾಡಿ ಹೋಗಿರುತ್ತಾರೆ. ಬಂದವರೆಲ್ಲಾ ಆಕೆಯ ರೂಪ, ಗುಣದ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಾಗಿ ಆಸ್ತಿ, ಬಂಗಲೆ, ಕಾರುಗಳ ಬಗ್ಗೆ ವಿಚಾರಿಸುವವರೇ. 61ನೇ ಗಂಡು ಸಹ ಅದೇ ಕೇಸು. ಇದೆಲ್ಲಾ ನೋಡಿ ನೋಡಿ ಸುಸ್ತಾಗದ ಆಕೆ, ಸಿಡಿದೇಳುತ್ತಾಳೆ. ತನ್ನ ಪತಿಯನ್ನು ತಾನೇ ಹುಡುಕಿಕೊಳ್ಳುವುದಕ್ಕೆ ಮುಂದಾಗುವ ಅವಳು ಮೊದಲು ಮದುವೆ ಬ್ರೋಕರ್ ಆಗುತ್ತಾಳೆ. ಆಗಲೂ ಗಂಡು ಸಿಗದಿದ್ದಾಗ, ಯಾರನ್ನಾದರೂ ಪ್ರೀತಿ ಮದುವೆಯಾಗಬೇಕೆಂದು ನಿಶ್ಚಯ ಮಾಡುತ್ತಾಳೆ.
ಕೊನೆಗೆ ಆ ಐಡಿಯಾ ಸಹ ಫಲಿಸದಿದ್ದಾಗ, ಯಾರನ್ನಾದರೂ ಮೋಸ ಮಾಡಿಯಾದರೂ ಸಹ ತಾಳಿ ಕಟ್ಟಿಸಿಕೊಳ್ಳುವುದಕ್ಕೆ ರೆಡಿಯಾಗುತ್ತಾಳೆ. ಹೀಗಿರುವಾಗಲೇ ಅವನು ಫೋನ್ ಮಾಡುತ್ತಾನೆ. ರೂಪ, ಗುಣ, ವ್ಯಕ್ತಿತ್ವ ಎಲ್ಲವೂ ಹೇಳಿ ಮಾಡಿಸಿದಂತಿದೆ ಎನ್ನುವಾಗಲೇ ಅವನೊಂದು ಷರತ್ತು ಒಡ್ಡುತ್ತಾನೆ. ಆ ಷರತ್ತನ್ನು ಪೂರೈಸುವುದಕ್ಕೆ ಅವಳು ಒಂದೊಂದೇ ಸುಳ್ಳುಗಳನ್ನು ಹೇಳುತ್ತಾ ಹೋಗುತ್ತಾಳೆ. ಒಂದೊಂದೇ ಸುಳ್ಳು ಪೋಣಿಸಿ ಅದು ಎಲ್ಲಿಂದ ಎಲ್ಲಿಗೋ ಹೋಗಿ ಮುಟ್ಟುತ್ತದೆ.
ಇಷ್ಟಕ್ಕೂ ಆವನು ಒಡ್ಡುವ ಷರತ್ತೇನು ಗೊತ್ತಾ? ಪತಿಬೇಕು ಡಾಟ್‌ಕಾಮ್ ವೆಬ್‌ಸೈಟಿಗೆ ಲಾಗಾನ್ ಮಾಡಿ. “ಪತಿಬೇಕು ಡಾಟ್‌ಕಾಮ್’ ಎಂಬ ಹೆಸರಿನಲ್ಲೇ ಚಿತ್ರದ ಕಥೆ ಇದೆ. ಇಲ್ಲೊಬ್ಬಳು ಮದುವೆ ವಯಸ್ಸು ಮುಗಿಯುತ್ತಿರುವ ಹುಡುಗಿ ಇದ್ದಾಳೆ. ಅಪ್ಪ-ಅಮ್ಮ ಶ್ರೀಮಂತರಲ್ಲ. ಇನ್ನು ಮುಂದೆ ನಿಂತು ಮದುವೆ ಮಾಡೋಕೆ ಅಣ್ಣ-ತಮ್ಮಂದಿರಿಲ್ಲ. ಹಾಗಾಗಿ ಮದುವೆಯ ಜವಾಬ್ದಾರಿಯನ್ನು ಬರೀ ತಂದೆ-ತಾಯಿಗಳದ್ದಷ್ಟೇ ಅಲ್ಲ, ಮಗಳು ಸಹ ಹೊತ್ತುಕೊಂಡಿರುತ್ತಾಳೆ.
ಈ ಜವಾಬ್ದಾರಿಯ ಹೊರೆ ಹೇಗೆ ಆ ಮೂವರ ಹೆಗಲಿನಿಂದ ಇಳಿಯುತ್ತದೆ ಎಂಬುದನ್ನು ಹೇಳುವ ಪ್ರಯತ್ನವನ್ನು ಮಾಡಿದ್ದಾರೆ ನಿರ್ದೇಶಕ ರಾಕೇಶ್. ವರದಕ್ಷಿಣೆ ಸಮಸ್ಯೆಯನ್ನಿಟ್ಟುಕೊಂಡು ಹಲವು ಚಿತ್ರಗಳು ಇದುವರೆಗೂ ಬಂದಿವೆ. ಇಲ್ಲಿ ವಿಷಯ ಗಂಭೀರವಾಗಿದ್ದರೂ, ರಾಕೇಶ್ ಕಾಮಿಡಿಯಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಹಲವು ಟ್ವಿಸ್ಟ್‌ಗಳನ್ನಿಟ್ಟು, ಮಜವಾದ ಸನ್ನಿವೇಶಗಳನ್ನು ಸೇರಿಸಿ, ಚಿತ್ರದುದ್ದಕ್ಕೂ ನಗಿಸುವ ಪ್ರಯತ್ನ ಮಾಡಿದ್ದಾರೆ.
ಅವರ ಉದ್ದೇಶವೇನೋ ಚೆನ್ನಾಗಿದೆ. ಆದರೆ, ಜನ ಚಿತ್ರದುದ್ದಕ್ಕೂ ಖುಷಿಪಡುತ್ತಾರೆ ಎಂದು ಹೇಳುವುದು ಕಷ್ಟ. ಚಿತ್ರದ ಮೊದಲಾರ್ಧ ವೇಗವಾಗಿ ನೋಡಿಸಿಕೊಂಡು ಹೋಗುತ್ತದೆ. ದ್ವಿತೀಯಾರ್ಧದ ಬಗ್ಗೆ ಅದೇ ಅಭಿಪ್ರಾಯ ಹೇಳುವುದು ಕಷ್ಟ. ಇಲ್ಲಿ ನಿಧಾನವಷ್ಟೇ ಅಲ್ಲ, ನಗಿಸಬೇಕೆಂಬ ಭರದಲ್ಲಿ ನಿರ್ದೇಶಕರು ಕೆಲವೊಮ್ಮೆ ಕಾಮಿಡಿಯನ್ನು ಸಿಲ್ಲಿ ಮಾಡಿಬಿಡುತ್ತಾರೆ. ಲಾಜಿಕ್ಕಿನ ಗೊಡವೆ ಬೇಡ, ಸುಮ್ಮನೆ ನಗು ಬೇಕು ಎನ್ನುವವರು ನೋಡಿ ಖುಷಿಪಡಬಹುದು.
ಶೀತಲ್ ಶೆಟ್ಟಿ ಇದುವರೆಗೂ ಹಲವು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಪೂರ್ಣಪ್ರಮಾಣವಾಗಿ ಕಾಣಿಸಿಕೊಂಡಿರುವ ಅವರು, ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಚಿತ್ರದುದ್ದಕ್ಕೂ ಲವಲವಿಕೆಯಿಂದ ಕಾಣಿಸಿಕೊಂಡಿರುವ ಅವರು, ಅದೇ ಕಾರಣಕ್ಕೆ ಇಷ್ಟವಾಗುತ್ತಾರೆ. ತಂದೆ-ತಾಯಿಯಾಗಿ ನಟಿಸಿರುವ ಕೃಷ್ಣ ಅಡಿಗ ಮತ್ತು ಹರಿಣಿ ಕೆಲವೊಮ್ಮೆ ಅತಿಯೆನಿಸಿದರೂ, ಇಷ್ಟವಾಗುತ್ತಾರೆ. ಅರುಣ್ ಗೌಡ ಖಡಕ್ ಲುಕ್‌ನಲ್ಲಿ ಗಮನಸೆಳೆಯುತ್ತಾರೆ. ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ ಚಿತ್ರವನ್ನು ಇನ್ನಷ್ಟು ಅದ್ಧೂರಿಯಾಗಿಸಿದೆ.
ಚಿತ್ರ: ಪತಿಬೇಕು ಡಾಟ್‌ಕಾಮ್
ನಿರ್ಮಾಣ: ರಾಕೇಶ್, ಶ್ರೀನಿವಾಸ್ ಮತ್ತು ಮಂಜುನಾಥ್
ನಿರ್ದೇಶನ: ರಾಕೇಶ್
ತಾರಾಗಣ: ಶೀತಲ್ ಶೆಟ್ಟಿ, ಅರುಣ್ ಗೌಡ, ಕೃಷ್ಣ ಅಡಿಗ, ಹರಿಣಿ, ದಶಾವರ ಚಂದ್ರು, ರಾಕ್‌ಲೈನ್ ಸುಧಾಕರ್ ಮುಂತಾದವರು
* ಚೇತನ್ ನಾಡಿಗೇರ್