Advertisement

ಪ್ರಸಕ್ತ ಸಾಲಿನಿಂದ ನೂತನ ಶಿಕ್ಷಣ ನೀತಿ

07:13 AM Jan 12, 2019 | |

ದಾವಣಗೆರೆ: 2019-20ನೇ ಸಾಲಿನಿಂದ ಜಾರಿಗೆ ಬರಲಿರುವ ನೂತನ ಶಿಕ್ಷಣ ನೀತಿಯಡಿ ವೃತ್ತಿ ಶಿಕ್ಷಣ ಶಿಕ್ಷಕರಿಗೆ ಇತರೆ ಶಿಕ್ಷಕರಂತೆ ಸಮಾನ ಪ್ರಾಮುಖ್ಯತೆ, ಆದ್ಯತೆ ದೊರೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಲ್ಲಿನ ಉಪ ನಿರ್ದೇಶಕಿ ಎಚ್.ಎ. ಶಮೀಮ್‌ ತಾಜ್‌ ತಿಳಿಸಿದ್ದಾರೆ.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶುಕ್ರವಾರ ರೇಣುಕಾ ಮಂದಿರದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಪ್ರೌಢಶಾಲಾ ಶೈಕ್ಷಣಿಕ ಹಾಗೂ ಮಕ್ಕಳ ವೃತ್ತಿ ಶಿಕ್ಷಣ ಕಲಿಕೋತ್ಸವ ವಸ್ತು ಪ್ರದರ್ಶನ-2019ರಲ್ಲಿ ಮಾತನಾಡಿದ ಅವರು, ನೂತನ ಶಿಕ್ಷಣ ನೀತಿಯಡಿ ಕನ್ನಡ, ಆಂಗ್ಲ, ವಿಜ್ಞಾನ, ಸಮಾಜ ವಿಜ್ಞಾನ ವಿಷಯ ಶಿಕ್ಷಕರಂತೆ ತೋಟಗಾರಿಕೆ, ಕೃಷಿ, ಸಂಗೀತ ಮುಂತಾದ ವಿಷಯಗಳ ವೃತ್ತಿ ಶಿಕ್ಷಣ ಶಿಕ್ಷಕರಿಗೆ ಸಮಾನ ಆದ್ಯತೆ ನೀಡಲಾಗುವುದು. ಹಾಗಾಗಿ ಇನ್ನು ಮುಂದೆ ವೃತ್ತಿ ಶಿಕ್ಷಣ ಶಿಕ್ಷಕರ ಜವಾಬ್ದಾರಿ ಹೆಚ್ಚಾಗಲಿದೆ. ಎಲ್ಲಾ ಶಿಕ್ಷಕರು ಒಂದು ತಂಡವಾಗಿ ಗುಣಮಟ್ಟದ ಬೋಧನೆಗೆ ಶ್ರಮಿಸಬೇಕು ಎಂದರು.

ನೂತನ ಶಿಕ್ಷಣ ನೀತಿಯಡಿ ವೃತ್ತಿ ಶಿಕ್ಷಣ ಶಿಕ್ಷಕರಿಗೆ ಅನುಕೂಲವಾಗುವಂತೆ ಕೈಪಿಡಿ ಸಿದ್ಧಗೊಳಿಸಲಾಗುತ್ತಿದೆ. ಹಲವಾರು ವಿಷಯ ತಜ್ಞರ ಅಭಿಪ್ರಾಯ ಸಂಗ್ರಹದ ಕೈಪಿಡಿ ಜೂನ್‌ ವೇಳೆಗೆ ಮುದ್ರಣವಾಗಲಿದೆ. ಅಲ್ಲದೆ ವೃತ್ತಿ ಶಿಕ್ಷಣ ಶಿಕ್ಷಕರ ವೇತನ ತಾರತಮ್ಯ ನಿವಾರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು. ಕ್ಷೇತ್ರ ಶಿಕ್ಷಣಾಧಿಕಾರಿಗೆ ಸಮಾಂತರವಾಗಿ ಕಲಬುರುಗಿ ಮತ್ತು ಧಾರವಾಡದಲ್ಲಿ ವೃತ್ತಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಿರಿಯ ಸಹಾಯಕ ನಿರ್ದೇಶಕ ಹುದ್ದೆ ಭರ್ತಿ ಮಾಡಲಾಗುವುದು. 16 ಜನ ಶಿಕ್ಷಕರಿಗೆ ಪದೋನ್ನತಿ ನೀಡಲಾಗುವುದು. ಅಂಕಪಟ್ಟಿಯಲ್ಲೂ ವೃತ್ತಿ ಶಿಕ್ಷಣಕ್ಕೆ ಆದ್ಯತೆ ದೊರೆಯಲಿದೆ ಎಂದು ತಿಳಿಸಿದರು.

ಮಕ್ಕಳ ಗುಣಾತ್ಮಕ, ಸೃಜನಾತ್ಮಕ, ಕ್ರಿಯಾತ್ಮಕ ಕಲಿಕೆಗೆ ವೃತ್ತಿ ಶಿಕ್ಷಣ ಅತ್ಯಗತ್ಯ ಎಂಬುದನ್ನು ಮರೆಯಲೇಬಾರದು.ನಾವು ಇತರೆ ಭಾಷಾ ಶಿಕ್ಷಕರ ಮೇಲೆಯೇ ಅವಲಂಬಿತರು, ಶಾಲೆಗಳ ಇತರೆ ಕೆಲಸ ಮಾಡಬೇಕಾದವರು ಎಂಬ ಕೀಳರಿಮೆಯನ್ನು ದೂರ ಮಾಡಬೇಕು. ಅಂತಹ ಅವಕಾಶವನ್ನು ಹೊಸ ಶಿಕ್ಷಣ ನೀತಿ ಮಾಡಿಕೊಡಲಿದೆ ಎಂದು ತಿಳಿಸಿದರು.

ಮಕ್ಕಳಲ್ಲಿ ಧನಾತ್ಮಕ ಚಿಂತನೆ, ಸೃಜನಶೀಲತೆ, ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳುವ ಸಾಮರ್ಥ್ಯದಂತಹ ಜೀವನ ಕೌಶಲ್ಯ ಅಭಿವೃದ್ಧಿಯಲ್ಲಿ ವೃತ್ತಿ ಶಿಕ್ಷಣ ಶಿಕ್ಷಕರ ಪಾತ್ರ ಅತ್ಯಂತ ಮಹತ್ತರ ಮತ್ತು ಮಹತ್ವದ್ದು. ವೃತ್ತಿ ಶಿಕ್ಷಣ ಶಿಕ್ಷಕರು ಬುದ್ಧಿವಂತ ಮತ್ತು ಕಲಿಕೆಯಲ್ಲಿ ಹಿಂದುಳಿದ ಮಕ್ಕಳಲ್ಲಿನ ಸುಪ್ತ ಪ್ರತಿಭೆ ಗುರುತಿಸಿ, ಅವರು ಯಾವ ವೃತ್ತಿ ಶಿಕ್ಷಣ ಆಯ್ಕೆ ಮಾಡಿಕೊಂಡಲ್ಲಿ ಉತ್ತಮ ಬದುಕನ್ನು ಕಟ್ಟಿಕೊಳ್ಳಬಹುದು ಎಂಬ ವಿಚಾರಗಳ ಬಗ್ಗೆ ಮಾರ್ಗದರ್ಶಕರಾಗಬೇಕು. ಜೀವನದ ದಾರಿಗೆ ಅಗತ್ಯವಾದ ಪ್ರೇರಣೆ ನೀಡಬೇಕು ಎಂದು ಸಲಹೆ ನೀಡಿದರು.

Advertisement

ಮೇಯರ್‌ ಶೋಭಾ ಪಲ್ಲಾಗಟ್ಟೆ ಮಾತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ವೃತ್ತಿ ಶಿಕ್ಷಣಕ್ಕೆ ಮೂಲ ಕಾರಣಕರ್ತರು. ಪ್ರತಿಯೊಬ್ಬರು, ಅದರಲ್ಲೂ ಹೆಣ್ಣುಮಕ್ಕಳು ಸ್ವಾವಲಂಬಿ ಜೀವನ ನಡೆಸಲು ವೃತ್ತಿ ಶಿಕ್ಷಣ ಅತೀ ಮುಖ್ಯ. ವೃತ್ತಿ ಶಿಕ್ಷಣ ಶಿಕ್ಷಕರು ಮಕ್ಕಳ ಮುಂದಿನ ಭವಿಷ್ಯಕ್ಕೆ ಒಳ್ಳೆಯ ಮಾರ್ಗದರ್ಶಕರಾಗಬೇಕು ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ಉಪ ನಿರ್ದೇಶಕ ಎಚ್.ಕೆ. ಲಿಂಗರಾಜ್‌, ತಾವು ಅನೇಕ ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವೃತ್ತಿ ಶಿಕ್ಷಣ ಶಿಕ್ಷಕರು ಒಂದು ರೀತಿಯ ಕೀಳರಿಮೆಯಲ್ಲಿ ಇರುವುದು ಕಂಡು ಬರುತ್ತದೆ. ಮಕ್ಕಳ ಕಲಿಕೆಯ ಶೇ.15 ಭಾಗ ಸೃಜನಶೀಲತೆ ಬೆಳೆಸುವ ವೃತ್ತಿ ಶಿಕ್ಷಕರ ಪಾತ್ರ ಅತೀ ಮಹತ್ವದ್ದು. ಪುಸ್ತಕದ ತಿರುಳು ವಿದ್ಯಾರ್ಥಿಗಳ ಮಸ್ತಕಕ್ಕೆ ಹೋಗಲು ವೃತ್ತಿ ಶಿಕ್ಷಣ ಶಿಕ್ಷಕರು ನೆರವಾಗಬೇಕು. ಮಕ್ಕಳು ಬದುಕನ್ನು ಕಟ್ಟಿಕೊಳ್ಳಲು ಪ್ರೇರಣೆ ನೀಡುವ ವೃತ್ತಿ ಶಿಕ್ಷಣ ಶಿಕ್ಷಕರು ತಮ್ಮ ವೃತ್ತಿಯ ಬಗ್ಗೆ ಹೆಮ್ಮೆ, ಆತ್ಮವಿಶ್ವಾಸ ಹೊಂದಿರಬೇಕು ಎಂದು ತಿಳಿಸಿದರು.

ಡೆಪ್ಯುಟಿ ಮೇಯರ್‌ ಕೆ. ಚಮನ್‌ಸಾಬ್‌, ವೃತ್ತಿ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಎಚ್.ಡಿ. ಎಲ್ಲಪ್ಪ, ಸಿದ್ದಮ್ಮ, ಬಿ. ದಿಳ್ಯೆಪ್ಪ, ಶಿವಾನಾಯ್ಕ, ಡಿ.ಎಸ್‌. ನಾಗಭೂಷಣ್‌, ಸಿದ್ದರಾಮಯ್ಯ, ಜಯಶಂಕರ್‌, ಶಿವಶಂಕರ್‌, ಮುಬಾರಕ್‌ಅಲಿ, ಮಲ್ಲಯ್ಯ ಇತರರು ಇದ್ದರು.

ಪ್ರೇಮಾ ಮತ್ತು ಸಂಗಡಿಗರು ನಾಡಗೀತೆ ಹಾಡಿದರು. ಬಿ.ಎನ್‌. ರಾಮರೆಡ್ಡಿ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next