Advertisement

ಸರಕಾರ ಮದ್ಯ ನಿಷೇಧಕ್ಕೆ ಮುಂದಾಗಲಿ

12:57 PM Nov 04, 2019 | Naveen |

ಹೊಸದುರ್ಗ: ಬಿಹಾರದಲ್ಲಿ ನಿತೀಶ್‌ ಕುಮಾರ ಅವರು ಚುನಾವಣಾ ಸಂದರ್ಭದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸಂಪೂರ್ಣ ಮದ್ಯ ನಿಷೇಧ ಮಾಡುತ್ತೇವೆ ಎಂದು ಭರವಸೆ ನೀಡಿ ಮದ್ಯಪಾನ ನಿಷೇಧಗೊಂಡಿದೆ. ಆದರೆ ಕರ್ನಾಟಕದ ಜನಪ್ರತಿನಿಧಿಗಳು ಏಕೆ ಮಾಡುತ್ತಿಲ್ಲ? ಮದ್ಯಪಾನದಿಂದ ಒಬ್ಬ ವ್ಯಕ್ತಿ ಮಾತ್ರವಲ್ಲದೆ ಒಂದು ಸಂಸಾರವೇ ಹಾಳಾಗುತ್ತಿದೆ. ಈ ಸತ್ಯ ಗೊತ್ತಿದ್ದೂ ಜನಪ್ರತಿನಿಧಿಗಳು ಬಾಯಿಮುಚ್ಚಿಕೊಂಡಿರುವುದು ವಿಷಾದನೀಯ ಎಂದು ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

Advertisement

ಸಾಣೇಹಳ್ಳಿಯ ರಾಷ್ಟ್ರೀಯ ನಾಟಕೋತ್ಸವದ ಭಾನುವಾರ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮದ್ಯಪಾನದಿಂದ ಸಾಮಾಜಿಕ ಶಾಂತಿ ಕದಡುತ್ತಿದೆ. ಕೊಲೆ ಸುಲಿಗೆಗಳು ಹೆಚ್ಚುತ್ತಿವೆ.

ಸಂಸಾರಗಳು ಬೀದಿಪಾಲಾಗುತ್ತಿವೆ. ಇವನ್ನೆಲ್ಲ ತಪ್ಪಿಸಬೇಕು ಎಂದರೆ ಕರ್ನಾಟಕದಲ್ಲಿರುವ ಎಲ್ಲ ಸ್ವಸಹಾಯ ಮಹಿಳಾ ಸಂಘಟನೆಗಳೂ ಸರ್ಕಾರದ ವಿರುದ್ಧ ಬಂಡೆದ್ದು ಮದ್ಯ ನಿಷೇಧ ಮಾಡುವಂತೆ ಬಹುದೊಡ್ಡ ಚಳವಳಿಯನ್ನೇ ಮಾಡಬೇಕು. ಅದಕ್ಕೆ ನಮ್ಮ ಬೆಂಬಲ ಇದ್ದೇ ಇದೆ. ಸರ್ಕಾರ ಈಗಲಾದರೂ ಗಂಭೀರ ಚಿಂತನೆ ಮಾಡಿ ಮದ್ಯ ನಿಷೇಧ ಮಾಡಬೇಕೆಂದು ಒತ್ತಾಯಿಸಿದರು.

ಜನಪ್ರತಿನಿಧಿ ಗಳಿಗೆ ಬದ್ಧತೆ ಇರಬೇಕು. ಮದ್ಯಪಾನದಿಂದ ಬರುವ ಆದಾಯಕ್ಕಿಂತ ನಷ್ಟವೇ ಹೆಚ್ಚು ಎನ್ನುವುದನ್ನು ಸರಕಾರ ಅರ್ಥಮಾಡಿಕೊಳ್ಳಬೇಕು. ಈ ಬಗ್ಗೆ ಸರಕಾರ ಗಂಭೀರವಾಗಿ ಚಿಂತಿಸಬೇಕು. ಪ್ರಗತಿಪರ ಚಿಂತನೆ ಎಂದರೆ ಮದ್ಯಪಾನ ನಿಲ್ಲುವುದೇ ಆಗಿದೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಕನೇರಿ ಸಿದ್ಧಗಿರಿಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಡಾಕ್ಟರ್‌ಗಳು, ವಿದ್ಯಾವಂತರು, ಸರಕಾರಿ ನೌಕರರು ಸಹ ಮಾದಕ ವ್ಯಸನಕ್ಕೆ ದಾಸರಾಗಿರುವುದು ದುರದೃಷ್ಟಕರ ಸಂಗತಿ. ಕಾನೂನಿನಿಂದ ವ್ಯಸನಗಳನ್ನು ದೂರ ಮಾಡಲು ಸಾಧ್ಯವಿಲ್ಲ. ನೈತಿಕ ಸ್ಥೈರ್ಯ, ಶಕ್ತಿಯಿಂದ ಮಾತ್ರ ವ್ಯಸನಗಳನ್ನು ದೂರ ಇಡಲು ಸಾಧ್ಯ. ವ್ಯಸನಗಳನ್ನು ದೂರ ಮಾಡಲು ಮನಸ್ಸಿನ ಸಂಕಲ್ಪ ಮುಖ್ಯವಾದುದು.

Advertisement

ಮನಸ್ಸಿನ ಸಂಕಲ್ಪ ಗಟ್ಟಿಯಾಗಲು ಶಿಬಿರಗಳನ್ನು ನಮ್ಮ ಮಠದಲ್ಲಿ ಏರ್ಪಡಿಸುವೆವು. ಮಠಗಳು ಇಂಥ ಕೆಲಸಗಳನ್ನು ಮಾಡಬೇಕು ಎಂದರು.

“ಮದ್ಯ ಮುಕ್ತ ಸಮಾಜ’ ಕುರಿತು ಉಪನ್ಯಾಸ ನೀಡಿದ ಸೂರತ್ಕಲ್‌ನ ಸಾಮಾಜಿಕ ಹೋರಾಟಗಾರ್ತಿ ಸ್ವರ್ಣಾಭಟ್‌ ಮಾತನಾಡಿ, ಮದ್ಯಪಾನ ಸಮಾಜ ವಿರೋಧಿ.  ಅದರಲ್ಲೂ ಮಹಿಳಾವಿರೋಧಿ. ಇಂದಿನ
ಚುನಾವಣೆಗಳು ಹಣ ಮತ್ತು ಹೆಂಡದ ಮೇಲೆಯೇ ನಿಂತಿವೆ. ಯಾರೂ ಹೆಂಡದ ಬಗ್ಗೆ ಮಾತನಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ಮದ್ಯಪಾನ ನಿಷೇಧದ ಸಾಧ್ಯತೆಯ ಬಗ್ಗೆ ಯಡಿಯೂರಪ್ಪನವರ ನೇತೃತ್ವದ ಸರಕಾರ ಯೋಚಿಸುತ್ತಿದೆ ಎಂದು ಕೇಳಿ ಆನಂದವಾಯಿತು. ಸರಕಾರದ ಜೊತೆ ಪ್ರಜೆಗಳ ಮೇಲೂ ಜವಾಬ್ದಾರಿ ಇದೆ. ಆದಷ್ಟು ಬೇಗ ನಮ್ಮ ರಾಜ್ಯ ಮದ್ಯಮುಕ್ತ ಸಮಾಜವಾಗಲಿ ಎಂದು ಆಶಿಸಿದರು.

ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಎಸ್‌ ಮಹಾದೇವ ಪ್ರಕಾಶ್‌ ಮಾತನಾಡಿದರು. ಕರ್ನಾಟಕ ಸರ್ಕಾರದ ಕಾನೂನು, ಸಂಸದೀಯ ವ್ಯವಹಾರ, ಜಲಸಂಪನ್ಮೂಲ ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ ರವಿ, ಚಿತ್ರದುರ್ಗ ಜಿಪಂ ಅಧ್ಯಕ್ಷೆ ವಿಶಾಲಾಕ್ಷ್ಮೀ ನಟರಾಜ್‌, ಉಡುಪಿ ಆದರ್ಶ ಹಾಸ್ಪಿಟಲ್‌ನ ಮೆಡಿಕಲ್‌ ಡೈರೆಕ್ಟರ್‌ ಡಾ| ಜಿ ಎಸ್‌ ಚಂದ್ರಶೇಖರ್‌, ಬೆಂಗಳೂರು ಎಂಎಸ್‌ಐಎಲ್‌ ನ ಮ್ಯಾನೇಜಿಂಗ್‌ ಡೈರೆಕ್ಟರ್‌ ಎಚ್‌.ಪಿ. ಪ್ರಕಾಶ್‌, ಚಿತ್ರದುರ್ಗ ಜಿಲ್ಲಾ ರಕ್ಷಣಾಧಿಕಾರಿ ಡಾ| ಅರುಣ್‌ ಕೊ, ಹುಬ್ಬಳ್ಳಿಯ ಕಾರ್ಗಿಲ್‌ ಯುದ್ಧದ ಹೋರಾಟಗಾರ ಕ್ಯಾಪ್ಟನ್‌ ನವೀನ್‌ ನಾಗಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next