ನವದೆಹಲಿ: ಸುಮಾರು ಮೂವತ್ತು ವರ್ಷಗಳ ಹಿಂದೆ ನಡೆದ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸತ್ತ ವ್ಯಕ್ತಿಯನ್ನು ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅರ್ಜುನ್ ಸಿಂಗ್ ಹಾಗೂ ಚರಣ್ ಸಿಂಗ್ ಬಂಧಿತ ಆರೋಪಿಗಳು.
ಅರೆ ಇದೇನಿದು ಸತ್ತ ವ್ಯಕ್ತಿಯ ಬಂಧನ ಎಂದು ಆಶ್ಚರ್ಯ ಪಡಬೇಡಿ, ವಿಚಿತ್ರವಾದರೂ ಸತ್ಯ, ಅಂದಹಾಗೆ 1991 ರಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದರು ಆದರೆ ಆರೋಪಿಗಳ ಪತ್ತೆಯಾಗಲಿಲ್ಲ, ಸುಮಾರು ಏಳು ವರ್ಷಗಳ ಕಾಲ ಕಾರ್ಯಾಚರಣೆ ನಡೆಸಿದರೂ ಆರೋಪಿಗಳ ಸುಳಿವಿಲ್ಲ ಆದರೆ 1998ನೇ ಇಸವಿಯಲ್ಲಿ ಓರ್ವ ಆರೋಪಿಯಾದ ಅರ್ಜುನ್ ಸಿಂಗ್ ಸಾವನ್ನಪ್ಪಿದ್ದಾನೆ ಎಂದು ಸುದ್ದಿ ಹರಡತೊಡಗಿತು ಅದರಂತೆ ಮಾಧ್ಯಮಗಳಲ್ಲೂ ಅರ್ಜುನ್ ಸಿಂಗ್ ಸಾವನ್ನಪ್ಪಿದ್ದಾನೆ ಎಂದು ಸುದ್ದಿ ಬಿತ್ತರವಾಯಿತು ಈ ವೇಳೆ ಪ್ರಕರಣ ಕೋರ್ಟ್ ನಲ್ಲಿದ್ದ ಕಾರಣ ಕಡತವನ್ನು ಬಾಕಿ ಇರಿಸಲಾಯಿತು.
ಅತ್ತ ಅರ್ಜುನ್ ಸಿಂಗ್ ಕಡತಗಳ ಪ್ರಕಾರ ಸಾವನ್ನಪ್ಪಿದ್ದ ಆದರೆ ನಿಜ ಜೀವನದಲ್ಲಿ ಫರೀದಾಬಾದ್ ನ ಹಳ್ಳಿಯೊಂದರಲ್ಲಿ ಮರದ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರೆ ಇನ್ನೋರ್ವ ಆರೋಪಿ ಚರಣ್ ಸಿಂಗ್ ಫರೀದಾಬಾದ್ ನ ಹಳ್ಳಿಯೊಂದರಲ್ಲಿ ಬಾಬಾ ಆಗಿದ್ದ ಅಲ್ಲದೆ ಆತನಿಗೆ ಸುಮಾರು ಐನೂರು ಮಂದಿ ಅನುಯಾಯಿಗಳು ಇದ್ದರು ಎನ್ನಲಾಗಿದೆ.
ಹೀಗೆ ಸುಮಾರು ಮೂವತ್ತು ವರ್ಷ ಕಳೆದವು ಆದರೆ ಇತ್ತೀಚಿಗೆ ಇಬ್ಬರೂ ಆರೋಪಿಗಳು ಇರುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ ಅದರಂತೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬಿಸಿದ್ದಾರೆ ಅದರಂತೆ ಚರಣ್ ಸಿಂಗ್ ನನ್ನ ವಶಕ್ಕೆ ಪಡೆದ ಪೊಲೀಸರು ಆತನ ದಾಖಲೆಗಳನ್ನು ಪರಿಶೀಲಿಸಿದ ವೇಳೆ ಆತನೇ ಆರೋಪಿ ಎಂದು ಗೊತ್ತಾಗಿದೆ ಇದೆ ವೇಳೆ ಆತನ ತೀವ್ರ ವಿಚಾರಣೆ ನಡೆಸಿದಾಗ ಅರ್ಜುನ್ ಸಿಂಗ್ ವಿಚಾರ ಬೆಳಕಿಗೆ ಬಂದಿದೆ. ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಇದನ್ನೂ ಓದಿ : ಪ್ರತಿಭಟನೆ; ರೈತರಿಂದ ರಸಗೊಬ್ಬರ ಲೂಟಿ; ಕಾಂಗ್ರೆಸ್ ಶಾಸಕ ಸೇರಿ ಹಲವರ ವಿರುದ್ಧ ದೂರು