Advertisement

ನೂತನ ಕಾಂಗ್ರೆಸ್ ಕಚೇರಿ ಉದ್ಘಾಟನೆ

03:02 PM Dec 02, 2021 | Team Udayavani |

ಭಟ್ಕಳ: ರಾಜ್ಯ ಸರಕಾರಕ್ಕೆ ಯಾವ ಚುನಾವಣೆಯ ಮೇಲೂ ಕೂಡಾ ಭರವಸೆ ಇಲ್ಲದೇ ಇರುವುದರಿಂದ ಜಿಲ್ಲಾ ಪಂಚಾಯತ್ ಹಾಗೂ ತಾಲೂಕಾ ಪಂಚಾಯತ್ ಚುನಾವಣೆಯನ್ನು ಕ್ಷೇತ್ರ ವಿಂಗಡನೆಯ ನೆಪದಲ್ಲಿ ಮುಂದೂಡಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಆರ್. ವಿ. ದೇಶಪಾಂಡೆ ಅವರು ಆರೋಪಿಸಿದರು.
ಅವರು ಇಲ್ಲಿನ ರಂಗೀಕಟ್ಟೆಯಲ್ಲಿ ನೂತನ ಕಾಂಗ್ರೆಸ್ ಕಚೇರಿಯನ್ನು ಉದ್ಘಾಟಿಸಿ ನಂತರ ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿ ಭೀಮಣ್ಣ ನಾಯ್ಕ ಅವರ ಪರವಾಗಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

Advertisement

ಕಳೆದ 7 ವರ್ಷಗಳಿಂದ ಕೇಂದ್ರ ಸರಕಾರ ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯ ಸರಕಾರವೂ ಕೂಡಾ ಗ್ರಾಮ ಪಂಚಾಯತ್ ವ್ಯವಸ್ಥೆಯಲ್ಲಿ ವಿಶ್ವಾಸವಿಲ್ಲದೇ ಇರುವುದರಿಂದ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಈ ಹಿಂದಿನ ಸಿದ್ಧರಾಮಯ್ಯ ಅವರ ಕಾಂಗ್ರೆಸ್ ಸರಕಾರ ಜಿಲ್ಲೆಗೆ ಕೋಟ್ಯಂತರ ರೂಪಾಯಿ ಅನುದಾನ ನೀಡಿತ್ತು.

ಪ್ರವಾಸೋಧ್ಯಮಕ್ಕೆ ನೂರಾರು ಕೋಟಿ ರೂಪಾಯಿ ಅನುದಾನ ಬಂದಿದ್ದು ಅನೇಕ ಕಡೆಗಳಲ್ಲಿ ಪ್ರವಾಸೋಧ್ಯಮ ಅಭಿವೃದ್ಧಿಯಾಗಿತ್ತು. ಆದರೆ ಇಂದಿನ ಸರಕಾರ ಅಂದು ಮಂಜೂರಿಯಾದ ಮನೆಗಳಿಗೂ ಅನುದಾನ ಬಿಡುಗಡೆ ಮಾಡದೇ ಎಷ್ಟೋ ಮನೆಗಳು ಅರ್ಧಕ್ಕೆ ನಿಂತಿವೆ ಎಂದರಲ್ಲದೇ, ಮಂಕಾಳ ವೈದ್ಯ ಅವರು ಶಾಸಕರಾಗಿದ್ದಾಗ ಭಟ್ಕಳ ವಿಧಾನ ಸಭಾ ಕ್ಷೇತ್ರಕ್ಕೆ 7000 ಮನೆಗಳನ್ನು ಮಂಜೂರಿ ಮಾಡಿಸಿ ದಾಖಲೆ ಮಾಡಿದ್ದರು ಎಂದರು.

ವಿಧಾನ ಪರಿಷತ್ ಅಭ್ಯರ್ಥಿ ಭೀಮಣ್ಣ ನಾಯ್ಕ ಮಾತನಾಡಿ ಉತ್ತರ ಕನ್ನಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಗಟ್ಟಿ ಧ್ವನಿಯನ್ನು ವಿಧಾನ ಪರಿಷತ್‍ನಲ್ಲಿ ಪ್ರತಿನಿಧಿಸಲು, ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸಿ, ಅಲ್ಲಿರುವ ನ್ಯೂನತೆಗಳನ್ನು ಹೋಗಲಾಡಿಸಲು ತಮಗೆ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡುವಂತೆ ಕೋರಿದರು. ಜಿಲ್ಲಾ ಪಂಚಾಯತ್ ಸದಸ್ಯನಾಗಿ ಕೆಲಸ ಮಾಡಿದ ನನಗೆ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ಸಂಕಷ್ಟದ ಅರಿವಿದೆ. ಕಾಂಗ್ರೆಸ್ ಪಕ್ಷದ ಬೆಂಬಲಿತ ಹೆಚ್ಚಿನ ಅಭ್ಯರ್ಥಿಗಳು ಜಿಲ್ಲೆಯಲ್ಲಿದ್ದು ತಮಗೇ ಮತ ನೀಡುವ ಮೂಲಕ ತನ್ನನ್ನು ಆಯ್ಕೆ ಮಾಡಲು ಸಹಕರಿಸುವಂತೆ ಕೋರಿದರು.

ಮಾಜಿ ಶಾಸಕ ಮಂಕಾಳ ಎಸ್. ವೈದ್ಯ ಅವರು ಮಾತನಾಡಿ ನಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಮತದಾರರು ನಮ್ಮ ಪಕ್ಷದವರೇ ಇದ್ದಾರೆ. ಎಲ್ಲರೂ ಕೂಡಾ ತಮ್ಮ ತಮ್ಮ ಚುನಾವಣೆಯಲ್ಲಿ ಆರಿಸಿ ಬರುವಾಗ ನಮ್ಮ ಪಕ್ಷ ಅವರ ಬೆನ್ನಿಗೆ ನಿಂತು ಅವರಿಗೆ ಅಗತ್ಯದ ಸಹಾಯ, ಸಹಕಾರವನ್ನು ಮಾಡಿ ಗೆಲ್ಲಿಸಿದೆ. ನಂತರದಲ್ಲಿಯೂ ಕೂಡಾ ಅವರೊಂದಿಗೆ ಇದ್ದೇವೆ ಎನ್ನುವ ಭರವಸೆ ಅವರಿಗೆ ಇರುವುದರಿಂದ ಯಾವುದೇ ಬೇರೆ ಆಸೆ, ಆಮಿಷಕ್ಕೆ ಬೆಲೆ ಕೊಡದೇ ನಮ್ಮ ಅಭ್ಯರ್ಥಿಗೆ ಮತ ಹಾಕಿ ಗೆಲ್ಲಿಸುತ್ತಾರೆನ್ನುವ ವಿಶ್ವಾಸ ಇದೆ ಎಂದರು.

Advertisement

ಇದನ್ನೂ ಓದಿ:- ಒಮಿಕ್ರಾನ್ ಆತಂಕ: ದೇಶದಲ್ಲಿ ಶೇ.14ರಷ್ಟು ವಿದ್ಯಾರ್ಥಿಗಳ ಹಾಜರಾತಿ ಇಳಿಕೆ ಸಾಧ್ಯತೆ; ಸಮೀಕ್ಷೆ

ಅಂಜುಮಾನ್ ಅಧ್ಯಕ್ಷ ಮುಝಮ್ಮಿಲ್ ಖಾಜಿಯಾ ಮಾತನಾಡಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಆರ್. ಎನ್. ನಾಯ್ಕ, ಮಾಜಿ ಶಾಸಕ ಜೆ.ಡಿ.ನಾಯ್ಕ, ಶ್ರೀಪಾದ ಹೆಗಡೆ ಕಡವೆ, ನಿವೇದಿತ ಆಳ್ವಾ, ಸಾಯಿ ಗಾಂವಕರ್, ತಂಜೀಂ ಅಧ್ಯಕ್ಷ ಎಸ್. ಎಂ ಪರ್ವೇಜ್, ಪುರಸಭಾ ಅಧ್ಯಕ್ಷ ಪರ್ವೇಜ್ ಕಾಶಿಮಜಿ, ಭಾಸ್ಕರ ನಾರ್ವೆಕರ್, ಜಯಶ್ರೀ ಮೊಗೇರ, ವನಿತಾ ನಾಯ್ಕ, ರಾಮಾ ಮೊಗೇರ ಮುಂತಾದವರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ಎಂ. ನಾಯ್ಕ ಸ್ವಾಗತಿಸಿದರು. ದೇವಿದಾಸ ಆಚಾರ್ಯ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next