ಹುಬ್ಬಳ್ಳಿ: ಬ್ಯಾಂಕ್ ಆಫ್ ಇಂಡಿಯಾದ ಹು-ಧಾ ವಲಯವು ಸಾಲ ನೀಡಿಕೆ ಸೇರಿದಂತೆ ಇನ್ನಿತರೆ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಹೊಸ ಪರಿಕಲ್ಪನೆ, ಯೋಜನೆ ರೂಪಿಸಿದೆ ಎಂದು ಬ್ಯಾಂಕ್‌ನ ಮಹಾ ಪ್ರಬಂಧಕ ರಾಘವೇಂದ್ರ ವಿ. ಕೊಳ್ಳೇಗಾಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬ್ಯಾಂಕ್‌ನ ಹು-ಧಾ ವಲಯ ಕಚೇರಿಯಿಂದ ವಲಯ ಮಟ್ಟದಲ್ಲಿ ಕೆಳ ಹಂತದಿಂದ ಮೇಲ್ಮಟ್ಟದ ವರೆಗಿನ ವಿಚಾರ-ವಿಮರ್ಶೆಗಳ ಆರಂಭಿಕ ಹಂತದ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಅರ್ಥವ್ಯವಸ್ಥೆಯ ವಿಭಿನ್ನ ಕ್ಷೇತ್ರಗಳಲ್ಲಿ ಯಾವ ರೀತಿ ಸಾಲಗಳ ಉಪಲಬ್ಧತೆ ಪಡೆಯಬಹುದು ಎಂಬುದನ್ನು ಚರ್ಚಿಸಲಾಗಿದೆ. ಬ್ಯಾಂಕ್ ಅನ್ನು ನಾಗರಿಕ ಕೇಂದ್ರಿತ ಮಾಡುವುದು ಹಾಗೂ ಹಿರಿಯ ನಾಗರಿಕರು, ರೈತರು, ಸಣ್ಣ ಉದ್ಯಮ, ವ್ಯವಸಾಯ, ಯುವ ಜನಾಂಗ, ಮಹಿಳೆಯರ ಆಕಾಂಕ್ಷೆಗಳಿಗೆ ಸಂವೇದನೆ ವ್ಯಕ್ತಪಡಿಸುವುದು ಇದರ ಉದ್ದೇಶವಾಗಿದೆ. ಆ ಮೂಲಕ 2024-25ನೇ ಸಾಲಿಗೆ ಭಾರತದ ಅರ್ಥವ್ಯವಸ್ಥೆಯನ್ನು 5 ಟ್ರಿಲಿಯನ್ ಡಾಲರ್‌ಗೆ ಏರಿಸುವಲ್ಲಿ ಯಶಸ್ವಿಯಾಗಬಹುದು ಎಂದರು.
ಆರ್ಥಿಕ ಅಭಿವೃದ್ಧಿಯಲ್ಲಿ ವಿಭಿನ್ನ ರಾಷ್ಟ್ರೀಯ ಪ್ರಾಥಮಿಕತೆಗಳಿಗೆ ಬ್ಯಾಂಕ್‌ನ ಕೊಡುಗೆ ಬಗ್ಗೆ ಸಮೀಕ್ಷೆ, ಆರ್ಥಿಕ ವೃದ್ಧಿಯಲ್ಲಿ ಸಾಲ ವಿತರಣೆ, ಮೂಲಸೌಕರ್ಯ ಹಾಗೂ ಉದ್ಯೋಗ, ಕೃಷಿ ಕ್ಷೇತ್ರ, ಲಘು ಉದ್ಯಮ, ಮುದ್ರಾ ಸಾಲ, ಶೈಕ್ಷಣಿಕ ಸಾಲ, ಮಹಿಳಾ ಸಬಲೀಕರಣ, ನೇರ ಲಾಭ ವರ್ಗಾವಣೆ, ನಗದು ರಹಿತ/ಡಿಜಿಟಲ್ ಅರ್ಥವ್ಯವಸ್ಥೆ ಸೇರಿದಂತೆ ಇನ್ನಿತರೆ ವಿಷಯಗಳ ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದರು.
ವಲಯ ಪ್ರಬಂಧಕ ಬಿ.ವಿ. ರಾಮಕೃಷ್ಣ, ಉಪ ವಲಯ ಪ್ರಬಂಧಕ ಪಿ.ಜಿ. ಪಪ್ಪು ಇನ್ನಿತರರಿದ್ದರು.
3500 ಕೋಟಿ ಸಾಲ ನೀಡಿಕೆ: ಬ್ಯಾಂಕ್ ಆಫ್ ಇಂಡಿಯಾ ಈಗಾಗಲೇ ಆದ್ಯತೆ ಕ್ಷೇತ್ರಕ್ಕೆ 3500 ಕೋಟಿ ರೂ. ಸಾಲ ನೀಡಿದೆ. ಅದರಲ್ಲಿ ಮುದ್ರಾ ಯೋಜನೆಯಡಿ ಎಂಎಸ್‌ಎಂಇಗೆ 500 ಕೋಟಿ ರೂ. ನೀಡಿದೆ. ಎನ್‌ಪಿಆರ್‌ಎಸ್ ಶೇ. 7.5ರಷ್ಟಿದೆ. ಒಟ್ಟು 3500 ಕೋಟಿ ರೂ. ಸಾಲ ನೀಡಿಕೆಯಲ್ಲಿ 260 ಕೋಟಿ ರೂ. ಬಾಕಿಯಿದೆ. ಅದರಲ್ಲಿ 160 ಕೋಟಿ ರೂ. ಕೃಷಿಯದ್ದಾಗಿದೆ. ಗ್ರಾಹಕರಿಗೆ ಬ್ಯಾಂಕ್‌ನ ಸೌಲಭ್ಯ, ಸವಲತ್ತು ಕುರಿತು ತಿಳಿಸಲು ಬ್ಯಾಂಕಿನ ಸಿಬ್ಬಂದಿಗೆ ಪುನಶ್ಚೇತನ ಹಾಗೂ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಸೈಬರ್ ಕ್ರೈಂ ತಡೆಗಟ್ಟಲು ಪ್ರತ್ಯೇಕವಾಗಿ ಘಟಕ ಸ್ಥಾಪಿಸಿ ಸಿಐಎಸ್‌ಒ ಹಿರಿಯ ಅಧಿಕಾರಿ ನೇಮಿಸಲಾಗುವುದು. ಗ್ರಾಮೀಣ ಭಾಗಗಳಲ್ಲಿ ಬ್ಯಾಂಕಿಂಗ್ ವ್ಯವಹಾರ ಹೆಚ್ಚಿಸಲು ಬ್ಯುಸಿನೆಸ್ ಕರೆಸ್ಪಾಂಡೆನ್ಸ್‌ಗಳ ಸಂಖ್ಯೆ ಹೆಚ್ಚಿಸಲಾಗುವುದು. ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡುವ ಸಲುವಾಗಿ ಬ್ಯಾಂಕಿನ ಸಿಬ್ಬಂದಿಯಿಂದ ಒಂದು ದಿನದ ಸಂಬಳ ನೀಡಲಾಗುವುದು ಎಂದರು.