ಆಷಾಢ ಶುರುವಾಗುವ ಮುನ್ನ ಒಂದಿಷ್ಟು ಚಿತ್ರಗಳು ಶುರುವಾಗುವುದು ಸಹಜ. ಈ ಬಾರಿಯೂ ಅದಕ್ಕೆ ಹೊರತಲ್ಲ. ಆಷಾಢ ಶುರುವಾಗುವುದಕ್ಕೆ ಇನ್ನೊಂದು ವಾರವಿದ್ದು, ಕಳೆದ ಒಂದು ವಾರದಲ್ಲಿ ಹಲವು ಚಿತ್ರಗಳು ಶುರುವಾಗಿವೆ. ವಿಶೇಷವೆಂದರೆ, ಈ ಬಾರಿ ಶುರುವಾಗಿರುವುದರಲ್ಲಿ ಹೊಸಬರ ಚಿತ್ರಗಳ ಪಾಲು ದೊಡ್ಡದಿದೆ. ಈ ಒಂದು ವಾರದಲ್ಲಿ ಏನಿಲ್ಲವೆಂದರೂ ಎಂಟು ಹೊಸಬರ ಚಿತ್ರಗಳು ಶುರುವಾಗಿವೆ.
ಈ ಚಿತ್ರಗಳ ಪೈಕಿ ಒಂದೆರೆಡು ಚಿತ್ರಗಳಲ್ಲಿ ನಿರ್ದೇಶಕರು, ಕಲಾವಿದರು ಹಳಬರು ಎನ್ನುವುದು ಬಿಟ್ಟರೆ, ಮಿಕ್ಕಂತೆ ಎಲ್ಲಾ ಚಿತ್ರಗಳು ಹೊಸಬರ ದಂಡೇ ತಮ್ಮ ಅದೃಷ್ಟ ಪರೀಕೆಗೆ ಇಳಿದಿದೆ ಎಂದರೆ ತಪ್ಪಿಲ್ಲ. ವಿಕಾಸ್ ಮದಕರಿ ಎಂಬ ಯುವ ಪ್ರತಿಭೆ “ಕರಾಬ್ ದುನಿಯಾ’ ಎಂಬ ಸಿನಿಮಾ ಶುರು ಮಾಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಾಯಕರಾಗಿಯೂ ನಟಿಸುತ್ತಿದ್ದಾರೆ ವಿಕಾಸ್ ಮದಕರಿ. ಈ ಚಿತ್ರವನ್ನು ಶೇಖರ್ ಸಿ ಹಾಗೂ ಯೋಗೇಶ್ ಪಿ. ನಿರ್ಮಾಣ ಮಾಡುತ್ತಿದ್ದಾರೆ.
ವೀನಸ್ ಮೂರ್ತಿ ಕ್ಯಾಮೆರಾ ಹಿಡಿದಿದ್ದಾರೆ. ಥ್ರಿಲ್ಲರ್ ಮಂಜು ಸೇರಿದಂತೆ ಹಲವು ಗಣ್ಯರು ಹೊಸಬರ ಈ “ಕರಾಬ್ ದುನಿಯಾ’ಗೆ ಶುಭಹಾರೈಸಿದ್ದಾರೆ. ಇನ್ನು, ಸರ್ವಂ ಪ್ರೇಮಂ’ ಎಂಬ ಮತ್ತೂಂದು ಹೊಸಬರ ಚಿತ್ರ ಕೂಡ ಸೆಟ್ಟೇರಿದೆ. ಹಿರಿಯ ನಿರ್ದೇಶಕ ಭಗವಾನ್ ಅವರು ಚಿತ್ರಕ್ಕೆ ಕ್ಲಾಪ್ ಮಾಡಿದರೆ, ತಿಪಟರೂ ರಘು ಕ್ಯಾಮೆರಾ ಚಾಲನೆ ಮಾಡುವ ಮೂಲಕ ಶುಭ ಹಾರೈಸಿದ್ದಾರೆ. ಶಿವರಾಜ್ ನಿರ್ದೇಶನದ ಈ ಚಿತ್ರಕ್ಕೆ ಆನಂದ್ ಗಣೇಶ್ ನಾಯಕರಾದರೆ, ಸುಹಾನ ರವಿ ನಾಯಕಿ, ಲೋಕಿ ಸಂಗೀತವಿದೆ.
“ಜಲ್ಲಿಕಟ್ಟು’ ಎಂಬ ಮತ್ತೂಂದು ಹೊಸಬರ ಚಿತ್ರಕ್ಕೂ ಚಾಲನೆ ಸಿಕ್ಕಿದೆ. ಅಲ್ವಿನ್ ಪ್ರಾನ್ಸಿಸ್ ನಿರ್ದೇಶನದ ಈ ಚಿತ್ರಕ್ಕೆ “ಧಮ್ ಇದ್ರೆ ಮುಟ್ಟು’ ಎಂಬ ಅಡಿಬರಹವಿದೆ. ಅಲ್ಲಿಗೆ ಇದೊಂದು ಪಕ್ಕಾ ರಾ ಫೀಲ್ ಇರುವ ಸಿನಿಮಾ ಎಂಬುದು ಗೊತ್ತಾಗುತ್ತೆ. ಪ್ರಭುಸೂರ್ಯ, ಧನು ಗೌಡ ಹಾಗೂ ಹಿತೇಶ್ ಜಾದವ್ ನಾಯಕರಾದರೆ, ಶೃತಿ, ವಸಂತಿ, ಸಾಗರಿಕ ನಾಯಕಿಯರು. ಉಳಿದಂತೆ ರಮೇಶ್‌ಭಟ್, “ಉಗ್ರಂ’ ರವಿ, ಮಂಡ್ಯ ರಮೇಶ್ ಇತರರು ಇದ್ದಾರೆ. ಭುವನ್ ಸುರೇಶ್, ಹರೀಶ್ ನಾಗರಾಜು ನಿರ್ಮಾಪಕರು.
ವಿಜಯ್ ಸಂಗೀತವಿದೆ. ವೀರೇಶ್ ಛಾಯಾಗ್ರಹಣವಿದೆ. “ನಾನು ಇಷ್ಟಾ ಆದ್ನಾ’ ಎಂಬ ಮತ್ತೂಂದು ಹೊಸಬರ ಚಿತ್ರಕ್ಕೂ ಈಗಾಗಲೇ ಮುಹೂರ್ತ ಆಗಿದೆ. ಹರೀಶ್ ಮೂಡಿಗೆರೆ ನಿರ್ದೇಶನದ ಈ ಚಿತ್ರದಲ್ಲಿ ಕರಣ್, ಉದಯ್, ಚೈತನ್ಯ, ನಕುಲ್ ಗೋವಿಂದ್, ಬ್ಯಾಂಕ್ ಜನಾರ್ದನ್ ಇತರರು ನಟಿಸಲಿದ್ದಾರೆ. ಗಿರಿಧರ್ ದಿವಾನ್ ಸಂಗೀತವಿದೆ, ಮನೋಹರ್ ಛಾಯಾಗ್ರಹಣವಿದೆ. ಥ್ರಿಲ್ಲರ್ ಮಂಜು ಸ್ಟಂಟ್ ಹೇಳಿಕೊಡಲಿದ್ದಾರೆ. ಭಾರ್ಗವ್ ಯೋಗಂಬರ್ ನಿರ್ದೇಶನದ “ಡೇವಿಡ್’ ಸಿನಿಮಾ ಕೂಡ ಸೋಮವಾರ (ಇಂದು) ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ ಕಾಣಲಿದೆ.
ಈ ಚಿತ್ರದಲ್ಲಿ ಪ್ರತಾಪ್ ನಾರಾಯಣ್, ಕಾವ್ಯಾ ಶಾ, ಶ್ರೇಯಸ್, ಅವಿನಾಶ್, ಪ್ರಶಾಂತ್ ಸಿದ್ಧಿ ಇತರರು ನಟಿಸುತ್ತಿದ್ದಾರೆ. ಇದರೊಂದಿಗೆ ಮಾ.ಚಂದ್ರು ನಿರ್ದೇಶನದ “ಶಿವನಪಾದ’ ಚಿತ್ರವೂ ಕೂಡ ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ ನಡೆಯಲಿದೆ. ಈ ಚಿತ್ರದಲ್ಲಿ ಬಹುತೇಕ ಹೊಸ ಪ್ರತಿಭೆಗಳಿವೆ. ಆನಂದ್‌ಕುಮಾರ್, ಕೃಷ್ಣ ನಾಯಕರಾದರೆ, ಚಿರಶ್ರೀ, ಮಮತಾರಾವತ್ ಇದ್ದಾರೆ.
ನಿವೃತ್ತ ಪೊಲೀಸ್ ಅಧಿಕಾರಿ ಸಾಂಗ್ಲಿಯಾನ ಪೊಲೀಸ್ ಅಧಿಕಾರಿಯಾಗಿ ವಿಶೇಷ ಪಾತ್ರ ಮಾಡುತ್ತಿದ್ದಾರೆ. “ನೀನಿಲ್ಲದೆ ನಾನಿಲ್ಲ’ ಎಂಬ ಇನ್ನೊಂದು ಹೊಸಬರ ಚಿತ್ರವೂ ಸಹ ಜೂನ್ 22 ರಂದು ಕಂಠೀರವ ಸ್ಟುಡಿಯೋದಲ್ಲಿ ಸೆಟ್ಟೇರಲಿದೆ. ಬದ್ರಿನಾಥ್ ನಿರ್ದೇಶನದ ಈ ಚಿತ್ರವನ್ನು ನಂದಕೃಷ್ಣ ನಿರ್ಮಿಸುತ್ತಿದ್ದಾರೆ. ಆರ್ಯನ್ ಈ ಚಿತ್ರದ ಮೂಲಕ ಹೀರೋ ಆಗುತ್ತಿದ್ದಾರೆ. ಬಾಲಾಜಿ ಸಂಗೀತವಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಚಿತ್ರಕ್ಕೆ ಕ್ಲಾಪ್ ಮಾಡಲಿದ್ದಾರೆ. ಅಂದು ಅನೇಕ ಗಣ್ಯರು ಹಾಜರಾಗಲಿದ್ದಾರೆ.