Advertisement

ಹಳೆಯ ಟೈಟಲ್‌ನಡಿ ಹೊಸ ಕಾಮಿಡಿ

11:12 AM Nov 03, 2018 | |

ಒಂದು ಯಶಸ್ವಿ ಚಿತ್ರದ ಮುಂದುವರಿದ ಭಾಗ ಮಾಡುವಾಗ ಮುಖ್ಯವಾಗಿ ಏನೆಲ್ಲವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬ ಗೊಂದಲ ಅನೇಕರಲ್ಲಿದೆ. ಕೆಲವರು ಕಥೆ, ಪಾತ್ರ, ಮ್ಯಾನರೀಸಂ, ಪಾತ್ರಗಳ ಹೆಸರು, ಇಡೀ ಸಿನಿಮಾದ ವಾತಾವರಣ …ಹೀಗೆ ಅನೇಕ ವಿಷಯಗಳನ್ನು ಗಮನದಲ್ಲಿಟ್ಟುಕೊಂಡೇ ಮುಂದುವರಿದ ಭಾಗ ಮಾಡುತ್ತಾರೆ. “ವಿಕ್ಟರಿ-2′ ತಂಡ ಕೂಡಾ ಇವೆಲ್ಲದರ ಬಗ್ಗೆ ಸ್ವಲ್ಪ ಹೆಚ್ಚೇ ಗಮನಹರಿಸುವ ಜೊತೆಗೆ ಚಿತ್ರದ ಪ್ರಮುಖ ಪಾತ್ರವನ್ನು ಡಬಲ್‌ ಮಾಡುವ ಮೂಲಕ ಇಡೀ ಕಥೆಗೆ ಹೊಸ ಟ್ವಿಸ್ಟ್‌ ಕೊಡುತ್ತಾ ಮುಂದುವರಿದ ಭಾಗ ಮಾಡಿದೆ.

Advertisement

ಈ ಮೂಲಕ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಲು ಚಿತ್ರತಂಡ ಪ್ರಯತ್ನಿಸಿರುವುದು ಸುಳ್ಳಲ್ಲ. ಚಿತ್ರದ ಟೈಟಲ್‌ ಕಾರ್ಡ್‌ನಲ್ಲಿ “ವಿಕ್ಟರಿ’ ಚಿತ್ರದ ಒಂದಷ್ಟು ದೃಶ್ಯಗಳು, ಸನ್ನಿವೇಶಗಳನ್ನು ತೋರಿಸುತ್ತಾ, ಇದು “ವಿಕ್ಟರಿ’ ಚಿತ್ರದ ಮುಂದುವರಿದ ಭಾಗ ಎನ್ನುವುದನ್ನು ಪ್ರೇಕ್ಷಕರಿಗೆ ಮನದಟ್ಟು ಮಾಡುತ್ತಲೇ, ಕಥೆ “ವಿಕ್ಟರಿ-2’ಗೆ ಎಂಟ್ರಿಕೊಡುತ್ತದೆ. ಮೂಲ ಚಿತ್ರದಲ್ಲಿ ನೀವು ಚಂದ್ರು ಹಾಗೂ ಮುನ್ನ ಎಂಬ ಎರಡು ಪಾತ್ರಗಳನ್ನು ನೋಡಿದರೆ, ಇಲ್ಲಿ ಅದಕ್ಕೆ ಇನ್ನೆರಡು ಪಾತ್ರಗಳು ಸೇರಿಕೊಂಡಿವೆ – ಚಂದ್ರು, ಮುನ್ನ, ಸಲೀಂ ಹಾಗೂ ರಿಚ್ಚಿ.

ಎಲ್ಲದರಲ್ಲೂ ಶರಣ್‌ ಕಮಾಲ್‌. ಎಲ್ಲಾ ಓಕೆ, ಇಷ್ಟು ಪಾತ್ರಗಳು ಹೇಗೆ ಹುಟ್ಟಿಕೊಂಡವು ಎಂಬ ಕುತೂಹಲವಿದ್ದರೆ ನೀವು ಸಿನಿಮಾ ನೋಡಬಹುದು. ಚಿತ್ರಕ್ಕೆ ಕಥೆ ಬರೆದಿರುವ ತರುಣ್‌ ಸುಧೀರ್‌ ಇಡೀ ಸಿನಿಮಾದಲ್ಲಿ ಸಾಕಷ್ಟು ಟ್ವಿಸ್ಟ್‌ಗಳನ್ನು ಇಟ್ಟಿದ್ದಾರೆ. ಸನ್ನಿವೇಶಗಳ ಮೇಲೆ ಸನ್ನಿವೇಶಗಳು ಬರುವ ಮೂಲಕ ಪ್ರೇಕ್ಷಕನಿಗೂ ಪಾತ್ರ, ದೃಶ್ಯಗಳನ್ನು ರಿವೈಂಡ್‌ ಮಾಡಿ ಕಥೆಗೆ ಕನೆಕ್ಟ್ ಮಾಡಿಕೊಂಡು ಹೋಗುವ ಕೆಲಸ ಕೊಟ್ಟಿದ್ದಾರೆ. ಕಾಮಿಡಿ ಸಿನಿಮಾಗಳಲ್ಲಿ ಕಥೆ ಬಯಸಬಾರದು, ಆ ಕ್ಷಣದ ಸನ್ನಿವೇಶಗಳನ್ನು ಎಂಜಾಯ್‌ ಮಾಡಬೇಕೆಂಬುದು ಅನೇಕರು ಪಾಲಿಸಿಕೊಂಡು ಬಂದ ನಿಯಮ.

“ವಿಕ್ಟರಿ-2’ನಲ್ಲೂ ಅದೇ ಮುಂದುವರಿದಿದೆ. ಇಲ್ಲಿ ಇರೋದು ಒನ್‌ಲೈನ್‌ ಕಥೆ. ಅದು ಕೂಡಾ ಗಂಭೀರವಾಗಿರುವಂಥದ್ದು. ಆದರೆ, ಸಿನಿಮಾ ನಿಮಗೆ ಮಜಾ ಕೊಡುತ್ತದೆ ಎಂದರೆ ಅದಕ್ಕೆ ಕಾರಣ ಚಿತ್ರದಲ್ಲಿ ಬರುವ ಸನ್ನಿವೇಶಗಳು ಹಾಗೂ ಗೆಟಪ್‌ಗ್ಳು. ಚಿತ್ರ ಆರಂಭವಾಗಿ ಸ್ವಲ್ಪ ಹೊತ್ತಿಗೆ ಶರಣ್‌ ಹಾಗೂ ರವಿಶಂಕರ್‌ ಅವರ ಲೇಡಿ ಗೆಟಪ್‌ನಲ್ಲಿ ಮಿಂಚಲಾರಂಭಿಸುತ್ತಾರೆ. ಅಲ್ಲಿಂದ ನಿಮಗೆ ನಗುವ ಸರದಿ. ಹಾಗಂತ ಇಲ್ಲಿ ಅದ್ಭುತವಾದ ಪಂಚಿಂಗ್‌ ಡೈಲಾಗ್‌ಗಳಿವೆ ಎಂದಲ್ಲ, ಬದಲಾಗಿ ಶರಣ್‌ ಹಾಗೂ ರವಿಶಂಕರ್‌ ಅವರ ಮ್ಯಾನರೀಸಂ, ಗೆಟಪ್‌ ನಿಮ್ಮ ನಗುವಿಗೆ ಕಾರಣವಾಗುತ್ತದೆ.

ಚಿತ್ರದ ನಿಜವಾದ ಕಥೆ ತೆರೆದುಕೊಳ್ಳುವುದು ದ್ವಿತೀಯಾರ್ಧದಲ್ಲಿ. ಹಾಗಾಗಿ, ಮೊದಲರ್ಧ ಒಂದಷ್ಟು ಸನ್ನಿವೇಶಗಳಲ್ಲಿ ಮುಗಿದು ಹೋಗುತ್ತದೆ. ಇಲ್ಲಿ ಹೆಚ್ಚಿನದ್ದನ್ನು ನೀವು ನಿರೀಕ್ಷಿಸುವಂತಿಲ್ಲ. ಚಿತ್ರದ ಒನ್‌ಲೈನ್‌ ಕಥೆ ಗಂಭೀರವಾಗಿದೆ. ಒಂದು ಹಂತದಲ್ಲಿ ಸಿನಿಮಾ ಸೀರಿಯಸ್‌ ಅಗುತ್ತದೆ ಎಂದುಕೊಳ್ಳುವಷ್ಟರಲ್ಲಿ ಮತ್ತೆ ಕಾಮಿಡಿ ದೃಶ್ಯಗಳು, “ನಮ್ಮನ್ನು ಮರೆಯಂಗಿಲ್ಲ’ ಎನ್ನುವಂತೆ ಬರುತ್ತವೆ. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಬರುವ ಒಂದಷ್ಟು ಸನ್ನಿವೇಶಗಳನ್ನು ಟ್ರಿಮ್‌ ಮಾಡುವ ಅವಕಾಶ ನಿರ್ದೇಶಕರಿಗಿದೆ. ಜೊತೆಗೆ “ಹಾವು’ ಸನ್ನಿವೇಶ ಮಕ್ಕಳಿಗೆ ಮಜಾ ಕೊಡಬಹುದಷ್ಟೇ. ಅದು ಬಿಟ್ಟರೆ “ವಿಕ್ಟರಿ-2’ನಲ್ಲಿ ನಗುವಿಗೆ ಭರವಿಲ್ಲ. 

Advertisement

ಇಡೀ ಸಿನಿಮಾದ ಹೈಲೈಟ್‌ ಶರಣ್‌. ನಾನಾ ಗೆಟಪ್‌ಗ್ಳಲ್ಲಿ ಕಾಣಿಸಿಕೊಂಡ ಶರಣ್‌, ಲೇಡಿ ಗೆಟಪ್‌ನಲ್ಲಿ, ಡ್ಯಾನ್ಸ್‌ನಲ್ಲಿ ಶಿಳ್ಳೆ ಗಿಟ್ಟಿಸುತ್ತಾರೆ. ಇನ್ನು, ರವಿಶಂಕರ್‌, ತಾನು ವಿಲನ್‌ ಪಾತ್ರಧಾರಿ, ನನ್ನನ್ನು ಕಾಮಿಡಿಯನ್‌ ಮಾಡಿದಿರಿ ಎಂದು ಆಗಾಗ ಬೇಸರಿಸುತ್ತಲೇ ನಗಿಸಿದ್ದಾರೆ. ಉಳಿದಂತೆ ನಾಯಕಿಯರಾದ ಅಸ್ಮಿತಾ ಹಾಗೂ ಅಪೂರ್ವ ನಟನೆಗೆ ಇಲ್ಲಿ ಹೆಚ್ಚಿನ ಅವಕಾಶವಿಲ್ಲ. ಚಿತ್ರದಲ್ಲಿ ತಬಲ ನಾಣಿ, ಮಿತ್ರ, ಅವಿನಾಶ್‌, ಕಲ್ಯಾಣಿ, ನಾಜರ್‌, ಸಾಧು ಕೋಕಿಲ ಸೇರಿದಂತೆ ಇತರರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಹಾಡುಗಳು ಇಷ್ಟವಾಗುತ್ತವೆ.

ಚಿತ್ರ: ವಿಕ್ಟರಿ 2
ನಿರ್ಮಾಣ: ತರುಣ್‌ ಶಿವಪ್ಪ ಹಾಗೂ ಮಾನಸ ತರುಣ್‌
ನಿರ್ದೇಶನ: ಹರಿ ಸಂತೋಷ್‌
ತಾರಾಗಣ: ಶರಣ್‌, ಅಸ್ಮಿತಾ, ಅಪೂರ್ವ, ಸಾಧುಕೋಕಿಲ, ರವಿಶಂಕರ್‌, ತಬಲ ನಾಣಿ ಮತ್ತಿತರರು.

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next