ಬೆಂಗಳೂರು: ಧನ್ಯವಾದ್ ಮೋದಿ.. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಧೂಳೆಬ್ಬಿಸುವುದಕ್ಕಾಗಿ ಬಿಜೆಪಿ ಇಂತಹದೊಂದು ವಿನೂತನ ಅಭಿಯಾನ ಪ್ರಾರಂಭಿಸಲು ನಿರ್ಧರಿಸಿದ್ದು ಮುಂದಿನ ಒಂದು ತಿಂಗಳ ಕಾಲ ವಿವಿಧ ಸೈಬರ್ ವೇದಿಕೆಗಳಲ್ಲಿ ಇದು ವಿಜೃಂಭಿಸಲಿದೆ.
ಪ್ರಧಾನಿ ನರೇಂದ್ರ ಮೋದಿಯವರ ಹತ್ತು ವರ್ಷಗಳ ಅವಧಿಯಲ್ಲಿ ಜಾರಿಗೆ ತಂದ ಮಹತ್ವದ ಜನಪರ ಯೋಜನೆಗಳನ್ನು ಮುಂದಿಟ್ಟುಕೊಂಡು ಈ ಅಭಿಯಾನ ಪ್ರಾರಂಭಿಸಲಾಗುತ್ತಿದೆ. ಎರಡನೇ ಹಂತದ ಮತದಾನದ ದಿನಾಂಕವನ್ನು ದೃಷ್ಟಿಯಲ್ಲಿಟ್ಟುಕೊಂಡು ಒಟ್ಟು 30 ದಿನಗಳ ಕಾಲ ಅಭಿಯಾನ ನಡೆಯಲಿದ್ದು ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ವಿ.ಸುನಿಲ್ ಕುಮಾರ್ ಶನಿವಾರ ಇದಕ್ಕೆ ಚಾಲನೆ ನೀಡಲಿದ್ದಾರೆ.
ಮೋದಿ ಆಡಳಿತಾವಧಿಯಲ್ಲಿ ಅನುಷ್ಠಾನಗೊಂಡ ಹಾಗೂ ಕರ್ನಾಟಕದಲ್ಲಿ ದೊಡ್ಡ ಪ್ರಮಾಣದಲ್ಲಿ ಫಲಾನುಭವಿಗಳನ್ನು ತಲುಪಿದ ಯೋಜನೆಗಳನ್ನು ಮತದಾರರಿಗೆ ತಲುಪಿಸುವುದು ಇದರ ಉದ್ದೇಶ. ಪ್ರತಿಯೊಂದು ಕಾರ್ಯಕ್ರಮದ ಹೆಸರು, ಅದರಿಂದ ರಾಜ್ಯಕ್ಕೆ ಆದ ಲಾಭವನ್ನು 30 ನಿಮಿಷದ ವಿಡಿಯೋ ರೂಪದಲ್ಲಿ ಕಟ್ಟಿಕೊಟ್ಟು, ಕೊನೆಯಲ್ಲಿ ಜನತೆಯ ಪರವಾಗಿ ಇಂಥ ಯೋಜನೆ ರೂಪಿಸಿದ ನಿಮಗೆ ಕೃತಜ್ಞತೆ ಎಂದು ಹೇಳುವುದು “ಧನ್ಯವಾದ್ ಮೋದಿ’ ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ಪ್ರತಿ ದಿನ ಒಬ್ಬೊಬ್ಬ ನಾಯಕರು ಒಂದೊಂದು ಯೋಜನೆಗೆ ಸಂಬಂಧಪಟ್ಟ ವಿಡಿಯೋವನ್ನು ಬಿಜೆಪಿ ಕಚೇರಿಯಲ್ಲಿ ಸಾಂಕೇತಿಕವಾಗಿ ಬಿಡುಗಡೆಗೊಳಿಸಿ, ನಂತರ ಎಲ್ಲ ಪದಾಧಿಕಾರಿಗಳು, ಕಾರ್ಯಕರ್ತರು, ಶಾಸಕರು ಹಾಗೂ ಪ್ರಮುಖ ನಾಯಕರು ತಮ್ಮ ವಾಟ್ಸಾಫ್ ಡಿಪಿಯಲ್ಲಿ ಇದನ್ನು ಹಾಕಿಕೊಳ್ಳುತ್ತಾರೆ. ಜತೆಗೆ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸಾಫ್, ಇನ್‌ಸ್ಟಾಗ್ರಾಮ್ ಹಾಗೂ ವೈಯಕ್ತಿಕ ಯೂಟ್ಯೂಬ್ ಚಾನಲ್‌ಗಳಿದ್ದರೆ ಅಲ್ಲಿ ಈ ವಿಡಿಯೋ ಹಂಚಿಕೊಳ್ಳುತ್ತಾರೆ. ಈ ಮೂಲಕ ಪ್ರತಿ ದಿನ ಕೋಟ್ಯಂತರ ಜನರಿಗೆ ಮೋದಿ ಯೋಜನೆಯನ್ನು ತಲುಪಿಸುವುದಕ್ಕೆ ಬಿಜೆಪಿ ಯೋಜನೆ ರೂಪಿಸಿದ್ದು ಇದಕ್ಕಾಗಿ ಒಟ್ಟು 40 ವಿಡಿಯೋಗಳನ್ನು ಸಿದ್ಧಪಡಿಸಲಾಗಿದೆ.
ಅಭಿಯಾನಕ್ಕೆ ಸಂಬಂಧಪಟ್ಟಂತೆ “ಉದಯವಾಣಿ’ ಜತೆಗೆ ಮಾತನಾಡಿದ ಸುನಿಲ್ ಕುಮಾರ್, “ಪ್ರತಿಯೊಂದು ಚುನಾವಣೆಯಲ್ಲೂ ವಿನೂತನವಾದ ಪ್ರಚಾರ ತಂತ್ರವನ್ನು ರಾಜಕೀಯ ಪಕ್ಷಗಳು ನಡೆಸಬೇಕಾಗುತ್ತದೆ. “ಧನ್ಯವಾದ್ ಮೋದಿ’ ಅಭಿಯಾನದ ಮೂಲಕ ಪ್ರತಿದಿನವೂ ಲಕ್ಷಾಂತರ ಜನರನ್ನು ತಲುಪುವ ಪ್ರಯತ್ನ ನಡೆಸಿದ್ದೇವೆ. ಕಿಸಾನ್ ಸಮ್ಮಾನ್, ಮನೆಮನೆಗೆ ಗಂಗೆ, ಉಜ್ವಲ, ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣದಂಥ ಯೋಜನೆಗಳಿಂದ ಕೋಟ್ಯಂತರ ಜನರಿಗೆ ಮೋದಿ ಸರ್ಕಾರ ಅನುಕೂಲ ಕಲ್ಪಿಸಿದೆ. ಇದನ್ನು ಜಾಲತಾಣದ ಮೂಲಕ ಜನರಿಗೆ ತಲುಪಿಸುತ್ತೇವೆ ಎಂದು ಹೇಳಿದರು.