Advertisement

ಕಮಿಷನರೇಟ್‌ ಕಚೇರಿಗೆ ನೂತನ ಕಟ್ಟಡ

12:04 PM Oct 22, 2019 | Team Udayavani |

ಕಲಬುರಗಿ: ಕಳೆದ ಫೆಬ್ರವರಿಯಲ್ಲಿ ಕಾರ್ಯಾರಂಭವಾಗಿರುವ ಕಲಬುರಗಿ ನಗರ ಪೊಲೀಸ್‌ ಆಯುಕ್ತಾಲಯದ ಸ್ವಂತ ಕಟ್ಟಡ ನಿರ್ಮಾಣಕ್ಕೆ ಪೊಲೀಸ್‌ ಇಲಾಖೆ ಸಿದ್ಧತೆ ನಡೆಸಿದ್ದು, 18.05 ಕೋಟಿ ರೂ. ವೆಚ್ಚದಲ್ಲಿ ಹೊಸ ಕಚೇರಿ ತಲೆ ಎತ್ತಲಿದೆ.

Advertisement

ನಗರದ ಸೂಪರ್‌ ಮಾರ್ಕೆಟ್‌ನ ಹಳೆ ಪಾರ್ಕಿಂಗ್‌ ಸ್ಥಳದಲ್ಲಿ ಪೊಲೀಸ್‌ ಆಯುಕ್ತಾಲಯ ನಿರ್ಮಾಣವಾಗಲಿದೆ. ರಾಜ್ಯ ಪೊಲೀಸ್‌ ಗೃಹ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮ ಕಟ್ಟಡ ನಿರ್ಮಾಣದ ಹೊಣೆ ಹೊತ್ತಿದೆ. ರಾಯಚೂರು ಜಿಲ್ಲೆ ಮಾನ್ವಿಯ ಎಂ. ಈರಣ್ಣ ಎಂಬುವರು ಗುತ್ತಿಗೆ ಪಡೆದಿದ್ದಾರೆ. ಹನ್ನೊಂದು ತಿಂಗಳೊಳಗೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವ ಯೋಜನೆ ಹಾಕಿಕೊಳ್ಳಲಾಗಿದೆ.

ಫೆ.23ರಿಂದ ನಗರದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪ್ರಾದೇಶಿಕ ಕಚೇರಿ (ಹಳೆ ಐಜಿಪಿ ಕಚೇರಿ)ಯಲ್ಲಿ ಕಮಿಷನರೇಟ್‌ ಕಚೇರಿ ತಾತ್ಕಾಲಿಕವಾಗಿ ಆರಂಭವಾಗಿದೆ. ಸುಮಾರು 39.56 ಲಕ್ಷ ರೂ. ವೆಚ್ಚದಲ್ಲಿ ಕಚೇರಿ ನವೀಕರಿಸಿ ಅದರಲ್ಲೇ ಕಾರ್ಯಾಲಯನಡೆಸಲಾಗುತ್ತಿದೆ.

ಆರಂಭದಲ್ಲಿ ಈಶಾನ್ಯ ವಲಯದ ಐಜಿಪಿ ಮನೀಷ್‌ ಖಬೇಕರ್‌ ಪ್ರಭಾರಿ ಆಯುಕ್ತರಾಗಿ ಜವಾಬ್ದಾರಿ ನಿರ್ವಹಿಸಿಕೊಂಡಿದ್ದರು. ಈಗ ಆಯುಕ್ತಾಲಯದ ಮೊದಲ ಪೂರ್ಣಪ್ರಮಾಣದ ಆಯುಕ್ತರಾಗಿ ಎಂ.ಎನ್‌ .ನಾಗರಾಜು ಕಾರ್ಯ ನಿರ್ವಹಿಸುತ್ತಿದ್ದಾರೆ. ಸೆ.9ರಂದು ಅಧಿಕಾರ ವಹಿಸಿಕೊಂಡಿರುವ ಎಂ.ಎನ್‌.ನಾಗರಾಜು, ರವಿವಾರ (ಅ.20) ಆಯುಕ್ತಾಲಯಕ್ಕೆ ಗುರುತಿಸಿರುವ ಸ್ಥಳ ಪರಿಶೀಲಿಸಿದರು. ಅಲ್ಲಿ ಮುಳ್ಳು-ಕಂಟಿ ಬೆಳೆದಿದ್ದು, ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದೆ. ಮುಂದಿನ ನಾಲ್ಕೈದು ದಿನಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ಸಿಗಲಿದೆ ಎನ್ನುತ್ತವೆ ಪೊಲೀಸ್‌ ಇಲಾಖೆಯ ಮೂಲಗಳು.

ಸುಸಜ್ಜಿತ ಕಟ್ಟಡ: ಕಲಬುರಗಿ ಪೊಲೀಸ್‌ ಆಯುಕ್ತಾಲಯ ರಾಜ್ಯದ ಆರನೇ ಆಯುಕ್ತಾಲಯ ಎಂಬ ಹೆಗ್ಗಳಿಕೆ ಹೊಂದಿದೆ. ಆಯುಕ್ತಾಲಯವು ಒಟ್ಟು 8,720 ಚದರ ಮೀಟರ್‌ ವಿಸ್ತೀರಣೆದಲ್ಲಿ ತಲೆ ಎತ್ತಲಿದೆ. ಸ್ಟಿಲ್ಟ್  ಮಹಡಿ, ನೆಲ ಮಹಡಿ, ಮೊದಲ ಮಹಡಿ ಹಾಗೂ ಎರಡನೇ ಮಹಡಿ ಕಟ್ಟಡ ಇದಾಗಿದೆ.

Advertisement

ನೈಸರ್ಗಿಕ ಗಾಳಿ ಮತ್ತು ಬೆಳಕು ಹೊಂದಿರುವ ಕಟ್ಟಡ ವಿನ್ಯಾಸ ಮಾಡಲಾಗಿದೆ. ಸ್ಟಿಲ್ಟ್ ಮಹಡಿಯಲ್ಲಿ ವಾಹನ ನಿಲುಗಡೆ, ಚಾಲಕರು, ಭದ್ರತಾ ಸಿಬ್ಬಂದಿ ಮತ್ತು ಶೌಚಾಲಯದ ಕೋಣೆ ಹೊಂದಿರಲಿದೆ. ನೆಲ ಮಹಡಿಯಲ್ಲಿ ಮಹಿಳಾ ಪೊಲೀಸ್‌ ವಿಭಾಗ, ಸೈಬರ್‌ ವಿಭಾಗ, ಪಾಸ್‌ಪೋರ್ಟ್‌ ವಿಭಾಗ, ಅಕೌಂಟ್‌ ವಿಭಾಗ, ಕಂಪ್ಯೂಟರ್‌-ಸರ್ವರ್‌ ಕೋಣೆ, ದಾಖಲಾತಿ ಕೋಣೆ, ಸಿಸಿಆರ್‌ಬಿ ಮತ್ತು ಸಿಸಿಐ ಸಿಬ್ಬಂದಿ ಕೊಠಡಿ ಇರಲಿದೆ.

ಮೊದಲ ಮಹಡಿ ಆಯುಕ್ತಾಲಯದ ಮುಖ್ಯ ವಿಭಾಗಗಳನ್ನು ಹೊಂದಿರಲಿದೆ. ಆಯುಕ್ತರ ಕಚೇರಿ, ಮೀಟಿಂಗ್‌ ಹಾಲ್‌, ಕಾನೆ#ರನ್ಸ್‌ ಹಾಲ್‌, ಅಧಿಕಾರಿಗಳ ವಿಶ್ರಾಂತಿ ಕೋಣೆ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗ, ನ್ಯಾಯಾಂಗ ವಿಭಾಗ, ನ್ಯಾಯಾಂಗ ಸಿಬ್ಬಂದಿ ಕೋಣೆ, ವೈರ್‌ಲೆಸ್‌ ವಿಭಾಗ, ಎಸಿಪಿ, ಡಿಸಿಪಿ 1, 2 ಮತ್ತು 3 ಕೊಠಡಿಗಳು, ಬೆರಳೆಚ್ಚು, ಫೋಟೋಗ್ರಫಿ, ಪುರುಷ ಮತ್ತು ಮಹಿಳೆಯರ ಪ್ರತ್ಯೇಕ ಊಟದ ಕೋಣೆಗಳನ್ನು ನಿರ್ಮಿಸಲಾಗುತ್ತದೆ.

ಎರಡನೇ ಮಹಡಿಯಲ್ಲಿ ಕಂಪ್ಯೂಟರ್‌ ತರಬೇತಿ ವಿಭಾಗ, ಸಿಸಿಟಿವಿ ನಿಗಾ ವಿಭಾಗ, ಟ್ರಾಫಿಕ್‌ ನಿಯಂತ್ರಣ ಕೊಠಡಿ, ಎಸಿಪಿ, ಡಿಸಿಪಿ 4, 5 ಮತ್ತು 6 ಕೋಣೆ ಮತ್ತು ಗ್ರಂಥಾಲಯ ಇರಲಿದೆ. ಪೊಲೀಸ್‌ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಎ, ಬಿ, ಸಿ ಮತ್ತುಡಿ ಹೀಗೆ ನಾಲ್ಕು ಉಪ ವಿಭಾಗಗಳು ಕಾರ್ಯ ನಿರ್ವಹಿಸುತ್ತಿವೆ. ಗ್ರಾಮೀಣ ಉಪ ವಿಭಾಗದ ನಾಲ್ಕು (ಗ್ರಾಮೀಣ, ವಿಶ್ವವಿದ್ಯಾಲಯ, ಫರತಾಬಾದ್‌ ಮತ್ತು ಎಂ.ಬಿ.ನಗರ) ಠಾಣೆಗಳು ಸಹ ಆಯುಕ್ತಾಲಯದ ವ್ಯಾಪ್ತಿಗೆ ಒಳಪಟ್ಟಿವೆ.

 

-ರಂಗಪ್ಪ ಗಧಾರ

Advertisement

Udayavani is now on Telegram. Click here to join our channel and stay updated with the latest news.

Next