ಕೊಟ್ಟಿಗೆಹಾರ: ಕಳೆದ ವರ್ಷದ ಆಗಸ್ಟ್‌ನಲ್ಲಿ ನೆರೆಯಿಂದಾಗಿ ಕುಸಿದು ಹೋಗಿದ್ದ ಬಾಳೂರು ಹೊರಟ್ಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೂರು ನೂತನ ಕಟ್ಟಡಗಳನ್ನು ಮುಂದಿನ ಶೈಕ್ಷಣಿಕ ವರ್ಷಾರಂಭದೊಳಗೆ ನಿರ್ಮಾಣ ಮಾಡಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್‌ಕುಮಾರ್ ಹೇಳಿದರು.
ಹೊರನಾಡು ದೇವಸ್ಥಾನಕ್ಕೆ ಖಾಸಗಿ ಭೇಟಿ ನೀಡಿದ ನಂತರ ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯೆ ಬಾಳೂರು ಹೊರಟ್ಟಿ ಶಾಲೆಗೆ ಭೇಟಿ ನೀಡಿ ಅವರುಮಾತನಾಡಿದರು. ನೂತನ ಕಟ್ಟಡ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಗೆ ನಿರ್ದೇಶನ ನೀಡಲಾಗಿದ್ದು, ಸುಭದ್ರ ಕಟ್ಟಡ ನಿರ್ಮಾಣವಾಗಲಿದೆ. ಈ ಶಾಲೆಯಲ್ಲಿ 1 ರಿಂದ 5 ನೇ ತರಗತಿ ವರೆಗೆ 12 ಮಕ್ಕಳಿದ್ದು, 4 ನೇ ತರಗತಿಯಲ್ಲಿ ಕೇವಲ ಒಂದೇ ಮಗು ಇದೆ. 5 ನೇ ತರಗತಿಯಲ್ಲಿ 3 ಮಕ್ಕಳಿದ್ದಾರೆ. ಮಕ್ಕಳ ಸಂಖ್ಯೆ ಕೂಡ ಕಡಿಮೆ ಇದೆ. ಮಕ್ಕಳಿಗೆ ಸಹಪಾಠಿಗಳ ಸಂಖ್ಯೆ ಹೆಚ್ಚಿದ್ದರೆ ಮತ್ತಷ್ಟು ಉತ್ಸಾಹದಿಂದ ಕಲಿಯಲು ಸಾಧ್ಯವಾಗುತ್ತದೆ ಎಂದರು.
ಶಾಲಾ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿಯಾಗಿದ್ದು, ಶೀಘ್ರದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭವಾಗಲಿದೆ. ರಾಜ್ಯದ ವಿವಿಧೆಡೆಗಳಲ್ಲಿ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಶಾಲಾ ಕಟ್ಟಡಗಳು ಹಾನಿಯಾಗಿರುವ ಘಟನೆಗಳು ನಡೆದಿವೆ. ಶಾಲಾ ದುರಸ್ತಿಗಾಗಿ ಈಗಾಗಲೇ 199 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಗಳು ಪ್ರಾರಂಭವಾಗಿವೆ. ನೂತನ ಶಾಲಾ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಕೇಳಲಾಗಿದೆ. ಮಾಧ್ಯಮಗಳ ಮೂಲಕ ಕುಗ್ರಾಮದ ಶಾಲೆಯ ಸ್ಥಿತಿ ನನ್ನ ಗಮನಕ್ಕೆ ಬಂದಿದೆ. ಶಾಲಾಭಿವೃದ್ಧಿಗೆ ಇಲಾಖೆಯಿಂದ ಶ್ರಮಿಸಲಾಗುವುದು ಎಂದರು.
ನಂತರ ನೆಲದಲ್ಲಿ ಕುಳಿತು ಮಕ್ಕಳೊಡನೆ ಸಚಿವರು ಮಾತನಾಡಿದರು. ವಿದ್ಯಾರ್ಥಿನಿ ಯೊಬ್ಬಳಿಗೆ ಮಗ್ಗಿ ಬರುತ್ತಾ, 7 ರ ಮಗ್ಗಿ ಹೇಳು ನೋಡೋಣ ಎಂದು ಮಗ್ಗಿ ಹೇಳಿಸಿದರು. ಆ ಶಾಲೆ ಏನಾಯ್ತು ಎಂದು ಮಕ್ಕಳಳನ್ನು ಕೇಳಿದಾಗ, ಮಕ್ಕಳು ಮಳೆಗೆ ಕುಸಿದು ಹೋಯ್ತು ಎಂದರು. ಹೊಸ ಸ್ಕೂಲ್ ಬೇಕಾ, ಕಟ್ಟೋಣ. ನೀವೆಲ್ಲಾ ಚೆನ್ನಾಗಿ ಓದ್ಬೇಕು ಎಂದು ಕೆಲಕಾಲ ಮಕ್ಕಳೊಡನೆ ಸಮಯ ಕಳೆದರು. ನಂತರ ಕಟ್ಟಡ ನಿರ್ಮಾಣವಾಗುವ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಮೂಡಿಗೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಹೇಮರಾಜ್, ತಾಪಂ ಇಒ ವೆಂಕಟೇಶ್, ಜಿಪಂ ಸದಸ್ಯ ಶಾಮಣ್ಣ, ತಾಪಂ ಅಧ್ಯಕ್ಷ ಕೆ.ಸಿ. ರತನ್, ಬಾಳೂರು ಗ್ರಾಪಂ ಪಿಡಿಒ ವಿಶ್ವನಾಥ್, ಬಿಜೆಪಿ ತಾಲೂಕು ಉಪಾಧ್ಯಕ್ಷ ಬಿ.ಎಂ. ಭರತ್, ಬಿಜೆಪಿ ಮುಖಂಡರಾದ ಪರೀಕ್ಷಿತ್, ರಘುಪತಿ, ಬಿ.ಬಿ. ಮಂಜುನಾಥ್, ಗ್ರಾಪಂ ಸದಸ್ಯ ಪೂರ್ಣೇಶ್, ಸಿಬ್ಬಂದಿ ರಜತ್, ಗ್ರಾಮಸ್ಥರಾದ ನಾಗರಾಜ್, ಶಿಕ್ಷಕ ಲೋಕೇಶ್, ಶಿಕ್ಷಕಿ ಶ್ಯಾಮಲಾ, ಶಾಲಾ ಸಮಿತಿ ಅಧ್ಯಕ್ಷ ವೆಂಕಟೇಶ್ ಮುಂತಾದವರು ಇದ್ದರು.