ಉತ್ತಮ ಶ್ರವಣ ಸಾಮರ್ಥ್ಯವು ವ್ಯಕ್ತಿಯ ಸಾಮಾಜಿಕ, ಸಾಂಸ್ಕೃತಿಕ ಮತ್ತು ಬೌದ್ಧಿಕ ಪ್ರಗತಿಯಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತದೆ. ಮಕ್ಕಳು ಜನಿಸುವಾಗ ಶ್ರವಣ ಸಾಮರ್ಥ್ಯವನ್ನು ಪಡೆದಿರುತ್ತಾರೆ, ಆಲಿಸುವಿಕೆ ಮತ್ತು ಮಾತಿನ ಸಾಮರ್ಥ್ಯವು ಶೈಶವದಲ್ಲಿ ಬೆಳವಣಿಗೆಯಾಗುತ್ತದೆ. ಶಿಶು ಜನನದ ಬಳಿಕ 3ರಿಂದ 5 ವರ್ಷಗಳ ಅವಧಿಯು ಶ್ರವಣ, ಆಲಿಸುವಿಕೆ, ಭಾಷೆ ಮತ್ತು ಮಾತಿನ ಚಟುವಟಿಕೆಗಳ ಬೆಳವಣಿಗೆಯಲ್ಲಿ ನಿರ್ಣಾಯಕ ಅವಧಿಯಾಗಿರುತ್ತದೆ. ಈ ಅವಧಿಯಲ್ಲಿ ಶ್ರವಣ ಸಾಮರ್ಥ್ಯಕ್ಕೆ ಸಂಬಂಧಿಸಿದ ಯಾವುದೇ ವೈಕಲ್ಯವು ಶ್ರವಣ ಮತ್ತು ಆಲಿಸುವಿಕೆಗಳ ಜತೆಗೆ ಸಂಬಂಧ ಹೊಂದಿರುವ ಹಲವು ಕಾರ್ಯಸಾಮರ್ಥ್ಯಗಳಲ್ಲಿ ತೊಡಕನ್ನು ಉಂಟು ಮಾಡುತ್ತದೆ. ಪುಟ್ಟ ಮಕ್ಕಳಲ್ಲಿ ಶ್ರವಣ ಶಕ್ತಿ ನಷ್ಟವು ಎರಡು ಬಗೆಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ: ಅದು ಮಗುವಿನ ಆಲಿಸುವ ಸಾಮರ್ಥ್ಯವನ್ನು ಕಸಿದುಕೊಳ್ಳುತ್ತದೆಯಷ್ಟೇ ಅಲ್ಲದೆ ಮಗು ಪ್ರಧಾನವಾಹಿನಿ ಶಾಲಾ ಕಲಿಕೆಯಲ್ಲಿ, ಸಮಾನವಯಸ್ಕ ಗೆಳೆಯ-ಗೆಳತಿಯರ ಜತೆಗಿನ ಒಡನಾಟದಲ್ಲಿ, ಶಾಲೇತರ ಕಲಿಕೆಯಲ್ಲಿ ಮತ್ತು ಒಟ್ಟಾರೆ ಬದುಕಿನಲ್ಲಿ ಹಿಂದುಳಿಯುವಂತೆ ಮಾಡುತ್ತದೆ.
ವಿಶ್ವ ಸಂಸ್ಥೆಯ ಅಂಗಸಂಸ್ಥೆಯಾಗಿರುವ ಯುನಿಸೆಫ್ನ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಪ್ರತೀದಿನ ಸರಿಸುಮಾರು 67 ಸಾವಿರ ಶಿಶುಗಳು ಜನಿಸುತ್ತವೆ. ಪ್ರತೀ 1,500 ಶಿಶುಗಳಲ್ಲಿ ಒಂದು ಶಿಶು ಜನ್ಮಜಾತವಾದ ಶ್ರವಣ ಶಕ್ತಿ ದೋಷವನ್ನು ಹೊಂದಿರುತ್ತದೆ. ಇಂತಹ ಶಿಶುಗಳಲ್ಲಿ ಕೆಲವು ನವಜಾತ ಶಿಶುಗಳಲ್ಲಿ ಕಂಡುಬರುವ ತೊಂದರೆಗಳಾದ ಅವಧಿಪೂರ್ವ ಜನನ, ಹೈಪರ್‌ಬಿಲಿರುಬಿನೇಮಿಯಾ, ತಾಯಿಯಿಂದ ಬಂದ ಮಧುಮೇಹ, ಹೈಪೊಕ್ಸಿಯಾ, ಜನನ ಸಂದರ್ಭದಲ್ಲಿ ಕಡಿಮೆ ದೇಹತೂಕ ಇತ್ಯಾದಿಗಳನ್ನು ಹೊಂದಿರುಬಹುದಾಗಿದೆ. ಇವು ಗಳಿಂದಾಗಿಯೂ ಶ್ರವಣ ಸಾಮರ್ಥ್ಯ ಕಡಿಮೆಯಾಗಬಹುದು. ಆದರೆ ಬಹುತೇಕ ಶಿಶುಗಳು ಸಹಜ ಆರೋಗ್ಯ ಹೊಂದಿದ್ದು, ನವಜಾತ ಶಿಶುಗಳ ತೀವ್ರ ನಿಗಾ ಘಟಕ (ಎನ್‌ಐಸಿಯು)ಕ್ಕೆ ದಾಖಲಿಸಬೇಕಾಗಿರುವುದಿಲ್ಲ.
ಮಗುವಿನಲ್ಲಿ ಕೇಳಿಸಿಕೊಳ್ಳುವ ಮತ್ತು ಮಾತ ನಾಡುವ ಸಾಮರ್ಥ್ಯ ಬೆಳೆಯ ಬೇಕಾದರೆ ಜನಿಸಿದಂದಿನಿಂದಲೇ ಸಮರ್ಪಕವಾದ ಶ್ರವಣ ಶಕ್ತಿಯನ್ನು ಹೊಂದಿರಬೇಕಾಗುತ್ತದೆ. ಹೀಗಾಗಿ ನವಜಾತ ಶಿಶುಗಳ ಶ್ರವಣ ಶಕ್ತಿ ಪರೀಕ್ಷೆಯನ್ನು ಸಾಧ್ಯವಾದಷ್ಟು ಬೇಗನೆ ನಡೆಸಬೇಕು. ಶ್ರವಣ ಶಕ್ತಿ ದೋಷವನ್ನು ಹೊಂದಿರುವ ಶಿಶುವಿನ ಪುನರ್ವಸತಿ ಕಾರ್ಯವು ಆರು ತಿಂಗಳು ವಯಸ್ಸಿನ ಒಳಗೆಯೇ ಆರಂಭವಾದಲ್ಲಿ ಅಂಥ ಮಗುವು ತನ್ನ ಸಮಾನವಯಸ್ಕರಾದ, ಸಹಜ ಶ್ರವಣ ಸಾಮರ್ಥ್ಯವನ್ನು ಹೊಂದಿರುವ ಶಿಶುಗಳಷ್ಟೇ ಮಟ್ಟದ ಆಲಿಸುವಿಕೆ ಮತ್ತು ಭಾಷಿಕ ಬೆಳವಣಿಗೆಯನ್ನು ಕಾಣಲು ಸಾಧ್ಯ. ಆದರೆ ಇದಕ್ಕೆ ಶಿಶು ಜನಿಸಿದ ತತ್‌ಕ್ಷಣ ಶ್ರವಣ ಶಕ್ತಿ ಪರೀಕ್ಷೆಗೆ ಒಳಪಡುವುದು ಅಗತ್ಯವಾಗಿರುತ್ತದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಇದಕ್ಕಾಗಿ 1-3-6 ತಣ್ತೀವನ್ನು ಅನುಸರಿಸಲಾಗುತ್ತದೆ. ಅಂದರೆ ಒಂದು ತಿಂಗಳು ವಯಸ್ಸಿನಲ್ಲಿ ಶ್ರವಣ ಶಕ್ತಿಯ ಪರೀಕ್ಷೆ, 3 ತಿಂಗಳು ವಯಸ್ಸಿನಲ್ಲಿ ನಿಖರ ತಪಾಸಣೆ ಮತ್ತು 6 ತಿಂಗಳು ವಯಸ್ಸಿನ ಒಳಗೆ ಪುನರ್ವಸತಿ. ಶ್ರವಣ ಶಕ್ತಿಯ ಮೊದಲ ಪರೀಕ್ಷೆಯನ್ನು ಹೆರಿಗೆಯ ಬಳಿಕ ತಾಯಿ ಮತ್ತು ಶಿಶು ಆಸ್ಪತ್ರೆಯಿಂದ ಮನೆಗೆ ತೆರಳುವುದಕ್ಕೆ ಮುನ್ನವೇ ನಡೆಸಲಾಗುತ್ತದೆ.
ಆದರೆ ಭಾರತದಲ್ಲಿ ಈ ಪರಿಸ್ಥಿತಿ ತೃಪ್ತಿದಾಯಕವಾಗಿಲ್ಲ. ನವಜಾತ ಶಿಶುಗಳಿಗೆ ಶ್ರವಣ ಸಾಮರ್ಥ್ಯ ಪರೀಕ್ಷೆಯು ಕಡ್ಡಾಯವಾಗಿಲ್ಲ ಮತ್ತು ಎಲ್ಲ ಕಡೆಗಳಲ್ಲಿ ಅದು ಲಭ್ಯವೂ ಇಲ್ಲ. ಆದ್ದರಿಂದ ಶಿಶುವಿನಲ್ಲಿ ಶ್ರವಣ ಶಕ್ತಿಗೆ ಸಂಬಂಧಿಸಿದ ತೊಂದರೆ ಇದೆಯೇ ಎಂಬುದನ್ನು ತಿಳಿದುಕೊಳ್ಳುವುದಕ್ಕಾಗಿ ಬಹುತೇಕವಾಗಿ ಹೆತ್ತವರನ್ನು ಅವಲಂಬಿಸಲಾಗುತ್ತದೆ ಮತ್ತು ಅವರು ಶಿಶುವನ್ನು ತಪಾಸಣೆಗಾಗಿ ಆಸ್ಪತ್ರೆಗೆ ಕರೆತರುವುದನ್ನು ನಿರೀಕ್ಷಿಸಲಾಗುತ್ತದೆ. ದುರದೃಷ್ಟವಶಾತ್, ಇಂತಹ ಪರಿಸ್ಥಿತಿಯಿಂದಾಗಿ ಮಗುವಿನ ಶ್ರವಣ ಶಕ್ತಿ ದೋಷವು ಪತ್ತೆಯಾಗಿ ಪುನರ್ವಸತಿ ಕಲ್ಪಿಸುವಿಕೆಯಲ್ಲಿ ತೀರಾ ವಿಳಂಬವಾಗುತ್ತಿದ್ದು, 15 ತಿಂಗಳುಗಳಿಂದ 3 ವರ್ಷ ವಯಸ್ಸಿನ ವರೆಗೆ ಮುಂದೂಡಲ್ಪಡುತ್ತದೆ. ಈ ಅನಪೇಕ್ಷಿತ ವಿಳಂಬವನ್ನು ತಪ್ಪಿಸುವುದಕ್ಕಾಗಿ ಅಭಿವೃದ್ಧಿ ಹೊಂದಿದ ದೇಶಗಳಂತೆ ನವಜಾತ ಶಿಶುಗಳ ಶ್ರವಣ ಶಕ್ತಿ ಪರೀಕ್ಷೆಯನ್ನು ಕಡ್ಡಾಯಗೊಳಿಸಬೇಕಾಗಿದೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ನವಜಾತ ಶಿಶುಗಳ ಶ್ರವಣ ಶಕ್ತಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಮಂಗಳೂರಿನ ಕಸ್ತೂರ್ಬಾ ಆಸ್ಪತ್ರೆಯು ದಕ್ಷಿಣ ಕನ್ನಡ ಜಿಲ್ಲೆಯ ತಾಯಂದಿರ ಸರಕಾರಿ ಜಿಲ್ಲಾಸ್ಪತ್ರೆಯಾಗಿರುವ ಲೇಡಿಗೋಶನ್ ಆಸ್ಪತ್ರೆಯಲ್ಲಿ ನವಜಾತ ಶಿಶು ಶ್ರವಣ ಶಕ್ತಿ ಪರೀಕ್ಷಾ ಕೇಂದ್ರವನ್ನು ಪ್ರಾರಂಭಿಸಿದೆ. ಲೇಡಿಗೋಶನ್ ಆಸ್ಪತ್ರೆಯಲ್ಲಿ ಪ್ರತೀ ತಿಂಗಳು ಸರಿಸುಮಾರು 500ರಿಂದ 750 ಶಿಶುಗಳ ಜನನವಾಗುತ್ತಿದ್ದು, ಎಲ್ಲ ಶಿಶುಗಳನ್ನೂ ಜನನವಾದ 72 ತಾಸುಗಳ ಬಳಿಕ ಈ ಕೇಂದ್ರಕ್ಕೆ ಶ್ರವಣ ಶಕ್ತಿ ತಪಾಸಣೆಗಾಗಿ ಕರೆತರಲಾಗುತ್ತದೆ. ಸಾಮಾನ್ಯವಾಗಿ ಓಟೊಅಕೌಸ್ಟಿಕ್ ಎಮಿಶನ್ಸ್ ಎನ್ನುವ ಪರೀಕ್ಷೆಯ ಮೂಲಕ ಶ್ರವಣ ಶಕ್ತಿ ತಪಾಸಣೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಶಿಶುವಿನ ಕಿವಿಯಲ್ಲಿ ಪುಟ್ಟ, ಮೃದುವಾದ ರಬ್ಬರ್ ತುದಿಯ ಇಯರ್‌ಪೀಸನ್ನು ಶಿಶುವಿನ ಕಿವಿಯಲ್ಲಿ ಇರಿಸಲಾಗುತ್ತದೆ ಮತ್ತು ಸದ್ದುಗಳ ಸರಣಿಯನ್ನು ಕೇಳಿಸಲಾಗುತ್ತದೆ. ಈ ಪರೀಕ್ಷೆಯನ್ನು ಕೆಲವು ನಿಮಿಷಗಳಲ್ಲಿ ಮಾಡಿ ಮುಗಿಸಬಹುದಾಗಿದೆ.
ಇನ್ನೊಂದು ಪರೀಕ್ಷೆಯನ್ನು ಆಟೊಮೇಟೆಡ್ ಆಡಿಟರಿ ಬ್ರೈನ್‌ಸ್ಟೆಮ್ ರೆಸ್ಪಾನ್ಸ್ (ಎಎಬಿಆರ್) ಪರೀಕ್ಷೆ ಎಂದು ಕರೆಯಲಾಗುತ್ತದೆ. ಈ ಪರೀಕ್ಷೆಯಲ್ಲಿ ಹೆಡ್‌ಫೋನ್ ಮತ್ತು ಸೆನ್ಸರ್ ಗಳನ್ನು ಹೊಂದಿರುವ ಹೆಡ್‌ಸೆಟನ್ನು ಅಳವಡಿಸಲಾಗುತ್ತದೆ. ಆರಾಮದಾಯಕ ಮಟ್ಟದ ಕಿರು ಸದ್ದುಗಳ ಸರಣಿಯನ್ನು ಕೇಳಿಸಲಾಗುತ್ತದೆ ಮತ್ತು ನರಶಾಸ್ತ್ರೀಯ ಪ್ರತಿಸ್ಪಂದನೆಗಳನ್ನು ಗಮನಿಸಿ ದಾಖಲಿಸಿಕೊಳ್ಳಲಾಗುತ್ತದೆ. ಈ ಪರೀಕ್ಷೆಗೆ 3ರಿಂದ 15 ನಿಮಿಷಗಳು ತಗಲುತ್ತವೆ.
ಮೊದಲನೆಯ ಪರೀಕ್ಷೆಯಿಂದ ಸ್ಪಷ್ಟ ಪ್ರತಿಸ್ಪಂದನೆಗಳನ್ನು ಪಡೆಯಲು ಸಾಧ್ಯವಿಲ್ಲ. ಸಹಜ ಶ್ರವಣ ಶಕ್ತಿಯನ್ನು ಹೊಂದಿರುವ ಶಿಶುಗಳಲ್ಲಿಯೂ ಹೀಗಾಗಲು ಸಾಧ್ಯವಿದೆ. ಶಿಶುವಿನ ಚಲನೆ, ಸದ್ದುಗಳಿಂದಾಗಿ ಅಥವಾ ಕಿವಿಯಲ್ಲಿರುವ ದ್ರವದಿಂದ ತಾತ್ಕಾಲಿಕ ತಡೆಯಿಂದಾಗಿ ಸ್ಪಷ್ಟ ಪ್ರತಿಸ್ಪಂದನೆಯ ಕೊರತೆ ಉಂಟಾಗಬಹುದು. ಇಂತಹ ಪ್ರಕರಣಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸುವುದಕ್ಕೆ ಮುನ್ನ ಇನ್ನೊಂದು ಬಾರಿ ಪರೀಕ್ಷೆ ನಡೆಸಲಾಗುತ್ತದೆ. ಎರಡೂ ಪರೀಕ್ಷೆಗಳು ಆರಾಮದಾಯಕವಾಗಿದ್ದು, ಶಿಶುವಿಗೆ ಯಾವುದೇ ಹಾನಿ, ತೊಂದರೆಯನ್ನು ಉಂಟುಮಾಡುವುದಿಲ್ಲ. ಎರಡನೆಯ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಶಿಶುಗಳನ್ನು 1 ವರ್ಷ 3 ತಿಂಗಳು ವಯಸ್ಸಿನಲ್ಲಿ ಇನ್ನೊಮ್ಮೆ ಪರೀಕ್ಷೆಗೆ ಕರೆಯಲಾಗುತ್ತದೆ. ಯಾವುದೇ ಶ್ರವಣದೋಷ ಪತ್ತೆಯಾದರೆ 6 ತಿಂಗಳು ವಯಸ್ಸಿನಲ್ಲಿ ಪುನರ್ವಸತಿಯನ್ನು ಆರಂಭಿಸಲಾಗುತ್ತದೆ. ಈ ಎಳೆಯ ವಯಸ್ಸಿನಲ್ಲಿ ಪುನರ್ವಸತಿಯನ್ನು ಶ್ರವಣ ಸಾಧನಗಳ ಮೂಲಕ ನಡೆಸಲಾಗುತ್ತದೆ, ಇದರಿಂದಾಗಿ ಶಿಶುವಿಗೆ ಜಗತ್ತಿನ ಸದ್ದುಗಳನ್ನು ಕೇಳುತ್ತ ಬೆಳೆಯಲು ಸಾಧ್ಯವಾಗುತ್ತದೆ.
ಕೆಲವೊಮ್ಮೆ ಹೆತ್ತವರಿಗೆ ಈ ಇಡೀ ಪ್ರಕ್ರಿಯೆ ಒಂದು ಸವಾಲೆಂಬಂತೆ ಕಾಣಿಸುತ್ತದೆ. ಶಿಶುವನ್ನು ಪದೇ ಪದೆ ಶ್ರವಣ ಶಕ್ತಿ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆತರುವುದು, ಈ ಪರೀಕ್ಷೆಗಳಿಗೆ ತಗಲುವ ಸಮಯ, ತಗಲುವ ವೆಚ್ಚ ಇತ್ಯಾದಿಗಳು ಹೆತ್ತವರ ಸಹನೆಯನ್ನು ಪರೀಕ್ಷಿಸುತ್ತವೆ. ಸಹಜವಾಗಿರುವಂತೆ ಕಾಣಿಸುವ ತಮ್ಮ ಮಗುವಿಗೆ ಈ ಎಲ್ಲ ಪರೀಕ್ಷೆಗಳು ಏತಕ್ಕೆ ಎಂದವರು ಭಾವಿಸುತ್ತಾರೆ. ಸತ್ಯಾಂಶವೇನೆಂದರೆ, ಪುಟ್ಟ ಶಿಶುವಿನಲ್ಲಿ ನಡೆಸುವ ಆರಂಭಿಕ ಪರೀಕ್ಷೆಗಳ ಮೂಲಕ ಶ್ರವಣ ದೋಷ ಪತ್ತೆಯಾದುದೇ ಆದರೆ ಅದನ್ನು ಖಚಿತಪಡಿಸಿಕೊಳ್ಳಲು ಮುಂದುವರಿದ ಪರೀಕ್ಷೆಗಳು ಅಗತ್ಯವಾಗಿರುತ್ತವೆ; ಮಾತ್ರವಲ್ಲದೆ ಇವು ಶ್ರವಣ ಶಕ್ತಿ ನಷ್ಟದ ನಿಖರ ಪ್ರಮಾಣವನ್ನು ಕೂಡ ಪತ್ತೆ ಮಾಡಿಕೊಡುತ್ತವೆ.
ಒಟ್ಟಾರೆಯಾಗಿ ಹೇಳಬೇಕೆಂದರೆ, ತಮ್ಮ ನವಜಾತ ಶಿಶು ಶ್ರವಣ ಶಕ್ತಿ ಪರೀಕ್ಷೆಗೆ ಒಳಗಾಗುವಂತೆ ನೋಡಿಕೊಳ್ಳುವುದು ಪ್ರತೀ ಹೊಸ ತಾಯ್ತಂದೆಯರ ಆದ್ಯ ಕರ್ತವ್ಯ. ಮಗು ಸ್ವಲ್ಪ ದೊಡ್ಡದಾದ ಬಳಿಕ ವಿಳಂಬವಾಗಿ ಶ್ರವಣ ಶಕ್ತಿ ದೋಷ ಪತ್ತೆಯಾಗುವುದರಿಂದ ಸರಿಪಡಿಸಲಾಗದಂತಹ ತೊಂದರೆಗಳು ಎದುರಾಗುತ್ತವೆ. ಹೀಗಾಗದಂತೆ ತಡೆಯುವುದಕ್ಕಾಗಿ ಹೆತ್ತವರು ಆಡಿಯಾಲಜಿಸ್ಟ್‌ಗಳ ಜತೆಗೂಡಿ ತಮ್ಮ ಶಿಶುಗಳಲ್ಲಿ ಇರಬಹುದಾದ ಶ್ರವಣ ಶಕ್ತಿ ದೋಷವನ್ನು ಆದಷ್ಟು ಬೇಗನೆ ಪತ್ತೆ ಮಾಡುವುದು ಮತ್ತು ಸಮರ್ಪಕವಾದ ಪುನರ್ವಸತಿಗೆ ಒಳಪಡಿಸುವುದಕ್ಕಾಗಿ ಕೆಲಸ ಮಾಡಬೇಕಾಗಿದೆ.
ಡಾ| ಸುಜಾ ಶ್ರೀಧರನ್ ಪ್ರೊಫೆಸರ್, ಇಎನ್‌ಟಿ ವಿಭಾಗ ಕೆಎಂಸಿ, ಮಂಗಳೂರು
ಡಾ| ಅರವಿಂದ ನಂಬಿ ಅಸೋಸಿಯೇಟ್ ಪ್ರೊಫೆಸರ್, ಆಡಿಯಾಲಜಿ ಮತ್ತು ಎಸ್‌ಎಲ್‌ಪಿ ವಿಭಾಗ ಕೆಎಂಸಿ ಆಸ್ಪತ್ರೆ, ಮಂಗಳೂರು