Advertisement

ಅಭಿವೃದ್ಧಿಗೆ ವೇದಿಕೆಯಾಗಲಿ ಹೊಸ ಭವನ!

02:56 PM Jan 22, 2021 | Team Udayavani |

ಬಾಗಲಕೋಟೆ: ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಹಲವು ಇಲಾಖೆಗಳು ಸಚಿವರು, ಜಿ.ಪಂ ಸಾಮಾನ್ಯ ಸಭೆ ನಡೆಯುವಾಗಲೂ ಹಿರಿಯ ಅಧಿಕಾರಿಗಳಿಗೂ ಕುಳಿತುಕೊಳ್ಳಲು ಸ್ಥಳಾವಕಾಶವಿಲ್ಲದೇ ಅತ್ಯಂತ ಇಕ್ಕಟ್ಟಾಗಿದ್ದ ಜಿ.ಪಂ ಸಭಾಭವನ, ಇದೀಗ ಹೊಸ ಮೆರುಗಿನೊಂದಿಗೆ ಪ್ರತ್ಯೇಕವಾಗಿ ತಲೆ ಎತ್ತಿದ್ದು, ಈ ಹೊಸ ಭವನ, ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಚರ್ಚೆಗೆ ವೇದಿಕೆಯಾಗಲಿ ಎಂಬ ಆಶಯ ಜಿಲ್ಲೆಯ ಪ್ರಜ್ಞಾವಂತರಿಂದ ಕೇಳಿ ಬರುತ್ತಿದೆ.

Advertisement

ಹೌದು, ಈ ಹಿಂದೆ 2003ರಲ್ಲಿ ಬಾಗಲಕೋಟೆ ಜಿಲ್ಲಾಡಳಿತ ಭವನ ನಿರ್ಮಾಣ ಮಾಡುವ ವೇಳೆಯೇ ಜಿ.ಪಂ, ಕಂದಾಯ ಹಾಗೂ ಸರ್ಕಾರದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕಚೇರಿಗಳಿಗಾಗಿ ಸುಸಜ್ಜಿತ ಜಿಲ್ಲಾಡಳಿತ ಭವನ ನಿರ್ಮಿಸಲಾಗಿತ್ತು. 1997ರಲ್ಲಿ ವಿಜಯಪುರ ಜಿಲ್ಲೆಯಿಂದ ಬಾಗಲಕೋಟೆ ಪ್ರತ್ಯೇಕ ಜಿಲ್ಲೆಯಾದ ಬಳಿಕ, ಹಲವು ಕಚೇರಿಗಳೂ ಪೂರ್ಣ ಪ್ರಮಾಣದಲ್ಲಿ ಜಿಲ್ಲೆಗೆ ಸ್ಥಳಾಂತರಗೊಂಡಿರಲಿಲ್ಲ. ಈಚಿನ ದಿನಗಳಲ್ಲಿ ಎಲ್ಲ ಇಲಾಖೆಗಳ ಕಚೇರಿಗಳು, ಸಚಿವರು, ಸಂಸದರ ಕಚೇರಿಗಳು, ಕೆಲವು ಪ್ರಾದೇಶಿಕ ವಲಯ ಕಚೇರಿಗಳಿಗೆ ಜಿಲ್ಲಾಡಳಿತ ಭವನದಲ್ಲಿ ಕಚೇರಿ ಒದಗಿಸಲಾಗಿದೆ.

ಆದರೆ, ಜಿಪಂಗಾಗಿ ಸಭಾ ಭವನ ನಿರ್ಮಾಣ ಮಾಡಲಾಗಿತ್ತಾದರೂ ಇದು, ಕೇವಲ 55 ರಿಂದ 60 ಜನ ಕುಳಿತುಕೊಳ್ಳುವಷ್ಟು ಸ್ಥಳಾವಕಾಶ ಹೊಂದಿತ್ತು. ಜಿ.ಪಂ ಸದಸ್ಯರು, ಅದಕ್ಕೆ ಸಂಬಂಧಿತದ 27 ಇಲಾಖೆಗಳ ಅಧಿಕಾರಿಗಳಿಗೆ ಅದು ಸಾಕಾಗುತಿತ್ತು. ಆದರೆ, ಈಚೆಗೆ ಜಿ.ಪಂ ಸಾಮಾನ್ಯ ಸಭೆಗೂ ಹಲವು ಇಲಾಖೆಗಳ ಅಧಿಕಾರಿಗಳನ್ನು ಆಹ್ವಾನಿಸಲಾಗುತ್ತಿದೆ. ಶಾಸಕರು, ಸಚಿವರು, ಸಂಸದರು ವೇದಿಕೆಯ ಮುಂಭಾಗ (ವೇದಿಕೆಯೂ ಇಕ್ಕಟ್ಟಾಗಿತ್ತು) ಕುಳಿತುಕೊಳ್ಳಬೇಕಾಗುತ್ತಿತ್ತು. ಇನ್ನು ಸಚಿವರು, ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರು ಬಂದಾಗಂತೂ, ಸಭೆ ನಡೆಸಲು ತೀವ್ರ ಸಮಸ್ಯೆಯಾಗಿತ್ತು. ಹೀಗಾಗಿ ಕಳೆದ 2017-18ನೇ ಸಾಲಿನಲ್ಲಿ ಹೊಸದಾಗಿ ಜಿ.ಪಂ. ಸಭಾ ಭವನ ನಿರ್ಮಾಣಕ್ಕೆ ಯೋಜನೆ ಹಾಕಿಕೊಂಡಿದ್ದು, ಕಳೆದ 2018ರ ಡಿಸೆಂಬರ್‌ನಲ್ಲಿ ಕಾಮಗಾರಿಗೆ ಚಾಲನೆ ಕೂಡ ನೀಡಲಾಗಿತ್ತು.

4.50 ಕೋಟಿ ವೆಚ್ಚದಲ್ಲಿ ಹೊಸ ಭವನ: ಜಿ.ಪಂ.ನ 465.38 ಲಕ್ಷ (4.65 ಕೋಟಿ) ಮೊತ್ತದ ಹೊಸ ಜಿ.ಪಂ. ಸಭಾಭವನ ನಿರ್ಮಾಣದ ಹೊಣೆಯನ್ನು ಬಾಗಲಕೋಟೆ ನಿರ್ಮಿತಿ ಕೇಂದ್ರಕ್ಕೆ ವಹಿಸಿದ್ದು, ಕಟ್ಟಡ ನಿರ್ಮಾಣದಲ್ಲಿ ವಿಶೇಷತೆ ಕಾಯ್ದುಕೊಂಡು ಬಂದಿರುವ ನಿರ್ಮಿತಿ ಕೇಂದ್ರ, ತನಗೆ ನೀಡಿದ ಕಾಲಾವಕಾಶದಲ್ಲಿ ಕಾಮಗಾರಿ ಪೂರ್ಣಗೊಳಿಸಿದೆ. ಈ ಹೊಸ ಸಭಾ ಭವನ, ಕೆಳ ಮಹಡಿ, ನೆಲ ಮಹಡಿ, ಮೊದಲ ಮಹಡಿ ಹೊಂದಿದೆ. ಶೌಚಾಲಯ, ಮುಂಭಾಗ ಮತ್ತು ಬಲ ಭಾಗದಲ್ಲಿ ಪೇವರ್ಸ್‌ ಹಾಗೂ ಸುತ್ತಲೂ ಗಾರ್ಡನ್‌ ನಿರ್ಮಿಸಿ, ಸುಂದರಗೊಳಿಸಲಾಗುತ್ತಿದೆ. ಕೆಳ ಮಹಡಿಯಲ್ಲಿ ಊಟದ ಕೊಠಡಿ ಇದ್ದು, 22 ಅಡಿ ಎತ್ತರದ ನೆಲ ಮಹಡಿಯಲ್ಲಿ 200 ಆಸನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಮಿನಿ ಸಭಾ ಭವನ, ಅಧ್ಯಕ್ಷರು- ಹಿರಿಯ ಅಧಿಕಾರಿಗಳಿಗಾಗಿ ಪ್ರತ್ಯೇಕ ಕೊಠಡಿ ಇವೆ. 100 ಆಸನ ವ್ಯವಸ್ಥೆಯ ಮೊದಲ ಮಹಡಿಯಲ್ಲಿ ವೀಕ್ಷಕರಿ ಗ್ಯಾಲರಿ ನಿರ್ಮಿಸಲಾಗಿದೆ. ಇನ್ನು ಮುಂದೆ ಜಿ.ಪಂ. ಸಾಮಾನ್ಯ ಸಭೆ, ಸಚಿವರು, ಮುಖ್ಯಮಂತ್ರಿಗಳುಬಂದಾಗ, ಸಾರ್ವಜನಿಕರೂ ಈ ವೀಕ್ಷಕರ ಗ್ಯಾಲಿಯಲ್ಲಿ ಕುಲಿತು, ಜಿಲ್ಲೆಯ ಅಭಿವೃದ್ಧಿ ಕುರಿತ ಚರ್ಚೆಯನ್ನು ಕಣ್ಣಾರೆ ನೋಡಬಹುದು.

ವಿಲಕಚೇತನರಿಗೆ ವ್ಯವಸ್ಥೆ: ವಿದ್ಯುತ್‌ ಸಮಸ್ಯೆಯಾದರೆ ಸ್ವಯಂ ಚಾಲನೆಗೊಳ್ಳುವ ಜನರೇಟರ್‌, ಪ್ರತಿಧ್ವನಿ ರಹಿತ ಗೋಡೆಗಳ ನಿರ್ಮಾಣ, ಉತ್ತಮ ಧ್ವನಿ ವರ್ಧಕಗಳು, ಹೈಟೆಕ್‌ ಗುಣಮಟ್ಟದ ಪ್ರೊಜೆಕ್ಟರ್‌ ಅಳವಡಿಸಲಾಗಿದೆ.

Advertisement

ಲಿಫ್ಟ್ ವ್ಯವಸ್ಥೆ ಕೂಡ ಇದ್ದು, ವಿಕಲಚೇತನರಾಗಿ ರ್‍ಯಾಂಪ್‌ ಕೂಡ ನಿರ್ಮಿಸಲಾಗಿದೆ. ವಿಕಲಚೇತನರು, ಮೆಟ್ಟಿಲುಗಳ ಮೇಲೆ ಕಷ್ಟಪಟ್ಟು ತೆರಳದೇ, ರ್‍ಯಾಂಪ್‌ ಮೂಲಕ ಸಾಗಲು ವ್ಯವಸ್ಥೆ ಮಾಡಲಾಗಿದೆ.

ಕಾಲಮಿತಿಯಲ್ಲಿ ಪೂರ್ಣ: ಜಿಲ್ಲೆಯಲ್ಲಿ ಭೂ ಸೇನಾ ನಿಮಗಕ್ಕೆ ವಹಿಸಿದ ಕಾಮಗಾರಿಗಳು ಕಳಪೆ ಹಾಗೂ ವಿಳಂಬವಾಗುತ್ತವೆ ಎಂಬ ಆರೋಪವಿದ್ದು, ಈಚಿನ ದಿನಗಳಲ್ಲಿ ಈ ನಿಗಮಕ್ಕೆ ಯಾವುದೇ ಕಾಮಗಾರಿ ವಹಿಸುತ್ತಿಲ್ಲ. ಆದರೆ, ನಿರ್ಮಿತಿ ಕೇಂದ್ರ, ಕಟ್ಟಡ ನಿರ್ಮಾಣದಂತಹ ಕಾಮಗಾರಿಗಳನ್ನು ಗುಣಮಟ್ಟ ಹಾಗೂ ಅತ್ಯಂತ ನಿರ್ದಿಷ್ಟ ಅವಧಿಯಲ್ಲಿ ಪೂರ್ಣಗೊಳಿಸಿ, ರಾಜ್ಯದಲ್ಲಿಯೇ ಉತ್ತಮ ನಿರ್ಮಿತಿ ಕೇಂದ್ರ ಮೊದಲ ಸ್ಥಾನದಲ್ಲಿದೆ. ಹೀಗಾಗಿ ಹೊಸ ಜಿ.ಪಂ. ಸಭಾ ಭವನ ನಿರ್ಮಿಸಲು ನಿರ್ಮಿತಿ ಕೇಂದ್ರಕ್ಕೆ ವಹಿಸಿದ್ದು, ಕಾಲಮಿತಿಯಲ್ಲಿ ಪೂರ್ಣಗೊಳಿಸಿದೆ. ಹೊಸ ಸಭಾ ಭವನ ಕೆಳ ಮಹಡಿ, ನೆಲ ಮಹಡಿ, ಮೊದಲ ಮಹಡಿ 14 ಸಾವಿರ ಚದರ ಅಡಿ ವಿಸ್ತೀರ್ಣ ಇದ್ದು, ಪೇವರ್ಸ್‌ ಸೌಂದರೀಕರಣ, ಶೌಚಾಲಯ 6 ಸಾವಿರ ಚದರ ಅಡಿ ಇವೆ. ಒಟ್ಟು 20 ಸಾವಿರ ಚದರ ಅಡಿಯಲ್ಲಿ ಹೊಸ ಜಿ.ಪಂ. ಸಭಾ ಭವನ ತಲೆ ಎತ್ತಿದ್ದು, ಜ. 22ರಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಬಾಗಲಕೋಟೆ ಶಾಸಕ ಡಾ|ವೀರಣ್ಣ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಇದನ್ನು ಜಿಲ್ಲೆಗೆ ಅರ್ಪಿಸಲಿದ್ದಾರೆ.

ಇದನ್ನೂ ಓದಿ:ಆಸ್ಟ್ರೇಲಿಯಾ ವಿರುದ್ಧದ ಟೀಂ ಇಂಡಿಯಾದ ಗೆಲುವು ಬದುಕಿಗೆ ದೊಡ್ಡ ಪಾಠ: ಮೋದಿ

ಜಿ.ಪಂ. ಹೊಸ ಸಭಾಭವನ ಅತ್ಯಂತ ಗುಣಮಟ್ಟ ಹಾಗೂ ನೀಡಿದ ಕಾಲಮಿತಿಯಲ್ಲಿ ನಿರ್ಮಿಸಿದ್ದು, ಅತ್ಯಾಧುನಿಕ ತಂತ್ರಜ್ಞಾನಗಳಿಂದ ಕೂಡಿದೆ. ಈ ಸಭಾ ಭವನ ನಿರ್ಮಾಣಕ್ಕೆ ಉಪ ಮುಖ್ಯಮಂತ್ರಿಗಳು, ಬಾಗಲಕೋಟೆ ಶಾಸಕರು, ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಒ ವಿಶೇಷ ಮುತುವರ್ಜಿ ವಹಿಸಿ, ಗುಣಮಟ್ಟದ ಜತೆಗೆ ಅತ್ಯುತ್ತಮವಾಗಿ ನಿರ್ಮಿಸಲು ನಿರ್ದೇಶನ ನೀಡಿದ್ದರು. ಸಭಾ ಭವನದಲ್ಲಿ 200 ಗಣ್ಯರು ಕುಳಿತುಕೊಳ್ಳಲು ಆಸನಗಳಿದ್ದು, ವೀಕ್ಷಕರ ಗ್ಯಾಲರಿಯಲ್ಲಿ 100 ಜನ ಕುಳಿತುಕೊಳ್ಳಬಹುದು.
ಶಂಕರಲಿಂಗ ಗೋಗಿ, ಯೋಜನಾ ನಿರ್ದೇಶಕ, ನಿರ್ಮಿತಿ ಕೇಂದ್ರ.

ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next