Advertisement

ಮತ್ತೆ ಬರಲಿದೆ ಯೋಧ ರಾಣಾ ಪ್ರತಾಪ್ ಕುದುರೆ ಹೆಸರಿನ ಬಜಾಜ್ ಚೇತಕ್ ಸ್ಕೂಟರ್ !

10:00 AM Sep 05, 2019 | Mithun PG |

ಒಂದು ಕಾಲದಲ್ಲಿ ಚೇತಕ್ ಸ್ಕೂಟರ್ ಮೇಲೆ ಹೋಗುತ್ತಿದ್ದರೆ ಅವರೇ ಶ್ರೀಮಂತರು ಅನ್ನೋ ಭಾವನೆಯಿತ್ತು. 1972 ರಿಂದ 2006 ರವರೆಗೂ ಬಜಾಜ್ ಚೇತಕ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೆ ಆದ ಹವಾ ಸೃಷ್ಟಿಸಿತ್ತು. ಭಾರತೀಯ ಯೋಧ ರಾಣಾ ಪ್ರತಾಪ್ ಸಿಂಗ್ ರ ಪ್ರಸಿದ್ಧ ಕುದುರೆಯ ಹೆಸರನ್ನು ಬಜಾಜ್ ಸಂಸ್ಥೆ ತನ್ನ (ಚೇತಕ್) ಸ್ಕೂಟರ್ ಗೆ ಇಟ್ಟು, ಕೈಗೆಟುಕುವ ದರದಲ್ಲಿ ಮಾರಾಟ ಮಾಡುತ್ತಿತ್ತು. ಸ್ಕೂಟರ್ ವಿಭಾಗದಲ್ಲೇ ಅತೀ ಹೆಚ್ಚಿನ ಜನಪ್ರಿಯತೆಯನ್ನು ಪಡೆದಿದ್ದ ಇದನ್ನು  “ಹಮಾರಾ ಬಜಾಜ್” ಎಂದು ಕೂಡ ಕರೆಯುತ್ತಿದ್ದರು.

Advertisement

ದಶಕಗಳ ಕಾಲ ಭಾರತೀಯರ ಮನೆ-ಮನಗಳಲ್ಲಿ ರಾರಾಜಿಸಿದ ಸ್ಕೂಟರ್ ಎಂದರೇ ಅದು ಬಜಾಜ್ ಚೇತಕ್. ಅದರಲ್ಲಿ ಪ್ರಯಾಣಿಸುತ್ತಿದ್ದರೆ ಮೊಗದಲ್ಲಿ ಅದೆನೋ ಉಲ್ಲಾಸ, ಉತ್ಸಾಹ. ನಂತರದಲ್ಲಿ ಹೊಸ ವಿನ್ಯಾಸದ ಸ್ಕೂಟರ್ ಗಳಿಗೆ ಪೈಪೋಟಿ ನೀಡಲಾಗದೆ ನೆಲೆ ಕಳೆದುಕೊಂಡಿತ್ತು. ಈಗ ಈ ಮೆಚ್ಚಿನ ಸ್ಕೂಟರ್ ಅನ್ನು ಮತ್ತೊಮ್ಮೆ ಬಿಡುಗಡೆ ಮಾಡಲು ಕಂಪೆನಿ ಸಿದ್ಧತೆ ಮಾಡಿಕೊಂಡಿದೆ ಎಂಬ ಸುದ್ದಿ ಚೇತಕ್ ಪ್ರಿಯರಲ್ಲಿ ಸಂತೋಷವನ್ನು ಮೂಡಿಸಿದೆ.

ಆ ಕಾಲದಲ್ಲಿ ಬೇರೆ ಸ್ಕೂಟರ್ ಗಳು ಮಾರಾಟವಾಗುತ್ತಿದ್ದರೂ ಚೇತಕ್ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿರಲಿಲ್ಲ.  2006ರಲ್ಲಿ ರಾಹುಲ್ ಬಜಾಜ್ ಅವರ ಮಗ ರಾಜೀವ್ ಬಜಾಜ್ ಕಂಪೆನಿಯ ಆಡಳಿತವನ್ನು ವಹಿಸಿಕೊಂಡ ನಂತರ ಬಜಾಜ್ ಸ್ಕೂಟರ್ ತಯಾರಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಬಜಾಜ್ ಗೆ ಆಧುನಿಕ ಸ್ಪರ್ಶ ನೀಡುವ ಸಲುವಾಗಿ ಬಜಾಜ್ ಮೋಟಾರ್ ಬೈಕ್  ಅನ್ನು ಆ ಸಂದರ್ಭದಲ್ಲಿ ಹೆಚ್ಚು ಹೆಚ್ಚು ಮಾರುಕಟ್ಟೆಗೆ ಪರಿಚಯಿಸಲಾಗಿತ್ತು.

ಹ್ಯಾಂಡಲ್ ನಲ್ಲಿ ಗೇರ್ ಬಾಕ್ಸ್ ನೊಂದಿಗೆ ಬಂದ ಕಂಪೆನಿಯ ಕೊನೆಯ ಮತ್ತು ಜನಪ್ರಿಯ ಸ್ಕೂಟರ್ ಬಜಾಜ್ ಚೇತಕ್. ತದನಂತರದಲ್ಲಿ ಟಿವಿಎಸ್, ಹೊಂಡಾ, ಹೀರೋನಂತಹ ಸ್ಕೂಟರ್ ಗಳು ಸ್ವಯಂಚಾಲಿತ ಗೇರ್ ಬಾಕ್ಸ್ ನೊಂದಿಗೆ ಸ್ಕೂಟರ್ ಬಿಡುಗಡೆ ಮಾಡಿದ ನಂತರ ಅದರ ಮಾರಾಟ ಕಡಿಮೆಯಾಗಲು ಆರಂಭವಾಯಿತು.  ನಂತರ ಕಂಪೆನಿ ಅದನ್ನು ಸ್ಥಗಿತ ಗೊಳಿಸಿ ಕ್ರಿಸ್ಟಲ್ ಹೆಸರಿನ ಸ್ಕೂಟರ್ ಬಿಡುಗಡೆ ಮಾಡಿದರೂ ಬೇಡಿಕೆ ಸಿಗಲಿಲ್ಲ.  ನಂತರದಲ್ಲಿ ಬೈಕ್ ಉತ್ಪಾದನೆಯ  ಕಡೆ ಹೆಚ್ಚಿನ ಗಮನ ಹರಿಸಲು ಬಜಾಜ್ ನಿರ್ಧರಿಸಿತ್ತು.

ಈಗ ಮಧ್ಯಮ ವರ್ಗದ ಅಂಬಾರಿಯಾಗಿದ್ದ ಬಜಾಜ್ ಚೇತಕ್ ನೂತನ ಮಾದರಿಯಲ್ಲಿ ಮಾರುಕಟ್ಟೆಗೆ ಬರಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದು ಪ್ರೀಮಿಯರ್ ಸ್ಕೂಟರ್ ಗಳ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಆ್ಯಕ್ಟೀವಾ, ವೆಸ್ಪಾ ಮತ್ತು ಏಪ್ರಿಲಿಯಾದ ಎಸ್ ಆರ್ 150 ಸ್ಕೂಟರ್ ಗಳಿಗೆ ಪೈಪೋಟಿ ನೀಡಲಿದೆ. ನೂತನ ಬಜಾಜ್ ಚೇತಕ್ ನ ಬೆಲೆ 70 ಸಾವಿರ ರೂಪಾಯಿಗಳಾಗಿದ್ದು ಸಾಕಷ್ಟು ಹೊಸ ಬದಲಾವಣೆಗಳು ಕಂಡುಬರಲಿವೆ. ಚೇತಕ್ 125ಸಿಸಿ ಏರ್ ಕೂಲ್ಡ್ ಇಂಜಿನ್ ಹೊಂದಿದ್ದು, 9 ರಿಂದ 10 ಬಿಹೆಚ್ ಮತ್ತು 9 ಎನ್ ಎಮ್ ಟಾರ್ಕ್ ಶಕ್ತಿಯನ್ನು ಉತ್ಪಾದಿಸುವ ಸಾಮಾರ್ಥ್ಯ ಹೊಂದಿದೆ.

Advertisement

ಇಂದಿನ ಟ್ರೆಂಡ್ ಗನುಗುಣವಾಗಿ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಳ್ಳುತ್ತಿರುವ ಚೇತಕ್ ನ ವಿನ್ಯಾಸ ಇ-ಸ್ಕೂಟರನ್ನು ಬಹುತೇಕ ಹೋಲಲಿದೆ. ಬಜಾಜ್ ಆಟೋ ತನ್ನ ಸ್ಕೂಟರ್ ಬ್ರ್ಯಾಂಡ್ ಅನ್ನು ಮರು ನೋಂದಾಯಿಸಿದಾಗಿನಿಂದ ಆಟೋ ಗೇರ್ ಸೌಲಭ್ಯ ಹೊರಬರುತ್ತದೆ ಎನ್ನಲಾಗುತ್ತಿದೆ.

ಈ ಸ್ಕೂಟರ್ ಅನ್ನು ಬಜಾಜ್ ಆಟೋದ ವಿದ್ಯುತ್ ವಿಭಾಗವಾದ ಬಜಾಜ್ ಅರ್ಬನ್ ಮೂಲಕ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. ಟೆಸ್ಟಿಂಗ್ ಸಮಯದಲ್ಲಿ ಬಜಾಜ್ ಅರ್ಬನೈಟ್ ಸ್ಕೂಟರ್  ಹಲವು ಭಾರಿ ಕಂಡುಬಂದುದರಿಂದ , ಆ ಚಿತ್ರಗಳು ಆನ್ ಲೈನ್ ನಲ್ಲಿ ಸೋರಿಕೆಯಾಗಿದೆ.

ಬಜಾಜ್ ನ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಕಂಪೆನಿ ಮಾಹಿತಿ ಬಿಟ್ಟುಕೊಡದಿದ್ದರೂ  ಇದರ ವಿನ್ಯಾಸ ಹಳೆ ಸ್ಕೂಟರ್ ಮಾದರಿಯನ್ನೇ ಹೋಲುತ್ತದೆ ಎಂದು ಅಂದಾಜಿಸಲಾಗಿದೆ. ಮುಂಭಾಗದ ಏಪ್ರನ್ ವಿಶಾಲವಾಗಿದ್ದು, ಬಾಗಿದ ಸೈಡ್ ಪ್ಯಾನೆಲ್ ಗಳು ಮತ್ತು ದೊಡ್ಡ ರಿಯರ್ ವ್ಯೂ ಮಿರರ್ ನೊಂದಿಗೆ ಸ್ಕೂಟರ್ ನ ಒಟ್ಟಾರೆ ನೋಟ ರೆಟ್ರೋ ಲುಕ್ ಅನ್ನು ಹೋಲುತ್ತದೆ. ಆದರೂ ಕೂಡ ಆಧುನಿಕ ಸಮತೋಲನ ಸೃಷ್ಟಿಸಲು, ಕಂಪೆನಿ ಅಲಾಯ್ ವೀಲ್ ಗಳು , ಎರಡು ಚಕ್ರಗಳಿಗೂ  ಡಿಸ್ಕ್ ಬ್ರೇಕ್ ಮತ್ತು ಎಲ್ ಇ ಡಿ ಲ್ಯಾಂಪ್ ಗಳು  ಮತ್ತು ಟೈಲ್ ಲೈಟ್ ಗಳನ್ನು  ಆಳವಡಿಸಲಾಗಿದೆ.

ಹೊಸ ಸ್ಕೂಟರ್ ಅನ್ನು ಪುರುಷರು ಹಾಗೂ ಮಹಿಳೆಯರು ಚಲಾಯಿಸಬಹುದಾಗಿದ್ದು ಆರಾಮದಾಯಕ ರೈಡಿಂಗ್ ಅನುಭವವನ್ನು ನೀಡುತ್ತದೆ.  ಅಂಡರ್ ಸೀಟ್ ಸ್ಟೋರೆಜ್, ಬ್ಲೂಟೂತ್ ಕನೆಕ್ಟ್ ಮತ್ತು ಡಿಜಿಟಲ್ ಕನ್ಸೋಲ್ ಅನ್ನು ಹೊಂದಿರಲಿದೆ.

ಭಾರತೀಯ ವಾಹನ ಮಾರುಕಟ್ಟೆಯಲ್ಲಿ ನಾಲ್ಕು ಚಕ್ರದ ವಾಹನಗಳಿಗಿಂತ ಹೆಚ್ಚಾಗಿ ಎರಡು ಚಕ್ರದ ವಾಹನಗಳಿಗೆ ಬೇಡಿಕೆ ಹೆಚ್ಚಾಗಿರುತ್ತದೆ. ಅದರಲ್ಲೂ ಸ್ಕೂಟರ್ ಗಳಿಗೆ ಭಾರೀ ಬೇಡಿಕೆ. ಬಜಾಜ್ ಆಟೋ ಸಂಸ್ಥೆ ಒಂದು ಕಾಲದಲ್ಲಿ ಸ್ಕೂಟರ್ ಸೆಗ್ಮೆಂಟ್ ನಲ್ಲಿ ಶೇ 50 ರಷ್ಟು ಪಾಲುದಾರಿಕೆಯನ್ನು ಹೊಂದಿತ್ತು. ವಾರ್ಷಿಕವಾಗಿ ಒಂದು ಮಿಲಿಯನ್ ನಷ್ಟು ಸ್ಕೂಟರ್ ಗಳು ಈ ವೇಳೆ ಮಾರಾಟವಾಗುತ್ತಿದ್ದವು.  ಅದೇ ಗತ ಕಾಲದ ವೈಭವವನ್ನು ಮರುಸ್ಥಾಪಿಸಲು ಬಜಾಜ್ ಚೇತಕ್ ಶೀಘ್ರದಲ್ಲಿ ಬರಲಿದೆ.

ಮಿಥುನ್ ಮೊಗೇರ

Advertisement

Udayavani is now on Telegram. Click here to join our channel and stay updated with the latest news.

Next