ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು, ಹೊಸದಿಲ್ಲಿ, ಗೋವಾ, ಹಾಗೂ ಪುಣೆಗೆ ಶೀಘ್ರದಲ್ಲೇ ಹೊಸ ವಿಮಾನ ಯಾನ ಸೇವೆ ಪ್ರಾರಂಭಿಸಲು ಏರ್ ಇಂಡಿಯಾ ಸಹಿತ ಕೆಲವು ವಿಮಾನಯಾನ ಕಂಪೆನಿಗಳು ಒಪ್ಪಿಗೆ ಸೂಚಿಸಿವೆ.
ಮಂಗಳೂರಿನಿಂದ ಹೆಚ್ಚುವರಿ ವಿಮಾನ ಸೇವೆ ಪ್ರಾರಂಭಿಸುವುದು ಸೇರಿದಂತೆ ಮಂಗಳೂರು ವಿಮಾನ ನಿಲ್ದಾಣದ ಸುಧಾರಣೆಗೆ ಹೊಸದಿಲ್ಲಿಯಲ್ಲಿ ಅಧಿಕಾರಿಗಳ ಸಭೆ ಕರೆದು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರು ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿದಾಗ ಭರವಸೆ ನೀಡಿದ್ದರು.
ಅದರಂತೆ ಗುರುವಾರ ಹೊಸದಿಲ್ಲಿ ಯಲ್ಲಿ ಕೇಂದ್ರ ಸರಕಾರದ ಜತೆ ಕಾರ್ಯದರ್ಶಿ ಉಷಾ ತಾಧೀ ಅವರ ಅಧ್ಯಕ್ಷತೆಯಲ್ಲಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಇಂಡಿಗೋ, ಸ್ಪೈಸ್ ಜೆಟ್ ಹಾಗೂ ಏರ್ ಇಂಡಿಯಾ ಸಂಸ್ಥೆಗಳ ಅಧಿಕಾರಿಗಳ ಸಭೆ ನಡೆಯಿತು.
ಈ ಸಭೆಯಲ್ಲಿ ಮಂಗಳೂರಿನಿಂದ ಶೀಘ್ರವೇ ಹೊಸ ಹಾಗೂ ಹಾಲಿ (ಹೆಚ್ಚುವರಿ) ನಾಲ್ಕೈದು ಮಾರ್ಗಗಳಲ್ಲಿ ವಿಮಾನಯಾನ ಸೇವೆ ಪ್ರಾರಂಭಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಸಭೆ ಕುರಿತು ಉದಯವಾಣಿ ಪ್ರತಿನಿಧಿ ಜತೆ ಮಾತನಾಡಿದ ಸಂಸದ ನಳಿನ್ ಕುಮಾರ್, ನಿಗದಿತ ವಿಮಾನ ಯಾನ ಕಂಪೆನಿಗಳೊಂದಿಗಿನ ಸಭೆ ಸಮಾಧಾನ ತಂದಿದೆ. ಕೆಲವು ಮಾರ್ಗ ಗಳಲ್ಲಿ ಅತಿ ಶೀಘ್ರವೇ ವಿಮಾನ ಸೇವೆ ಆರಂಭವಾಗಲಿದೆ. ಅಲ್ಲದೇ ಕೆಲವು ಹೊಸ ಮಾರ್ಗಗಳಲ್ಲೂ ಮಂಗಳೂರಿನಿಂದ ವಿಮಾನ ಸೇವೆ ಆರಂಭಿಸುವುದಾಗಿ ಕೆಲವು ಕಂಪೆನಿಗಳು ಹೇಳಿವೆ. ಏರ್ ಇಂಡಿಯಾ ಸಂಸ್ಥೆಯು ಮಂಗಳೂರು – ಬೆಂಗಳೂರು, ಮಂಗಳೂರು-ಬೆಂಗಳೂರು-ಹೊಸ ದಿಲ್ಲಿ ಮಧ್ಯೆ ಕೂಡಲೇ ಸಂಚಾರ ಪ್ರಾರಂಭಿಸಲು ಒಪ್ಪಿದೆ. ಜತೆಗೆ ಮಂಗಳೂರು – ಕೋಲ್ಕತಾ ನಡು ವೆಯೂ ಸೇವೆ ಪ್ರಾರಂಭಿಸುವ ಭರವಸೆಯನ್ನೂ ನೀಡಿದೆ. ಇಂಡಿಗೋ ಮಂಗಳೂರು – ಬೆಂಗಳೂರು, ಮಂಗಳೂರು-ಪುಣೆ ಮಧ್ಯೆ ಸೇವೆ ಆರಂಭಿಸಲಿದೆ. ಮಂಗಳೂರು- ಗೋವಾ, ಮಂಗಳೂರು- ತಿರುವನಂತಪುರ ನಡುವೆ ಹಾರಾಟ ನಡೆಸಲು ಅನುಮತಿ ಕೋರಿರು ವುದಾಗಿ ತಿಳಿಸಿದೆ ಎಂದು ತಿಳಿಸಿದರು. ಸ್ಪೈಸ್ ಜೆಟ್, ಮಂಗಳೂರು- ಬೆಂಗಳೂರು ಹಾಗೂ ಮಂಗಳೂರು- ಮುಂಬಯಿ ನಡುವೆ ಹೊಸ ಸೇವೆ ಆರಂಭಿಸಲು ಒಪ್ಪಿದೆ ಎಂದು ತಿಳಿಸಿದ್ದಾರೆ.
ಉದಯವಾಣಿ ಅಭಿಯಾನ ಫಲಶ್ರುತಿ
ಕಣ್ಣೂರಿನಲ್ಲಿ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭಗೊಂಡ ಹಿನ್ನೆಲೆಯಲ್ಲಿ “ಉದಯವಾಣಿ’ಯು ಮಂಗಳೂರು ವಿಮಾನ ನಿಲ್ದಾಣದಿಂದ ಹೆಚ್ಚುವರಿ ವಿಮಾನ ಸೇವೆ ಪ್ರಾರಂಭ ಸೇರಿದಂತೆ ಇಲ್ಲಿಯ ಮೂಲ ಸೌಕರ್ಯ ಸುಧಾರಣೆಗೆ “ಏರ್‌ಪೋರ್ಟ್ ಸಾಧ್ಯತೆ-ಸವಾಲು’ ಎಂಬ ಅಭಿಯಾನ ನಡೆಸಿತ್ತು. ಇದಕ್ಕೆ ಸ್ಪಂದಿಸಿದ್ದ ಸಂಸದ ನಳಿನ್ ಕುಮಾರ್ ಅವರು ವಿಮಾನಯಾನ ಸಚಿವರ ಜತೆ ಚರ್ಚಿಸಿ ಐದಾರು ಮಾರ್ಗಗಳಲ್ಲಿ ಮಂಗಳೂರಿನಿಂದ ಹೊಸ ವಿಮಾನಯಾನ ಪ್ರಾರಂಭಿಸುವುದಾಗಿ ಹೇಳಿದ್ದರು.
ಕುವೈಟ್ ವಿಮಾನದ ಸಮಯ ಬದಲು
ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಮಂಗಳೂರು-ಕುವೈಟ್ ವಿಮಾನದ ಹಾರಾಟದ ಸಮಯ ಬದಲಿಸಬೇಕೆಂಬುದು ಗಲ್ಫ್ ಕನ್ನಡಿಗರ ಬಹುದಿನಗಳ ಬೇಡಿಕೆ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಆದರೆ, ಸಮಯ ಬದಲಿಸುವ ವಿಷಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀರ್ಮಾನವಾಗಬೇಕು. ಇದಕ್ಕೆ ಕುವೈಟ್‌ನ ವಿಮಾನಯಾನ ಸಂಸ್ಥೆಯ ಒಪ್ಪಿಗೆಯೂ ಬೇಕಿದೆ. ಹೀಗಾಗಿ ಶೀಘ್ರವೇ ಅಲ್ಲಿನ ಅಧಿಕಾರಿಗಳೊಂದಿಗೂ ಮಾತುಕತೆ ನಡೆಸಿ, ಕನ್ನಡಿಗರಿಗೆ ಅನುಕೂಲವಾಗುವಂತೆ ಸಮಯ ಬದಲಾವಣೆಗೆ ಕ್ರಮ ಕೈಗೊಳ್ಳುವ ಭರವಸೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಧಿಕಾರಿಗಳಿಂದ ದೊರೆತಿದೆ ಎಂದಿದ್ದಾರೆ ಸಂಸದ ನಳಿನ್ ಕುಮಾರ್ ಕಟೀಲು.