ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಇಂದು ಮತ್ತೆ 27 ಹೊಸ ಸೋಂಕು ಪ್ರಕರಣ ಪತ್ತೆಯಾಗಿದೆ. ದುಬೈ ಮತ್ತು ಮಹಾರಾಷ್ಟ್ರದಿಂದ ಬರುತ್ತಿರುವ ಜನರಿಗೆ ಸೋಂಕು ಕಾಣಿಸಿಕೊಳ್ಳುತ್ತಿರುವುದು ಜಿಲ್ಲೆಯ ಜನತೆಯ ಚಿಂತೆಗೆ ಕಾರಣವಾಗಿದೆ.
ಇಂದಿನ ಹೊಸ 27 ಪ್ರಕರಣಗಳ ಪೈಕಿ 16 ಸೋಂಕಿತರು ಹತ್ತು ವರ್ಷಕ್ಕಿಂತ ಕೆಳಗಿನ ಮಕ್ಕಳಾಗಿದ್ದಾರೆ.
ಮಹಾರಾಷ್ಟ್ರದ ಮಲ್ಲಚಾಂದಿವಲ್ಲಿ, ಮುಂಬೈ, ಸಾಯಿಲ್, ಥಾಣೆ, ಪುಣೆ ಸೇರಿದಂತೆ, ತೆಲಂಗಾಣ, ಕೇರಳದಿಂದ ಬಂದವರಿಗೆ ಸೋಂಕು ತಾಗಿರುವುದು ದೃಢವಾಗಿದೆ. ಉಡುಪಿ ಜಿಲ್ಲೆಗೆ ಸೇರಿದ ಇಬ್ಬರು ಉತ್ತರ ಕನ್ನಡ ಜಿಲ್ಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹಾರಾಷ್ಟ್ರದಿಂದ ಆಗಮಿಸಿದ 23, ತೆಲಂಗಾಣದಿಂದ 3, ಕೇರಳದಿಂದ ಆಗಮಿಸಿದ ಓರ್ವ ವ್ಯಕ್ತಿಗೆ ಪಾಸಿಟಿವ್ ಬಂದಿದೆ. ಇದರಲ್ಲಿ ಆರು ಮಂದಿ ಗಂಡಸರು, ಐದು ಮಂದಿ ಹೆಂಗಸರು, 16 ಮಕ್ಕಳು.
ಮುಂಬಯಿಂದ ಹಾಗೂ ದುಬೈಯಿಂದ ಉಡುಪಿಗೆ ಆಗಮಿಸಿದವರಿಂದ ಗುರುವಾರ ಮತ್ತಷ್ಟು ಕೊರೊನಾ ಪಾಸಿಟಿವ್ ಬರುವ ಸಾಧ್ಯತೆ ಇದೆ ಎಂಬ ಮಾಹಿತಿ ಆರೋಗ್ಯ ಇಲಾಖೆಯಿಂದ ತಿಳಿದುಬಂದಿದೆ.
ಮೇ 15 ರಂದು ದುಬೈಯಿಂದ ಆಗಮಿಸಿದ ಆರು ಮಂದಿಯಲ್ಲಿ ಕೋವಿಡ್-19 ಪಾಸಿಟಿವ್ ಕಾಣಿಸಿಕೊಂಡ ಬಳಿಕ ಮೇ 20 ರವರೆಗೆ ಮತ್ತೆ ಹೊಸದಾಗಿ 18 ಪ್ರಕರಣಗಳು ವರದಿಯಾಗಿವೆ.