ಬೆಳಗಾವಿ: ಬುಧವಾರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಸ್ಪೋಟವಾಗಿದ್ದು ಒಂದೇ ದಿನದಲ್ಲಿ ಜಿಲ್ಲೆಯಲ್ಲಿ 13 ಜನರಿಗೆ ಕೋವಿಡ್ ಸೋಂಕಿನ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ.
ಇವರೆಲ್ಲರೂ ಜಾರ್ಖಂಡ್ ಜಿಲ್ಲೆಯಲ್ಲಿನ ಶಿಖರ್ಜಿಗೆ ಧಾರ್ಮಿಕ ಯಾತ್ರೆಗೆ ತೆರಳಿ ಜಿಲ್ಲೆಗೆ ಮರಳಿದವರಾಗಿದ್ದರು.
ಕ್ವಾರೆಂಟೈನ್ ನಲ್ಲಿದ್ದ ಈ 13 ಜನರಲ್ಲಿ ಇದೀಗ ಕೋವಿಡ್ ಸೋಂಕು ಪತ್ತೆಯಾಗಿರುವುದು ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿದೆ ಮತ್ತು ಈ 13 ಹೊಸ ಪ್ರಕರಣಗಳ ಮೂಲಕ ಜಿಲ್ಲೆಯಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 143ಕ್ಕೇರಿದೆ.
ಜಾರ್ಖಂಡ್ ಪ್ರವಾಸದಿಂದ ಹಿಂದಿರುಗಿದ್ದ ಹುಕ್ಕೇರಿಯ ಒಬ್ಬರು, ಅಥಣಿ ತಾಲೂಕಿನ ಸವದಿಯ 7, ಬೆಳವಕ್ಕಿಯ 1, ನಂದಗಾವನದ 3, ಜುಂಜರವಾಡ ಒಬ್ಬರಲ್ಲಿ ಕೋವಿಡ್ ಪಾಸಿಟಿವ್ ಸೋಂಕು ಕಾಣಿಸಿಕೊಂಡಿದೆ.
ಒಂದೂವರೆ ತಿಂಗಳ ಹಿಂದೆ ಬೆಳಗಾವಿ ಚಿಕ್ಕೋಡಿ, ಅಥಣಿ ಸೇರಿದಂತೆ ವಿವಿಧ ಕಡೆಗಳಿಂದ ಜನರು ಜಾರ್ಖಂಡ ಶಿಖರ್ಜಿ ಧಾರ್ಮಿಕ ಯಾತ್ರೆಗೆ ತೆರಳಿದ್ದರು. ಬಳಿಕ ಲಾಕ್ ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ತವರಿಗೆ ವಾಪಸ್ಸಾಗಿದ್ದ ಈ ತಂಡವನ್ನು ಕಾಗವಾಡ ತಾಲೂಕಿನ ಶಿರಗುಪ್ಪಿ, ಚಿಕ್ಕೋಡಿಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.