ಹೊಸದಿಲ್ಲಿ : “ಮುಸ್ಲಿಮರನ್ನು ನಾಯಿ ಮರಿ (puppies) ಗಳಿಗೆ ಹೋಲಿಸುವ ವ್ಯಕ್ತಿಯೊಬ್ಬ ದೇಶದ ಪ್ರಧಾನಿ ಆದಾನು ಎಂದು ನಾನು 2014ಕ್ಕೆ ಮೊದಲು ಯೋಚಿಸಿಯೇ ಇರಲಿಲ್ಲ” ಎಂದು ಅಮಾನತಾಗಿರುವ ಕಾಂಗ್ರೆಸ್ ನಾಯಕ ಮಣಿ ಶಂಕರ್ ಅಯ್ಯರ್ ಹೇಳಿದ್ದಾರೆ.
ಅಯ್ಯರ್ ಅವರ ಈ ವಿವಾದಾತ್ಮಕ ಹೇಳಿಕೆಯನ್ನು ಭಾರತೀಯ ಜನತಾ ಪಕ್ಷ ತೀವ್ರವಾಗಿ ಪ್ರತಿಭಟಿಸುವುದು ಖಚಿತವಿದೆ.
ಅಯ್ಯರ್ ಅವರು ರಾಷ್ಟ್ರ ರಾಜಧಾನಿ ದಿಲ್ಲಿಯ ಇಂಡಿಯಾ ಇಂಟರ್‌ನ್ಯಾಶನಲ್ ಸೆಂಟರ್‌ನಲ್ಲಿ ಏರ್ಪಟ್ಟಿದ್ದ “ಅಸಹಿಷ್ಣುತೆಯ ರಾಷ್ಟ್ರೀಯ ಅಭಿಯಾನ ಸಾಕಷ್ಟಾಯಿತು” ಎಂಬ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
2002ರಲ್ಲಿ ನಡೆದಿದ್ದ ಗುಜರಾತ್ ದೊಂಬಿಯಿಂದ ನಿಮ್ಮ ಮನಸ್ಸಿಗೆ ಘಾಸಿಯಾಯಿತೇ ಎಂದು ನರೇಂದ್ರ ಮೋದಿ ಅವರನ್ನು ಕೇಳಲಾದಾಗ ಅವರು ‘ನಾಯಿ ಮರಿಯೊಂದು ಕಾರಿನಡಿ ಬಿದ್ದು ಸತ್ತರೂ ನಾನು ಅದರ ವೇದನೆಯನ್ನು ಅನುಭವಿಸುತ್ತೇನೆ ಎಂದಿದ್ದರು’ ಎಂಬುದಾಗಿ ಮಣಿ ಶಂಕರ್ ಅಯ್ಯರ್ ಹೇಳಿದರು.
ಮೋದಿ ವಿರುದ್ಧದ ವಾಕ್ ದಾಳಿಯನ್ನು ಮುಂದುವರಿಸಿ ಮಾತನಾಡಿದ ಅಯ್ಯರ್, “ಗುಜರಾತ್ ದೊಂಬಿ ನಡೆದು 24 ದಿನಗಳ ವರೆಗೂ ಮೋದಿ ಮುಸ್ಲಿಂ ನಿರಾಶ್ರಿತರ ಶಿಬಿರಗಳ ಬಳಿ ಸುಳಿಯಲಿಲ್ಲ. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಬಂದಿದ್ದಾಗಲೇ ಮೋದಿ, ಅಹ್ಮದಾಬಾದಿನ ಶಾ ಆಲಂ ಮಸೀದಿಗೆ ಭೇಟಿ ಕೊಟ್ಟಿದ್ದರು. ಪ್ರಧಾನಿ ಜತೆಗೆ ಹೋಗುವುದು ಅವರಿಗೆ ಶಿಷ್ಟಾಚಾರದ ಅನಿವಾರ್ಯತೆಯಾಗಿತ್ತು. ಇಂತಹ ಒಬ್ಬ ಮನುಷ್ಯ ಮುಂದೆ ದೇಶದ ಪ್ರಧಾನಿ ಆದಾನು ಎಂದು ನಾನು ಎಂದೂ ಭಾವಿಸಿರಲಿಲ್ಲ” ಎಂದು ಹೇಳಿದರು.
ಕೋಮು ಸಾಮರಸ್ಯಕ್ಕೆ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ನೀಡಿದ್ದ ಕಾಣಿಕೆಯನ್ನು ಅಯ್ಯರ್ ಈ ಸಂದರ್ಭದಲ್ಲಿ ಕೊಂಡಾಡಿದರು.
”ರಾಷ್ಟ್ರೀಯತೆಯ ನಿಜವಾದ ಪರಿವ್ಯಾಖ್ಯೆಯನ್ನು ನಮಗೆ ಬೋಧಿಸಿದವರೇ ನಮ್ಮ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ; ಬಹುಸಂಖ್ಯಾಕ ಕೋಮುವಾದ, ಅಲ್ಪಸಂಖ್ಯಾಕ ಕೋಮುವಾದಕ್ಕಿಂತ ಘೋರ ಎಂಬುದನ್ನು ನಾನು ಅವರಿಂದ ಅರಿತುಕೊಂಡೆ. ನಾವು ಒಂದು ದೇಶವಾಗಿರಬೇಕಾದರೆ ಜಾತ್ಯತೀತರಾಗಿರುವುದು ಅಗತ್ಯ ಎಂಬುದನ್ನು ನೆಹರೂ ನಮಗೆ ಬೋಧಿಸಿದರು” ಎಂದು ಅಯ್ಯರ್ ಹೇಳಿದರು.