ಇವತ್ತಿನ ಈ ನಿರ್ಧಾರದ ಹಿಂದೆ ಪ್ರೀತಿಯ ಸೆಲೆಯಾಗಿ ಯಾರು ಬಂದರೂ ಅಳಿಸಲಾಗದೇ ಇರುವ ನೆನಪಿನ ಸರಮಾಯ ಗುಚ್ಛ ಇದೆ. ಒಂದು ಮಾತು ಹೇಳುತ್ತೇನೆ ಕೇಳು, ನೀನಿಲ್ಲ ಎಂದ ಕೂಡಲೇ ಈ ಪಯಣದ ದಾರಿ ಬದಲಾಗಬಹುದು. ಆದರೆ, ಪಯಣ ನಿಲ್ಲುವುದಿಲ್ಲ. ಯಾರ ಹಂಗಿಲ್ಲದೇ ನಿರಂತರವಾಗಿಯೇ ಸಾಗುತ್ತಿರುತ್ತದೆ.
ಬದುಕಿನ ಅಂಗಳದಲ್ಲಿ ಸುಂದರ ಕನಸುಗಳನ್ನು ಹೊತ್ತು ಕಾದದ್ದು ಎಷ್ಟು ಸತ್ಯ. ಹಾಗೆಯೇ, ಈಗ ನಿನ್ನ ನೆನಪೆಂಬ ಕನಸಿಗೆ ತಿಲಾಂಜಲಿ ಇಡುತ್ತಿರುವುದೂ ಸುಳ್ಳಲ್ಲ. ನೆನಪಿರಲಿ, ನಾನು ಒಂಟಿತನದಲ್ಲಿ ಪರಮ ಸುಖೀ. ಇಲ್ಲಿ ನೀನೇ ನನ್ನ ಬದುಕು ಎಂಬ ಲಹರಿ ಇಲ್ಲ. ನಿನ್ನ ನೆನಪೆಂಬ ಸುಳಿ, ನನ್ನ ಬಳಿ ಇನ್ನೆಂದಿಗೂ ಸುಳಿಯುವುದೇ ಇಲ್ಲ.
ಕನಸಿನ ಮೂಟೆ ಹೊತ್ತು ದೂರ ಸಾಗುತ್ತಿರುವೆನು. ಅಲ್ಲೊಂದು ನನ್ನದೇ ಸುಂದರ ಪ್ರಪಂಚ ಸೃಷ್ಟಿಸಿ ಕೊಳ್ಳುತ್ತೇನೆ. ಹೌದು, ಯಾಕಿಷ್ಟು ಕಠೊರವಾಗಿ ಮಾತನಾಡುತ್ತಿದ್ದಾಳೆ ಅನಿಸಿಬಹುದು. ನಿನ್ನ ಮನದೊಡತಿ ನಾ ಅಲ್ಲ. ನಿನ್ನ ಹೃದಯದಲ್ಲಿ ಪ್ರತಿ ದಿನ ಆರಳುತ್ತಿರುವ ನಿತ್ಯ ಪುಷ್ಪವೂ ನಾನಲ್ಲ. ಈವರೆಗಿನ ಎಲ್ಲ ಕನಸುಗಳಿಗೆ ಅಂತ್ಯ ಹಾಡಿ, ನನ್ನ ಕನಸಿನ ಅರಮನೆಗೆ ಆಸೆ ಆಕಾಂಕ್ಷೆ ಹೊತ್ತು ಹೊರಡುತ್ತಿದ್ದೇನೆ.
ನಿನ್ನಷ್ಟು ಲೆಕ್ಕಾಚಾರದ ಬದುಕು ನನ್ನದಲ್ಲ. ಏನೇ ಎದುರಾದರೂ ಅದನ್ನು ನಗು ನಗುತ್ತಲೇ ಸ್ವಾಗತಿಸುವ ಸ್ವಭಾವ ನನ್ನದು. ನಿನ್ನಿಂದ ಕಲಿತ ಅನುಭವದ ಪಾಠ ಮರೆಯುವಂತಿಲ್ಲ. ಸಮಾಜದ ಚುಚ್ಚು ಮಾತಿಗಿಂತ, ಆತ್ಮ ಸಾಕ್ಷಿಯೆಂಬುದಕ್ಕೆ ಬೆಲೆ ಕೊಡುವವಳು ನಾನು.
ಒಂದು ಬಾರಿ ಯೋಚಿಸಿ ನೊಡು, ನನ್ನ ತಾಳ್ಮೆಯನ್ನು ಎಷ್ಟು ಬಾರಿ ಪರೀಕ್ಷೆಗೆ ಒಡ್ಡಿದ್ದೀಯಾ? ಇವತ್ತಿನ ಈ ನಿರ್ಧಾರದ ಹಿಂದೆ ಪ್ರೀತಿಯ ಸೆಲೆಯಾಗಿ ಯಾರು ಬಂದರೂ ಅಳಿಸಲಾಗದೇ ಇರುವ ನೆನಪಿನ ಸರಮಾಲೆ ಗುಚ# ಇದೆ.
ಒಂದು ಮಾತು ಹೇಳುತ್ತೇನೆ ಕೇಳು, ನೀನಿಲ್ಲ ಎಂದ ಕೂಡಲೇ ಈ ಪಯಣದ ದಾರಿ ಬದಲಾಗಬಹುದು. ಆದರೆ, ಪಯಣ ನಿಲ್ಲುವುದಿಲ್ಲ. ಯಾರ ಹಂಗಿಲ್ಲದೇ ನಿರಂತರವಾಗಿ ಸಾಗುತ್ತಿರುತ್ತದೆ. ನೀ ಕಲಿಸಿದ ಪಾಠ, ಜೀವಂತ ಪರ್ಯಂತ ನೆನಪಿನ ಜೋಳಿಗೆಯಲ್ಲಿರುತ್ತದೆ.
ಬದುಕಿನ ಎಲ್ಲಾ ಪ್ರಶ್ನೆಗೆ ಬಹುಬೇಗನೇ ಉತ್ತರ ದೊರಕಿದೆ. ಆದರೂ, ನಿನ್ನನ್ನು ಎಂದಿಗೂ ದೂಷಿಸುವುದಿಲ್ಲ. ನೆನಪುಗಳನ್ನು ಜೋಳಿಗೆಯಲ್ಲಿ ಎತ್ತಿಟ್ಟುಕೊಂಡು ನಗುತ್ತಾ ಆಸೆ ಆಕಾಂಕ್ಷೆಗಳನ್ನು ಈಡೇರಿಸಲು ನನ್ನ ಅರಮನೆಯೆಡೆಗೆ ಸಾಗುವೆನು. ಕೊನೆಯದಾಗಿ, ಜೀವನದಲ್ಲಿ ಬಲುದೊಡ್ಡ ಪಾಠ ಕಲಿಸಿದ ನಿನಗೆ ಧನ್ಯವಾದ.
ಸಾಯಿನಂದಾ ಚಿಟ್ಪಾಡಿ