Advertisement

ಅಪರಿಚಿತ ಹಾದಿಯಲ್ಲಿ ಕಣ್ಮುಚ್ಚಿ ನಡೆಯಬಾರದು !

06:00 AM Aug 13, 2018 | |

ನಮಗೆ ಬಹು ಪರಿಚಿತರಾದ ಮಾಧವರಾಯರು ಮನೆ ಹುಡುಕುತ್ತಿದ್ದರು. ಮೊದಲು ಯಾವ ಜಾಗದಲ್ಲಿ ನಿಮಗೆ ಮನೆ ಬೇಕು ಎಂದು ಕೇಳಿದ್ದಕ್ಕೆ ಅವರು, ಎಲ್ಲಾದರೂ ಸರಿ ಎಂದರು.  ಮನೆ ಅಂದಮೇಲೆ ಅದು ಹೇಗಿರಬೇಕು ? ಎಂದರೆ “ಹೇಗಾದರೂ ಸರಿ’ ಎಂದರು. ಎಷ್ಟು ಬೆಲೆ ಇದ್ದರೆ ಅನುಕೂಲ ಎಂದಿದ್ದಕ್ಕೆ “ಎಷ್ಟಿರತ್ತೋ ಅಷ್ಟು’ ಎಂದರು. ಹೀಗೆ,  ಹಲವಾರು ತಿಂಗಳು ಅವರು ಇವರು ಮಾಧವರಾಯರಿಗಾಗಿ ಮನೆ ಹುಡುಕಿದರು.
 
ಮನೆ ಹುಡುಕುವಾಗ  ಕೆಲವರು ಅಪಾರ್ಟ್‌ಮೆಂಟ್‌ ತೋರಿಸಿದರು. ಅಷ್ಟೇ ಅಲ್ಲ, ಬಾಡಿಗೆ ಕೊಡುವ ಬದಲು ತಿಂಗಳು ತಿಂಗಳು ಸಾಲದ ಕಂತು ಕಟ್ಟಿದರಾಯಿತು ಎಂದರು. ಇವರೂ ಹಾಗೇ ಹುಡುಕಿದರು. ಅದೂ ಕೆಲವು ತಿಂಗಳು ನಡೆಯಿತು. ಆಗ ಇನ್ನೊಬ್ಬರು ಈಗೆಲ್ಲಾ ಸುಲಭವಾಗಿ ಬ್ಯಾಂಕಿನಲ್ಲಿ ಸಾಲ ಸಿಗುತ್ತೆ. ಅಷ್ಟೇ ಮಾಡಿ. ಅದರಿಂದ ನಿವೇಶನ ತೆಗೆದುಕೊಳ್ಳಿ. ಆಮೇಲೆ ಮನೆ ಕಟ್ಟಿದರಾಯಿತು ಎಂದು ಹೊಸದೊಂದು ಮಾರ್ಗ ಸೂಚಿಸಿದರು.  ಹೀಗೆ ಅವರವರಿಗೆ ತೋಚಿದಂತೆ ಸಲಹೆ ಕೊಡುತ್ತ ಬಂದರು. ಇವರೂ ಅದಕ್ಕೆ ತಕ್ಕ ಹಾಗೆ ವರ್ತಿಸಿದರು. ಕೊನೆಯಲ್ಲಿ ಅವರಿಗೆ ಮನೆಯೂ ಸಿಗಲಿಲ್ಲ. ಸ್ವಂತ ಮನೆಯೂ ಆಗಲಿಲ್ಲ. ಯಾಕೋ ನಮ್ಮ ಟೈಂ ಸರಿ ಇಲ್ಲ ಎಂದು ಹೇಳಲು ಮಾಧವರಾಯರೂ ಮರೆಯಲಿಲ್ಲ. 

Advertisement

ಅವರ ಈ ಸಮಸ್ಯೆಗೆ ಅವರಲ್ಲದೇ ಬೇರೆಯವರು ಹೊಣೆ ಅಲ್ಲವೇ ಅಲ್ಲ. ಮನೆ ಬೇಕಾಗಿರುವುದು ಅವರಿಗೆ. ಯಾವ ಮನೆ ಬೇಕು? ಹೇಗಿರಬೇಕು? ಇತ್ಯಾದಿ ನಿರ್ಧರಿಸಬೇಕಾದವರು ಇವರೇ.  ಅದು ಬಿಟ್ಟು ಬೇರೆಯವರಿಗೆ ಆಯ್ಕೆಯ ಅವಕಾಶ ಕೊಟ್ಟರೆ ಆಗುವುದೇ ಹೀಗೆ. ನಮಗೆ ಮೇಲ್ನೋಟಕ್ಕೆ ಹೀಗೂ ಇರುತ್ತಾರಾ ಎಂದು ಅನ್ನಿಸುವುದು ಸಹಜ. ನಿಜವಾಗಿಯೂ ಷೇರು ಪೇಟೆಯಲ್ಲಿ ಹಣ ಹೂಡುವವರು ಎಷ್ಟೋ ಜನ ಹೀಗೆಯೇ ಇರುತ್ತಾರೆ. ಅವರಿಗೆ ಕೇವಲ ಷೇರಿನಲ್ಲಿ ದುಡ್ಡು ಮಾಡಬೇಕು ಎಂದು ಮಾತ್ರ ಇರುತ್ತದೆ. ಆದರೆ ಯಾವ ಶೇರು ಖರೀದಿಸಬೇಕು? ಎಷ್ಟು ಹಣ ಕೂಡ ಬೇಕು? ಅಕಸ್ಮಾತ್‌ ಲಾಸ್‌ ಆದರೆ ಅದರಿಂದ ಹೇಗೆ ಪಾರಾಗಬೇಕು? ಷೇರು ಖರೀದಿಸಿದ ನಂತರ ಮತ್ತು ಖರೀದಿಗೂ ಮೊದಲು ಏನೇನು ಮೊದಲು ಏನೇನು ಮುನ್ನೆಚ್ಚರಿಕೆ ವಹಿಸಬೇಕು ಎಂದೆಲ್ಲಾ ಯೋಸಿಚುವುದೇ ಇಲ್ಲ. ಅದನ್ನೆಲ್ಲಾ ಬೇರೆಯವರಿಗೆ ಬಿಡುತ್ತಾರೆ. ಗಾಡಿ ಚಲಾಯಿಸಲು ಬಾರದಿದ್ದರೆ ಗಾಡಿ ಓಡಿಸುವ ಧೈರ್ಯ ನಮಗೆ ಬರುವುದಾದರೂ ಹೇಗೆ? ಹಾಗೆಯೇ ಷೇರಿನಲ್ಲಿ ಹಣ ಹೂಡುವುದರ ಬಗೆಗೆ ಅರಿವಿರದಿದ್ದರೆ ಲಾಭ ಬಂದೇ ಬರುತ್ತದೆ ಎನ್ನುವುದಕ್ಕೆ ಖಚಿತತೆ ಏನು? ಹೆಚ್ಚಿನವರು ಹೀಗೆಲ್ಲಾ ಯೋಚಿಸುವುದೇ ಇಲ್ಲ. ಯಾವುದೋ ಷೇರಿನಲ್ಲಿ ಹಣ ಹೂಡಿದರೆ, ಮುಂದಿನ ದಿನಗಳಲ್ಲಿ ಲಾಭದ ಹಣ ಬಂದು ಬಿಡುತ್ತದೆ ಎಂದು ನಂಬಿಬಿಡುತ್ತಾರೆ. ಅಂಥ ಬೆಳವಣಿಗೆ ಆಗದೇ ಹೋದಾಗ, ಥತ್‌, ಈ ಶೇರು ವ್ಯವಹಾರದಲ್ಲಿ ಸುಖವಿಲ್ಲ ಕಣ್ರೀ. ಅಲ್ಲಿ ಸಖತ್‌ ಮೋಸ ಎಂದು ದೂರುತ್ತಾ ಸುಮ್ಮನಾಗುತ್ತಾರೆ ಅಥವಾ ಹಣ ಹೂಡುವಂತೆ ಐಡಿಯಾ ಕೊಟ್ಟವರ ಕಡೆಗೆ ಬೆರಳು ಮೂಡಿ, ಅವರ ಮಾತು ನಂಬಿಂಕೊಂಡು ನಾನು ಕೆಟ್ಟೆ ಎಂದು ಪ್ರಲಾಪಿಸುತ್ತಾರೆ. 

ತಪ್ಪು ನಮ್ಮದೇ.ಆದರೆ ನಾವು ಬೇರೆಯವರತ್ತ ಬೆರಳು ತೋರಿಸುತ್ತೇವೆ. ಹಾಗಾಗಿ ನಾವು ತಿದ್ದಿಕೊಳ್ಳುವುದಿಲ್ಲ. ಸುಧಾರಿಸುವ ಅವಕಾಶದಿಂದ ವಂಚಿತರಾಗುತ್ತೇವೆ.

– ಸುಧಾಶರ್ಮ ಚವತ್ತಿ

Advertisement

Udayavani is now on Telegram. Click here to join our channel and stay updated with the latest news.

Next