Advertisement

ನೀರಿನಲ್ಲೂ ತಾರತಮ್ಯ ಬೇಡ ಸ್ವಾಮಿ

12:27 AM Apr 09, 2019 | Lakshmi GovindaRaju |

ಬೆಂಗಳೂರು: ಜಲಮಂಡಳಿಯು ಮನೆಗಳಿಗೆ ಹಾಗೂ ಅಪಾರ್ಟ್‌ಮೆಂಟ್‌ಗಳಿಗೆ ನೀರಿನ ಸಂಪರ್ಕ ವಿಚಾರದಲ್ಲಿ ಅನುಸರಿಸುತ್ತಿರುವ ತಾರತಮ್ಯ ಧೋರಣೆ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ “ಬೆಂಗಳೂರು ಅಪಾರ್ಟ್‌ಮೆಂಟ್‌ ಫೆಡರೇಷನ್‌’ ಈ ಬಾರಿ ಲೋಕಸಭೆ ಚುನಾವಣೆ ಮತಯಾಚನೆಗೆ ಬರುವ ಅಭ್ಯರ್ಥಿಗಳ ಮುಂದೆ ತಮ್ಮ ಸಮಸ್ಯೆಯನ್ನಿಟ್ಟು ಚರ್ಚಿಸಲು ಮುಂದಾಗಿದೆ.

Advertisement

ಬೆಂಗಳೂರು ನಗರಕ್ಕೆ ಕಾವೇರಿ ನೀರು ಪೂರೈಸುವ ಹೊಣೆ ಹೊತ್ತಿರುವ ಜಲಮಂಡಳಿಯು, ವಯಕ್ತಿಕ ಮನೆಗಳಿಗೆ ಹೋಲಿಸಿದರೆ ಅಪಾರ್ಟ್‌ಮೆಂಟ್‌ಗಳಿಗೆ ಕಾವೇರಿ ನೀರಿನ ಸಂಪರ್ಕ, ನೀರಿನ ದರ ಸೇರಿದಂತೆ ಜಲಮಂಡಳಿಯಿಂದ ನೀಡುವ ಎಲ್ಲಾ ಬಗೆಯ ಸೇವೆಗೆ ಹೆಚ್ಚು ಶುಲ್ಕ ವಸೂಲಿ ಮಾಡುತ್ತದೆ ಎಂಬ ಆರೋಪ ಕಳೆದ ಮೂರ್‍ನಾಲ್ಕು ವರ್ಷಗಳಿಂದ ಕೇಳಿಬರುತ್ತಿದೆ.

ಇದಕ್ಕಾಗಿ ಅಪಾರ್ಟ್‌ಮೆಂಟ್‌ಗಳ ನಿವಾಸಿಗಳು ಹಾಗೂ ಫೆಡರೇಷನ್‌ಗಳು ರಸ್ತೆಗಿಳಿದು ಜಲಮಂಡಳಿ ಹಾಗೂ ಬಿಬಿಎಂಪಿ ವಿರುದ್ಧ ಅನೇಕ ಹೋರಾಟಗಳನ್ನು ಮಾಡಿದ್ದಾರೆ. ಅವುಗಳ ಪೈಕಿ ಈ “ಬೆಂಗಳೂರು ಅಪಾರ್ಟ್‌ಮೆಂಟ್‌ ಫೆಡೆರೇಷನ್‌’ ಕೂಡಾ ಒಂದಾಗಿದ್ದು, ಇವರು ಚುನಾವಣೆ ಹಿನ್ನೆಲೆ ಮತ ಕೇಳಲು ಬರುವವರಿಗೆ ತಮಗೆ ಆಗುತ್ತಿರುವ ಸಮಸ್ಯೆ ಕುರಿತು ಪ್ರಶ್ನಿಸಿ, ಒತ್ತಡ ಹೇರುವ ಮೂಲಕ ಹೋರಾಟವನ್ನು ವಿಶಿಷ್ಟ ರೀತಿಯಲ್ಲಿ ಮಾಡುತ್ತಿದ್ದಾರೆ.

ನಗರದ ಸುಮಾರು 400 ಅಪಾರ್ಟ್‌ಮೆಂಟ್‌ಗಳು “ಬೆಂಗಳೂರು ಅಪಾರ್ಟ್‌ಮೆಂಟ್‌ ಫೆಡೆರೇಷನ್‌’ (ಬಿಎಎಫ್) ವ್ಯಾಪ್ತಿಗೆ ಬರುತ್ತವೆ. ಇದರ ಅಡಿ ಒಟ್ಟು 70,000 ಫ್ಲಾಟ್‌ಗಳಿದ್ದು, ಇಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ವಾಸಿಸುತ್ತಿದ್ದಾರೆ. ಇಲ್ಲಿನ ನಿವಾಸಿಗಳಿಗೆ ಎಲ್ಲಾ ಮೂಲ ಸೌಕರ್ಯಗಳನ್ನು ಅಪಾರ್ಟ್‌ಮೆಂಟ್‌ಗಳ ಮಾಲೀಕರೇ ನೀಡುತ್ತಿದ್ದರೂ, ಕುಡಿಯುವ ಹಾಗೂ ಬಳಸುವ ನೀರಿಗಾಗಿ ಮಾತ್ರ ಜಲಮಂಡಳಿಯನ್ನೇ ಇಂದಿಗೂ ಅವಲಂಬಿಸಿದ್ದಾರೆ.

ಆದರೆ, ಜಲಮಂಡಳಿ ಕಾವೇರಿ ನೀರಿನ ಸಂಪರ್ಕ ಪಡೆಯುವುದರಿಂದ ಆರಂಭವಾಗಿ ಅಪಾರ್ಟ್‌ಮೆಂಟ್‌ಗಳಲ್ಲಿ ತ್ಯಾಜ್ಯ ಸಂಸ್ಕರಣೆ ಘಟಕ (ಎಸ್‌ಟಿಪಿ), ಮಳೆ ನೀರು ಕೊಯ್ಲು, ಡಬಲ್‌ ಪೈಪಿಂಗ್‌ ಸಿಸ್ಟಂ ಅಳವಡಿಕೆಯಂತಹ ನಿಯಮಗಳ ಪಾಲನೆ ಇಲ್ಲದಿದ್ದರೆ ದುಪ್ಪಟ್ಟು ದಂಡ ಹಾಕುವ ಮೂಲಕ ಜಲಮಂಡಳಿ ಸಾಕಷ್ಟು ಸಮಸ್ಯೆ ಉಂಟು ಮಾಡುತ್ತಿದೆ. ಜತೆಗೆ ಬೇಸಿಗೆ ಅವಧಿಯಲ್ಲಿ ನೀರಿನ ಸಮಸ್ಯೆಯಾದಾಗ ನಮ್ಮ ಕಡೆ ತಿರುಗಿಯೂ ನೋಡುವುದಿಲ್ಲ. ಇದರಿಂದಾಗಿ ಮೂರುಪಟ್ಟು ಹೆಚ್ಚು ದರ ನೀಡಿ ಟ್ಯಾಂಕರ್‌ ನೀರನ್ನು ಹಾಕಿಸಿಕೊಳ್ಳುತ್ತೇವೆ ಎಂಬುದು ಫೆಡೆರೇಷನ್‌ನ ಆರೋಪ.

Advertisement

ಮೂರೂ ಅಭ್ಯರ್ಥಿಗಳು ಆಶ್ವಾಸನೆ ಕೊಟ್ಟಿದ್ದರು: ಅಪಾರ್ಟ್‌ಮೆಂಟ್‌ಗಳಿಗೆ ಜಲಮಂಡಳಿ ಮಾಡುತ್ತಿರುವ ಅನ್ಯಾಯ ಹಾಗೂ ತಾರತಮ್ಯ ಕುರಿತು 2018ರ ವಿಧಾನಸಭೆ ಚುನಾವಣೆಯಲ್ಲಿ ಆಯಾ ಕ್ಷೇತ್ರದ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಅಭ್ಯರ್ಥಿಗಳ ಬಳಿ ಚರ್ಚಿಸಿದ್ದೆವು. ಅವರೂ, ಅಧಿಕಾರಕ್ಕೆ ಬಂದರೆ ಸರಿಪಡಿಸುವುದಾಗಿ ಭರವಸೆ ನೀಡುವ ಜತೆಗೆ ಪ್ರತಿಜ್ಞೆಯನ್ನು ಮಾಡಿ ಹೋಗಿದ್ದರು.

ಆದರೆ, ಚುನಾವಣೆ ಮುಗಿದು ವರ್ಷಗಳು ಕಳೆಯುತ್ತಾ ಬಂತು, ನಮ್ಮ ಸಮಸ್ಯೆಗಳತ್ತ ಯಾರೊಬ್ಬರೂ ತಿರುಗಿ ನೋಡಿಲ್ಲ. ಹೀಗಾಗಿ, ಈ ಬಾರಿ ಮತಯಾಚನೆಗೆ ಬರುವವರಿಗೆ ಈ ಹಿಂದೆ ಮಾಡಿದ ಪ್ರತಿಜ್ಞೆ, ಕೊಟ್ಟ ಭರವಸೆಗಳನ್ನು ನೆನಪಿಸುವ ಮೂಲಕ ಒತ್ತಡ ಹೇರುತ್ತೇವೆ. ಅವರು ತಮ್ಮ ಪಕ್ಷದ ಮೇಲೆ ಒತ್ತಡ ಹಾಕಿ ಸಮಸ್ಯೆ ಬಗೆಹರಿಸಿಕೊಡಲಿ ಎನ್ನುತ್ತಾರೆ ಫೆಡರೇಷನ್‌ ಉಪಾಧ್ಯಕ್ಷ ಕೆ.ವಿ.ಪ್ರಸನ್ನ.

ಪ್ರಮುಖ ಬೇಡಿಕೆಗಳೇನು?
-ಸುಂಕದ ಸಮಾನತೆ, ಸೇವೆಗೆ ಮಾತ್ರ ಶುಲ್ಕ
-ಅನಗತ್ಯ ವಾಣಿಜ್ಯ ಶುಲ್ಕ ವಿಧಿಸಿರುವುದನ್ನು ನಿಲ್ಲಿಸಬೇಕು
-ಖಾಸಗಿ ಟ್ಯಾಂಕರ್‌ಗಳಿಗೆ ಕಡಿವಾಣ ಹಾಕಬೇಕು
-ಸಾಮಾನ್ಯ ಮನೆಗಳಿಗೆ ವಿಧಿಸುವ ಕಾವೇರಿ ನೀರಿನ ಶುಲ್ಕವನ್ನೇ ಅಪಾರ್ಟ್‌ಮೆಂಟ್‌ಗಳಿಗೂ ವಿಧಿಸಬೇಕು
(ಪ್ರಸ್ತುತ ಸಾಮಾನ್ಯ ಮನೆಗಳಿಗೆ 1000 ಲೀ – 7ರೂ. / ಅಪಾರ್ಟಮೆಂಟ್‌ಗಳಿಗೆ 1000 ಲೀ-22 ರೂ. ಸಾಮಾನ್ಯ ಮನೆಗಳಿಗೆ ಹೊಸ ಸಂಪರ್ಕಕ್ಕೆ 25ರಿಂದ 40 ಸಾವಿರ ರೂ/ ಅಪಾರ್ಟ್‌ಮೆಂಟ್‌ಗಳಿಗೆ 1 ಲಕ್ಷ ರೂ.ನಿಂದ 1.25 ಲಕ್ಷ ರೂ. ಇದೆ)

ಅಪಾರ್ಟ್‌ಮೆಂಟ್‌ಗಳಿಗೆ ಮತಯಾಚನೆಗೆ ಬರುವ ಅಭ್ಯರ್ಥಿಗಳಿಗೆ ಜಲಮಂಡಳಿಯಿಂದ ನಮಗೆ ಆಗುತ್ತಿರುವ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡುತ್ತೇವೆ. ಈ ಕುರಿತು ಕಳೆದ ವಿಧಾನಸಭಾ ಚುನಾವಣೆ ಪ್ರಚಾರ ವೇಳೆ ನೀಡಿದ್ದ ಭರವಸೆಯನ್ನು ಮುಂದಿಡುತ್ತೇವೆ. ಇದರಿಂದ ಅಭ್ಯರ್ಥಿ, ತಮ್ಮ ಪಕ್ಷದ ಮೇಲೆ ಒತ್ತಡ ಹಾಕಿ ನಮ್ಮ ಸಮಸ್ಯೆಗೆ ಪರಿಹಾರ ಒದಗಿಸಬಹುದು.
-ಶ್ರೀಕಾಂತ್‌ ನರಸಿಂಹನ್‌, ಫೆಡರೇಷನ್‌ ಕಾರ್ಯದರ್ಶಿ

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next