Advertisement

ಮನಸ್ಸಿನಿಂದ ಮರೆಯಾಗದ ಟೀಚರ್‌

06:00 AM Sep 07, 2018 | |

ನಾನಾಗ ನಾಲ್ಕೈದು ವರ್ಷದ ಬಾಲಕ. ಅಂಗನವಾಡಿಯಲ್ಲಿ ಇರಬೇಕಾದ ಎಳೆಯ ವಯಸ್ಸು. ಅಂಗನವಾಡಿ ಕಡೆ ಮುಖ ಮಾಡದೇ, ಅಕ್ಕನ ಜೊತೆ ಕೈ ಹಿಡಿದು ಪ್ರಾಥಮಿಕ ಶಾಲೆ ಕಡೆಗೆ ಹೆಜ್ಜೆ ಹಾಕುತ್ತಿದ್ದೆ. ಆದರೆ, ಆ ಶಾಲಾ ಶಿಕ್ಷಕರು ಕೊಠಡಿಯಿಂದ ಹೊರಗಡೆ ಕೂರಿಸುತ್ತಿದ್ದರು. ಕೆಲವೊಮ್ಮೆ ಅಕ್ಕನಿಗೂ ಬೈದಿದ್ದು ಉಂಟು. ಅಕ್ಕನ ಮೇಲಿನ ಪ್ರೀತಿಯೋ ಅಥವಾ ಕಲಿಯಬೇಕೆಂಬ ಹಂಬಲವೋ ಗೊತ್ತಿಲ್ಲ. ಬೆಳಿಗೆಯಿಂದ ಸಾಯಂಕಾಲದವರೆಗೂ ಶಾಲಾ ಮೈದಾನದಲ್ಲಿಯೇ ಒಂದೆಡೆ ಕುಳಿತು ಸಮಯ ಕಳೆಯುತ್ತಿದ್ದೆ. ಇದು ಪ್ರತಿದಿನ ನಡೆಯುತ್ತಿತ್ತು.

Advertisement

ಇದನ್ನೆಲ್ಲ ಗಮನಿಸುತ್ತಿದ್ದ ಆ ಶಾಲಾ ಮುಖ್ಯೋಪಾಧ್ಯಾಯಿನಿ ಒಬ್ಬರು ಆ ಮಗುವನ್ನು ಕರೆದು, “ಮಗು, ನೀನು ಪ್ರತಿದಿನ ಶಾಲೆಗೆ ಬರುತ್ತೀಯಾ?’ ಎಂದು ಕೇಳಿದರು. “ಟೀಚರ್‌, ನಾನು ಪ್ರತಿದಿನ ಬರುತ್ತೇನೆ. ಆದ್ರೆ ಆ ಸರ್‌ ಬರಬೇಡ ಅಂತಾರೆ‌’ ಎಂದು ಹೇಳಿದೆ. “ಇಲ್ಲ ಮಗು, ನಿನಗೆ ಇನ್ನು ಮೇಲೆ ಹಾಗೇ ಹೇಳುವುದಿಲ್ಲ. ನೀನು ನನ್ನ ತರಗತಿಗೆ ಬಂದು ಕುಳಿತುಕೋ, ನಾನು ನಿನಗೆ ಪಾಠ ಹೇಳಿ ಕೊಡುತ್ತೇನೆ. ಏನಾದರೂ ಬೇಕಾದರೆ ನನಗೆ ಕೇಳು. ನಾನು ನಿನಗೆ ಕೊಡುತ್ತೇನೆ’ ಎಂದು ಟೀಚರ್‌ ಹೇಳಿದರು. ಎಲ್ಲಿಲ್ಲದ ಖುಷಿಯಿಂದ ಮಗು ನಗುತ್ತ “ಆಯಿತು ಟೀಚರ್‌’ ಎಂದಿತ್ತು.

ಶಾಲಾಮೈದಾನದಲ್ಲಿ ಇರುವ ಆಲದಮರ, ಬಂಗಾಲಿ ಮರ, ಬೇವಿನ ಮರಗಳೇ ನಮ್ಮೂರ ಶಾಲೆಯ ಎಸಿ ಕ್ಲಾಸ್‌ ರೂಮ್‌ಗಳು. ಅಲ್ಲಿ ಪ್ರತಿದಿನ ನಡೆಯುವ ಪಾಠಗಳು ಯಾವ ಜ್ಞಾನ ದೇಗುಲಕ್ಕಿಂತಲೂ ಕಡಿಮೆ ಇರಲಿಲ್ಲ. ಅದರಲ್ಲಿಯೂ ನನ್ನ ನೆಚ್ಚಿನ ಟೀಚರ್‌ ಪಾಠ ಮಾಡುವ ಶೈಲಿ, ತಲೆಗೊಂದು ಏಟು ಹೀಗೆ- ಎಲ್ಲವೂ ಇಷ್ಟ. ಲೆಕ್ಕಗಳು, ನೀತಿಪಾಠಗಳು, ಸಾಧಕರ ಜೀವನ ಚರಿತ್ರೆಗಳು, ಮಕ್ಕಳ ಕತೆಗಳು, ಆಟಪಾಠಗಳು, ರಾಷ್ಟ್ರಿಯ ಹಬ್ಬಗಳ ಕತೆಗಳು, ಸಂಗೀತ- ಹೀಗೆ ಹತ್ತು ಹಲವಾರು ರೀತಿಯ ಮನರಂಜನೆಯಿಂದ ಕೂಡಿದ ಪಾಠಶಾಲೆ. ನನಗೆ ವೈಯಕ್ತಿಕವಾಗಿ ಮಾಡುವ ಕಾಳಜಿ-ಪ್ರೀತಿ ನನ್ನನ್ನು ದಿನೇ ದಿನೇ ಆ ಟೀಚರ್‌ಗೆ ಹತ್ತಿರವಾಗುವಂತೆ ಮಾಡಿತು. ದಿನಾಲೂ ಹಣೆಗೊಂದು ಮುತ್ತಿಟ್ಟು ಹೋಗುವ ಅವರಿಗೆ ನಾನು ಅಂದ್ರೆ ಪಂಚಪ್ರಾಣವಾಗಿ ಬಿಟ್ಟಿದ್ದೆ. ಅವರು ಅದೇ ಊರಿನಲ್ಲಿ ಮನೆ ಮಾಡಿದ್ದರಿಂದ ಕೆಲವೊಮ್ಮೆ ಮನೆಗೆ ಕರೆದು ಸಿಹಿತಿಂಡಿ ಕೊಟ್ಟು ಮಗುವಿನ ನಗುವಿನಲ್ಲಿ ತಮ್ಮ ಸಂತೋಷ ಕಾಣುವ ಸ್ವತ್ಛ ಮನಸ್ಸಿನ ಸುಗಂಧ. 

ಹೀಗೆ ಕಳೆಯುತ್ತಿದಂತೆಯೇ ತ್ರೈಮಾಸಿಕ ಪರೀಕ್ಷೆಗಳು ಬಂದವು. ಪರೀಕ್ಷೆಯ ಫ‌ಲಿತಾಂಶ ಪ್ರಗತಿ ಪತ್ರಕ್ಕೆ ಪಾಲಕರ ಸಹಿ ಹಾಕಿಸಿಕೊಂಡು ಬರಲು ಪ್ರಗತಿ ಪತ್ರವನ್ನು ಎಲ್ಲ ವಿದ್ಯಾರ್ಥಿಗಳಿಗೆ ನೀಡಿದರು. ಪ್ರಗತಿ ಪತ್ರ ಓದಿದ ಅಪ್ಪನಿಗೆ ಆಶ್ಚರ್ಯವಾಯಿತು. ಮುಗುಳುನಗುತ್ತ, “ಇದು ಯಾರು ಕೊಟ್ಟಿದ್ದು?’ ಎಂದು ಕೇಳಿದರು. “ಟೀಚರ್‌ ಸಹಿ ಮಾಡಿಸಿಕೊಂಡು ಬಾ ಎಂದು ಹೇಳಿದಾರೆ’ ಎಂದು ಹೇಳಿದೆ. “ಆಯಿತು, ನಾನು ನಾಳೆ ಶಾಲೆಗೆ ಬರುತ್ತೀನಿ’ ಎಂದರು ಅಪ್ಪ. 

“ನಮಸ್ಕಾರ ಮೇಡಂ’ ಎಂದು ಹೇಳಿದರು ಅಪ್ಪ. “ನಮಸ್ತೆ, ಬನ್ನಿ ಕುಳಿತುಕೊಳ್ಳಿ ‘ ಎಂದರು  ಮೇಡಂ. 
“ನನ್ನ ಮಗನಿಗೆ ಪ್ರಗತಿ ಪತ್ರ ನೀಡಿ ಸಹಿ ಹಾಕಿಸಿಕೊಂಡು ಬರಲು ಹೇಳಿದಿರಂತೆ, ಆದ್ರೆ ನಾವು ಅವನ ಹೆಸರನ್ನು ಶಾಲೆಗೆ ಹಾಕಲೇ ಇಲ್ಲ’ ಎಂದ‌ರು ಅಪ್ಪ.
“ಹೌದು ರೀ, ಅವನ ಹೆಸರು ನೀವು ಹಚ್ಚದಿದ್ದರೆ ನಾವು ಹಚ್ಚಿಕೊಂಡೆವು’ ಎಂದು ನಗುತ್ತ ಮೇಡಂ ಹೇಳಿದರು. 
“ಅಲ್ಲ ಮೇಡಂ, ಜನ್ಮದಿನಾಂಕ, ಪೂರ್ಣ ಹೆಸರು, ಮತ್ತು ಮನೆತನ ಮಾಹಿತಿ ಇವೆಲ್ಲವು? ಅವನಿಗೆ ವಯಸ್ಸು ಬೇರೆ ಆಗಿಲ್ಲ’ ಎಂದರು ಅಪ್ಪ.
ದಾಖಲಾತಿ ಪುಸ್ತಕ ತೋರಿಸುತ್ತ, “ನಿಮ್ಮ ಮಗನಿಗೆ ನಾನೇ ಒಂದು ಜನ್ಮದಿನಾಂಕ ಮತ್ತು ಬೇಕಾದ ಎಲ್ಲ ಮಾಹಿತಿಯನ್ನು ಸರಿಯಾಗಿ ಬರೆದುಕೊಂಡಿದ್ದೇನೆ. ಇದರಿಂದ ಮಗುವಿನ ಭವಿಷ್ಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಆತನ ಜಾಣ್ಮೆ, ಆಸಕ್ತಿ ನೋಡಿ ಆತನ ಹಿತಕ್ಕಾಗಿ ನಾನೇ ದಾಖಲಾತಿ ಮಾಡಿಕೊಂಡಿದ್ದೇನೆ’ ಎಂದರು ಮೇಡಂ.
“ಆಯಿತು ಮೇಡಂ’ ಎಂದು ಅಪ್ಪ ಹೊರಟುಹೋದರು.
ನಾನು ಎರಡನೆಯ ತರಗತಿಗೆ ಸೇರಿದ್ದೆ. ಒಂದು ದಿನ ಎಂದಿನಂತೆ ಶಾಲೆ ಪ್ರಾರಂಭಗೊಂಡಿತ್ತು. ಟೀಚರ್‌ ಮೊಗದಲ್ಲಿ ಕಳೆ ಇರಲಿಲ್ಲ. ನನ್ನನ್ನು ಕರೆದು ಚಾಕಲೇಟು ಕೊಟ್ಟು, ಹಣ್ಣೆಗೊಂದು ಮುತ್ತನಿತ್ತು ಹೋದವರು ಮತ್ತೆ ಕಾಣಲೇ ಇಲ್ಲ. ಒಂದೆರಡು ದಿನ ಕಳೆದ ಮೇಲೆ ಗೊತ್ತಾಯಿತು ಅವರಿಗೆ ನಿವೃತ್ತಿಯಾಗಿದೆ ಎಂದು. ಈಗಲೂ, ಎಲ್ಲೇ ಇರಲಿ ಚೆನ್ನಾಗಿರಲಿ ಅವರ ಆರೋಗ್ಯ ಆಯುಷ್ಯ ವೃದ್ಧಿಯಾಗಲಿ ಎಂದು ಪಾರ್ಥಿಸುತ್ತಿರುತ್ತೇನೆ.

Advertisement

ಬಸವರಾಜ ಆರ್‌. ಪೂಜಾರ
ಡಿಸೈನ್‌ ಇಂಜಿನಿಯರ್‌ ಎಡುಕ್ಯಾಡ್‌ 

 

Advertisement

Udayavani is now on Telegram. Click here to join our channel and stay updated with the latest news.

Next