Advertisement

ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವ…

06:00 AM Jun 26, 2018 | |

ಅವನು ನನ್ನನ್ನು ಹುಡುಕಿಕೊಂಡು ಬಂದ. ನೀನಿಲ್ಲದೆ ನನಗೆ ತುಂಬಾ ಬೇಜಾರಾಗಿತ್ತು ಅಂದ. ಆಗ ನಾನು ಅವನಿಗೆ, ಒಂದು ಗುಡ್‌ನ್ಯೂಸ್‌ ಇದೆ ಕಣೋ, ನನ್ನ ನಿಶ್ಚಿತಾರ್ಥ ಆಯಿತು ಎಂದೆ. ಆ ಮಾತು ಹೇಳಿದ್ದೇ ತಡ, ಆ ಹುಡುಗ ಏನೂ ಮಾತಾಡದೆ ಹೋಗಿಯೇಬಿಟ್ಟ.

Advertisement

ಅಂತೂ ಇಂತೂ ಏನೇನೋ ತರಲೆ ಗಿರಲೆ ಮಾಡಿ ಪದವಿ ಮುಗಿಸಿ ಬೇರೊಂದು ಕ್ಯಾಂಪಸ್‌ ಗೆ ಕಾಲಿಟ್ವಿ. ಮೊದಲ ಬಾರಿ ಕ್ಯಾಂಪಸ್‌ಗೆ ಹೋದಾಗ ಏನು ಖುಷಿಯಾಗಿತ್ತು ಗೊತ್ತಾ? ದಾರಿಯುದ್ದಕ್ಕೂ ಹುಡುಗ-ಹುಡುಗಿಯರು ಗುಂಪು ಕಟ್ಟಿಕೊಂಡು ತರಲೆ, ತಮಾಷೆ ಮಾಡುತ್ತಿದ್ದರು. ಕ್ಯಾಂಪಸ್‌ ತುಂಬಾ ಕಲರವವಿತ್ತು. ಹಾಂ, ಆವತ್ತು ನಾನು ಕಾಲೇಜಿಗೆ ಅಪ್ಲಿಕೇಶನ್‌ ಹಾಕಲು ಮಾತ್ರ ಹೋಗಿದ್ದೆ. ಅಲ್ಲಿನ ವಾತಾವರಣ ಎಷ್ಟು ಇಷ್ಟವಾಯಿತೆಂದರೆ, ಯಾವತ್ತು ಕಾಲೇಜು ಶುರುವಾಗುತ್ತದೋ ಅಂತ ಬಕಪಕ್ಷಿಯಂತೆ ಕಾಯತೊಡಗಿದೆ. 

ನಾನು ಹಳ್ಳಿಯಿಂದ ಬಂದ ಹುಡುಗಿ. ಇಷ್ಟಪಟ್ಟು ದೊಡ್ಡ ಕಾಲೇಜಿಗೆ ಸೇರಿದೆ. ಆಗಲೇ ನನಗೆ ಅರಿವಾಗಿದ್ದು, ಅಲ್ಲಿನವರಿಗಿಂತ ನಾನೆಷ್ಟು ಭಿನ್ನ ಅಂತ. ನನ್ನನ್ನು ನೋಡಿ ಎಲ್ಲರೂ ನಗುತ್ತಿದ್ದರು, ತುಂಬಾ ರೇಗಿಸುತ್ತಿದ್ದರು. ಇನ್ನೂಂದು ವಿಷಯ ಏನೆಂದರೆ, ನಮ್ಮ ಕ್ಲಾಸ್‌ನಲ್ಲಿ ನಾಲ್ವರು ಹುಡುಗಿಯರು, 25 ಹುಡುಗರಿದ್ದರು. ಮೊದಮೊದಲು ಅಷ್ಟು ಜನ ಹುಡುಗರನ್ನು ನೋಡಿ ನನಗೆ ತುಂಬಾನೇ ಭಯ ಆಗುತ್ತಿತ್ತು. ಕ್ಲಾಸ್‌ರೂಮ್‌ ಒಳಗೆ ಹೋಗದೆ ಹೊರಗೇ ನಿಲ್ಲುತ್ತಿದ್ದೆ. ದಿನ ಕಳೆದಂತೆ ಎಲ್ಲರೂ ಆತ್ಮೀಯರಾದರು. 

ಕ್ಯಾಂಪಸ್‌ ಅಂದ ಮೇಲೆ ಅಲ್ಲಿ ಲವ್‌ಸ್ಟೋರಿಗಳು ಇರಲೇಬೇಕಲ್ಲವಾ? ಒಬ್ಬರನ್ನೊಬ್ಬರು ರೇಗಿಸೋದು, ಇಷ್ಟವಾದ ಹುಡುಗಿಯ ಹಿಂದೆ ಸುತ್ತೋದು, ಪ್ರಪೋಸ್‌ ಮಾಡೋದು..ಇವೆಲ್ಲಾ ಸಾಮಾನ್ಯ. ನಾನಂತೂ ಯಾವಾಗಲೂ ನಗುತ್ತಲೇ ಇರುತ್ತಿದ್ದೆ. ಯಾರೇ ಮಾತಾಡಿಸಿದರೂ, ನಗು ನಗುತ್ತಾ ಉತ್ತರಿಸುತ್ತಿದ್ದೆ. ಎಷ್ಟೋ ಹುಡುಗರು, ನಾನು ನಗುತ್ತಾ ಮಾತಾಡಿದ್ದಕ್ಕೇ ಅವರನ್ನು ಇಷ್ಟಪಡುತ್ತಿದ್ದೇನೆ ಎಂದು ತಪ್ಪಾಗಿ ಭಾವಿಸಿದ್ದರು.  

ನಮ್ಮ ಕ್ಲಾಸ್‌ನಲ್ಲಿ ಹುಡುಗಿಯರು ಕಡಿಮೆ ಅಂದೆ ಅಲ್ವಾ, ಪಾಪ ನಮ್ಮ ಹುಡುಗರು ಕ್ಲಾಸ್‌ ಬಿಡೋದೇ ತಡ, ಬೇರೆ ಕ್ಲಾಸ್‌ರೂಮ್‌ ಹತ್ತಿರ ಹುಡುಗಿಯರನ್ನು ನೋಡಲು ಸಾಲಾಗಿ ಹೋಗಿ ನಿಲ್ಲುತ್ತಿದ್ದರು. ನಾವು ನಾಲ್ವರೂ ಅವರೆಲ್ಲರ ಜೊತೆ ತರಲೆ ಮಾಡಿಕೊಂಡು ಇದ್ದಿದ್ದರಿಂದ,  ಅವರು ನಮ್ಮನ್ನು ಹುಡುಗಿಯರು ಅಂತ ಪರಿಗಣಿಸುತ್ತಲೇ ಇರಲಿಲ್ಲ. ನಾವು ಹುಡುಗಿಯರೇನು ಕಡಿಮೆಯೇ? ಯಾರಾದರೂ ಪ್ರಪೊಸ್‌ ಮಾಡಿದರೆ, ನಮ್ಮ ನಿಶ್ಚಿತಾರ್ಥ ಆಗಿ ಹೋಗಿದೆ ಎಂದು ಸುಳ್ಳು ಹೇಳಿ ಬಚಾವ್‌ ಆಗುತ್ತಿದ್ದೆವು. ಪಾಪ, ನಮ್ಮ  ಹುಡುಗರ ಗೋಳು ನೋಡೋಕೆ ಆಗುತ್ತಿರಲಿಲ್ಲ. ತಮ್ಮ ಕ್ಲಾಸ್‌ನಲ್ಲಿ ಹುಡುಗಿಯರು ಇಲ್ಲ ಎಂದು, ಬೇರೆ ಕ್ಲಾಸ್‌ ರೂಮ್‌ ಹತ್ತಿರ ಹೋದರೂ ಹುಡುಗಿಯರು ಅಷ್ಟು ಸುಲಭದಲ್ಲಿ ಒಲಿಯುತ್ತಿರಲಿಲ್ಲ. 

Advertisement

ಕ್ಯಾಂಪಸ್‌ನಲ್ಲಿ ಆಗಾಗ ಫ‌ಂಕ್ಷನ್‌ಗಳು ನಡೆಯುತ್ತಿದ್ದವು. ಆಗ ನಾವೆಲ್ಲಾ ಚೆನ್ನಾಗಿ ಸಿಂಗರಿಸಿಕೊಂಡು, ಸಂಭ್ರಮದಿಂದ ಓಡಾಡುತ್ತಿದ್ದೆವು. ಹಾಗೊಮ್ಮೆ ಸಮಾರಂಭಕ್ಕೆ ರಂಗೋಲಿ ಇಡುವಾಗ, ಬೇರೆ ಸೆಕ್ಷನ್‌ನ ಹುಡುಗನೊಬ್ಬ ಪರಿಚಯವಾದ. ಆತ ತುಂಬಾ ಚೆನ್ನಾಗಿ ಹಾಡುತ್ತಿದ್ದ. ಅವತ್ತಿನಿಂದ ಇಬ್ಬರೂ ಸ್ನೇಹಿತರಾದೆವು. ನಂತರ ನಮ್ಮ ಎಕ್ಸಾಂ ಮುಗಿಯಿತು. ನಾನು ಊರಿಗೆ ಹೋಗಿ ಬಂದೆ. ವಾಪಸಾದ ಮೇಲೆ ಅವನು ನನ್ನನ್ನು ಹುಡುಕಿಕೊಂಡು ಬಂದ. ನೀನಿಲ್ಲದೆ ನನಗೆ ತುಂಬಾ ಬೇಜಾರಾಗಿತ್ತು ಅಂದ. ಆಗ ನಾನು ಅವನಿಗೆ, ಒಂದು ಗುಡ್‌ನ‌ೂÂಸ್‌ ಇದೆ ಕಣೋ, ನನ್ನ ನಿಶ್ಚಿತಾರ್ಥ  ಆಯಿತು ಎಂದೆ. ಆ ಮಾತು ಹೇಳಿದ್ದೇ ತಡ, ಆ ಹುಡುಗ ಏನೂ ಮಾತಾಡದೆ ಹೋಗಿಯೇಬಿಟ್ಟ. ನಾನು ಮತ್ತೆ ತಲೆ ಕೆಡಿಸಿಕೊಳ್ಳಲಿಲ್ಲ. ಅವತ್ತಿನಿಂದ ಅವನು ನನ್ನ ಕಣ್ಣು ತಪ್ಪಿಸಿ ಓಡಾಡತೊಡಗಿದ. 

ಆದರೆ, ಕಾಲೇಜಿನ ಕೊನೆಯ ದಿನ ಅವನಾಗಿಯೇ ನನ್ನನ್ನು ಹುಡುಕಿಕೊಂಡು ಬಂದ. ನನ್ನೆದುರು ನಿಂತು- ನಾನು ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದೆ. ನಿನಗೆ ಅದು ಅರ್ಥವಾಗಲಿಲ್ಲ. ನಿಶ್ಚಿತಾರ್ಥ ಆಯ್ತು ಅಂದೆಯಲ್ಲ, ಮದುವೆಯಾಗಿ ಖುಷಿಯಾಗಿರು. ರಂಗೋಲಿಯಿಂದ ಪರಿಚಯವಾದ ನಮ್ಮ ಗೆಳೆತನ ಇಲ್ಲಿಗೇ ಕೊನೆಯಾಗಲಿ. ನಿನ್ನ ಜೀವನಕ್ಕೆ ಕಪ್ಪು ಚುಕ್ಕಿ ಆಗೋಕೆ ನನಗಿಷ್ಟವಿಲ್ಲ. ಬಾಯ್‌ ಎಂದು ಹೇಳಿ ಹೊರಟೇಬಿಟ್ಟ. 

ಈಗ ಕಾಲೇಜು ಮುಗಿದಿದೆ. ಹಳೆಯದೆಲ್ಲಾ ಹಳೆಯ ಕಥೆ. ಈಗ ನಡೀತಿದೆಯಲ್ಲ; ಅದೇ ಸತ್ಯ, ಅದಷ್ಟೇ ವಾಸ್ತವ ಎಂದು ನನಗೆ ನಾನೇ ಹೇಳಿಕೊಳ್ಳುತ್ತೇನೆ. ಆದರೂ, ಮನೆಯಲ್ಲಿ ಒಬ್ಬಳೇ ಕೂತಿರುವಾಗ ಹಳೆಯದೆಲ್ಲಾ ಬಿಟ್ಟೂ ಬಿಡದೆ ನೆನಪಾಗುತ್ತಿರುತ್ತದೆ. ನಾನು ಅವನಿಗೆ ನೋವು ಮಾಡಿಬಿಟ್ಟೆ ಅನಿಸುತ್ತದೆ. ಆದರೆ, ನಾನ್ಯಾವತ್ತೂ ಅವನನ್ನು ಪ್ರೀತಿಸಿಯೇ ಇರಲಿಲ್ಲವಲ್ಲ ಅಂತ ಸಮಾಧಾನ ಮಾಡಿಕೊಳ್ಳುತ್ತೇನೆ. ಅವನೀಗ ಎಲ್ಲಿದ್ದಾನೋ ಗೊತ್ತಿಲ್ಲ. 

ನಿರ್ಮಲ ಟಿ. ಲಕ್ಕಿಹಳ್ಳಿ, ಹೊಸದುರ್ಗ

Advertisement

Udayavani is now on Telegram. Click here to join our channel and stay updated with the latest news.

Next