Advertisement

ಬಳ್ಳಾರಿಯಲ್ಲಿ ಸಿದ್ದರಾಮಯ್ಯರಿಗೆ ಸವಾಲ್ ಹಾಕಿಲ್ಲ: ಅಚ್ಚರಿಯ ಹೇಳಿಕೆ ನೀಡಿದ ಶ್ರೀರಾಮುಲು

05:44 PM Nov 28, 2022 | Team Udayavani |

ಕೊಪ್ಪಳ: ಬಳ್ಳಾರಿಯಲ್ಲಿ ನಡೆದ ಎಸ್‌ ಸಿ, ಎಸ್‌ ಟಿ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರಿಗೆ ಕ್ಷೇತ್ರಕ್ಕೆ ಬನ್ನಿ ಎಂದು ಸವಾಲ್ ಹಾಕಿಲ್ಲ. ನಾನು ಕಾಂಗ್ರೆಸ್ ಪಕ್ಷಕ್ಕೆ ಸವಾಲ್ ಹಾಕಿದ್ದೇನೆ. ಅಲ್ಲದೇ, ಸಿದ್ದರಾಮಯ್ಯರನ್ನು ನೋಡಿಕೊಳ್ಳುವೆ ಎನ್ನುವ ಪದವನ್ನು ಬಳಸಿಲ್ಲ. ಒಂದು ವೇಳೆ ಆ ಪದ ಬಳಸಿದ್ದರೆ, ಆ ಪದ ವಾಪಾಸ್ ಪಡೆಯುವೆ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರು ಅಚ್ಚರಿಯ ಹೇಳಿಕೆ ನೀಡಿದರು.

Advertisement

ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಬಳ್ಳಾರಿಯ ಸಮಾವೇಶದಲ್ಲಿ ನಾನು ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ನಾನು ಸವಾಲು ಹಾಕಿದ್ದೇನೆ. ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ನಾವು ಮೀಸಲಾತಿ ಕೊಟ್ಟು ಬಳ್ಳಾರಿಯಲ್ಲಿ ಬಂದು ಕುಳಿತಿದ್ದೇವೆ. ಕಾಂಗ್ರೆಸ್ ನಮ್ಮನ್ನ ಟೀಕೆ ಮಾಡಿತು. ನಮ್ಮ ತಾಕತ್ತಿನ ಬಗ್ಗೆ ಮಾತನಾಡಿದ್ದರು. ಹಾಗಾಗಿ ನಾನು ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕಿದ್ದೇನೆಯೇ ವಿನಃ ಸಿದ್ದರಾಮಯ್ಯರಿಗೆ ಸವಾಲು ಹಾಕಿಲ್ಲ. ಸಿದ್ದರಾಮಯ್ಯರನ್ನು ಬನ್ನಿ ಎಂದು ನಾನು ಕರೆದಿಲ್ಲ. ಮಾಧ್ಯಮದಲ್ಲಿ ತಪ್ಪಾಗಿ ಅದನ್ನು ತಪ್ಪಾಗಿ ಅರ್ಥೈಸಲಾಗಿದೆ. ಸಮಾವೇಶದಲ್ಲಿ ನಾನು ಸಿದ್ದರಾಮಯ್ಯರನ್ನು ನೋಡಿಕೊಳ್ಳುವೆ ಎನ್ನುವ ಪದವನ್ನ ಬಳಸಿಲ್ಲ. ಆಕಸ್ಮಿಕವಾಗಿ ನಾನು ಆ ಪದವನ್ನು ಬಳಸಿದ್ದರೆ ಆ ಪದವನ್ನು ವಾಪಾಸ್ ಪಡೆಯುವೆ. ನಾವು ಮೀಸಲಾತಿ ಕೊಟ್ಟಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ ತಾಕತ್ತು ಇದ್ದರೆ ಬರ್ರಿ ಎಂದು ಹೇಳಿದ್ದೇನೆ. ಅವರು ಬಳ್ಳಾರಿಯಲ್ಲೇ ನನಗೆ ಪೆದ್ದ ಅಂದರು. ಅವರ ಹೇಳಿಕೆಯಿಂದ ನಮ್ಮ ಸಮುದಾಯ ಜಾಗೃತವಾಗುತ್ತಿದೆ ಎಂದರು.

ರಾಜ್ಯದಲ್ಲಿನ ಕಾಂಗ್ರೆಸ್ ಜೋಡೆತ್ತುಗಳು ಎರಡು ಚಿರತೆಗಳಂತಾಗಿವೆ. ಸಿಎಂ ಖುರ್ಚಿಗಾಗಿ ಚಿಂತೆ ಅವರಲ್ಲಿದೆ. ಇಬ್ಬರ ಲೆಕ್ಕಾಚಾರಗಳು ಸಿಎಂ ಸ್ಥಾನ ತೆಗೆದುಕೊಳ್ಳಬೇಕು ಎನ್ನುವ ಪೈಪೋಟಿ ನಡೆಸುತ್ತಿದ್ದಾರೆ. ಸಿಎಂ ಖುರ್ಚಿ ಖಾಲಿಯಿಲ್ಲ. ಮುಂದಿನ 2023ರ ಚುನಾವಣೆಯಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಿಂದ ಮತ್ತೆ ರಾಜ್ಯದಲ್ಲಿ 150 ಸ್ಥಾನ ಗೆಲ್ಲಲಿದ್ದು, ಬಿಜೆಪಿ ಅಧಿಕಾರಕ್ಕೆ ಬರಲಿದೆ. ಬಸವರಾಜ ಬೊಮ್ಮಾಯಿ ಅವರೇ ಸಿಎಂ ಆಗಲಿದ್ದಾರೆ ಎಂದರು.

ಬಿಜೆಪಿ ಕಾಂಗ್ರೆಸ್‌ನಂತೆ ಸಮುದಾಯದ ರಾಜಕಾರಣ ಮಾಡಲ್ಲ. ನಾವು ಎಲ್ಲ ಸಮುದಾಯಕ್ಕೂ ಸಮಾಜಿಕ ನ್ಯಾಯ ಕೊಟ್ಟಿದ್ದೇವೆ. ಬಿಜೆಪಿ ತತ್ವ ಸಿದ್ದಾಂತದ ಮೇಲೆ ಅಧಿಕಾರಕ್ಕೆ ಬರಲಿದೆ. ದೇಶದಲ್ಲಿನ ಜನತೆ ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರ ಮಾಡಿದ್ದಾರೆ. ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಮೋದಿ ಅವರ ಹವಾ ನಡೆಯುತ್ತಿದೆ. ಕಾಂಗ್ರೆಸ್ ಈಗಾಗಲೇ ಸಿಎಂ ಖುರ್ಚಿ ಕನಸು ಕಾಣುತ್ತಿದ್ದಾರೆ. ಖುರ್ಚಿಗೆ ಟವಲ್ ಹಾಕುವ ಕೆಲಸ ಮಾಡುತ್ತಿದ್ದಾರೆ. ಎಂದಿಗೂ ಕಾಂಗ್ರೆಸ್ ಸರ್ಕಾರ ಬರಲ್ಲ. ಜೋಡೆತ್ತುಗಳು ಚಿರತೆಗಳಾಗಿ ಖುರ್ಚಿ ಮೇಲೆ ಕಣ್ಣಿಟ್ಟು ಕುಳಿತಿವೆ. ನಾವು ಅಭಿವೃದ್ಧಿ ಕೆಲಸದ ಮೇಲೆ ಚುನಾವಣೆ ನಡೆಸುತ್ತಿವೆ. ಕಾಂಗ್ರೆಸ್ ಬೇರೆ ಲೆಕ್ಕಾಚಾರ ಹೇಳಿಕೊಂಡು ಚುನಾವಣೆ ಮಾಡಲು ಮುಂದಾಗುತ್ತಿವೆ. 2018ರಲ್ಲಿ ಕಾಂಗ್ರೆಸ್ ಹಿಂದಿನ ಭಾಗಿಲಿಂದ ಅಧಿಕಾರಕ್ಕೆ ಬಂದರು ಎಂದರು.

ಬಿ.ಎಲ್.ಸಂತೋಷ ಅವರ ಟಿಕೆಟ್ ಹೇಳಿಕೆಯ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ ಟಿಕೆಟ್‌ಗಾಗಿ ಸಮೀಕ್ಷೆ ನಡೆಸುತ್ತದೆ. ಅನ್ಯ ರಾಜ್ಯಗಳಲ್ಲಿ ಹೊಸಬರಿಗೆ ಅವಕಾಶ ಕೊಟ್ಟಿದ್ದಾರೆ. ರಾಜ್ಯದಲ್ಲಿಯೂ ಹೊಸಬರಿಗೆ ಟಿಕೆಟ್ ಕೊಡುವ ಪ್ರಯೋಗ ಆಗುತ್ತದೆ. ಅವರ ಹೇಳಿಕೆಗೆ ನನ್ನ ಬೆಂಬಲ ಸೂಚಿಸುವೆ. ಪಕ್ಷದಲ್ಲಿ ಸರ್ವೆ ನಡೆಯುತ್ತಿವೆ. ಹೊಸಬರಿಗೆ ಬಂದರೆ ಹೊಸಬರಿಗೆ ಅವಕಾಶ ಕೊಡುತ್ತದೆ. ಯಾರು ಸ್ಥಳೀಯರಿದ್ದಾರೋ ಸಮೀಕ್ಷೆಯಲ್ಲಿ ಗೆಲ್ಲುವ ಅವಕಾಶವಿದ್ದಂತಲ್ಲಿ ಹಳಬರಿಗೂ ಅವಕಾಶ ಕಲ್ಪಿಸಲು ಪಕ್ಷ ನಿರ್ಧಾರ ಮಾಡಲಿದೆ ಎಂದರು.

Advertisement

ಸತೀಶ ಜಾರಕಿಹೊಳೆ ಅವರು ಹಿಂದೂ ಪದದ ಬಗ್ಗೆ ಈಗಾಗಲೇ ತಪ್ಪಾಗಿದೆ ಎಂದಿದ್ದಾರೆ. ಆ ಬಗ್ಗೆ ಹೆಚ್ಚು ಮಾತನಾಡಲ್ಲ ಎಂದರಲ್ಲದೇ, ಎಸ್‌ಸಿ, ಎಸ್‌ಟಿಗೆ ಬಿಜೆಪಿ ಮೀಸಲಾತಿ ಕೊಟ್ಟಿದೆ. ಬಿಜೆಪಿ ಸಮಗ್ರವಾಗಿ ನ್ಯಾಯವನ್ನು ಕೊಡುವ ಕೆಲಸ ಮಾಡಿದೆ. ಎಸ್‌ಸಿ,ಎಸ್‌ಟಿ ಮೀಸಲಾತಿ ನನ್ನ ವೈಯಕ್ತಿಕ ಗೆಲುವಲ್ಲ. ಇದು ಸಮುದಾಯದ ಗೆಲುವು. ಸಮುದಾಯಕ್ಕೆ ನಾನೊಬ್ಬನೇ ಹೋರಾಡಿಲ್ಲ. ಸ್ವಾಮೀಜಿಗಳು ಸೇರಿ ಸಮಾಜ ಹೋರಾಟ ಮಾಡಿದೆ. ನಾನು ಮೀಸಲಾತಿಯನ್ನು ಕೊಡಿಸುವೆ ಎಂದು ಹೇಳಿದ್ದೆ. ಅದರಂತೆ ನಾವು ಮಾಡಿದ್ದೇವೆ. ಕಾಂಗ್ರೆಸ್ ಎಸ್‌ಸಿ ಸಮಾವೇಶ ಮಾಡುವ ಚಿಂತನೆ ಇರಬಹುದು. ನಾವೂ ಸಹಿತ ಚಾಮರಾಜನಗರ, ಮೈಸೂರು, ಚಿತ್ರದುರ್ಗದಲ್ಲಿ ಎಸ್‌ಸಿ ಸಮಾವೇಶ ಮಾಡಲಾಗುವುದು ಎಂದರು.

ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ಸ್ಪರ್ಧೆ ಮಾಡುವ ವಿಚಾರ ನನಗೆ ಗೊತ್ತಿಲ್ಲ. ಕಳೆದ ಬಾರಿ ಅವರ ಮನಸ್ಸಿಗೆ ನೋವಾಗಿರುವ ವಿಚಾರ ಗೊತ್ತಾಗಿ ನಾನೇ ಅವರ ಬಳಿ ತೆರಳಿ ಮಾತನಾಡಿದ್ದೇನೆ. ಪಕ್ಷದಲ್ಲಿನ ಹಿರಿಯರಿಗೂ ಆ ವಿಷಯ ಮುಟ್ಟಿಸಿದ್ದೇನೆ. ಹಿರಿಯರು ಜನಾರ್ದನ ರೆಡ್ಡಿ ಅವರನ್ನು ಕರೆದು ಮಾತನಾಡಿದ್ದಾರೆ ಎಂದರಲ್ಲದೇ, ಗಂಗಾವತಿಯಲ್ಲಿ ಸ್ಪರ್ಧೆಯ ವಿಚಾರ ಗೊತ್ತಿಲ್ಲ. ಜನಾರ್ದನ ರೆಡ್ಡಿ ಅವರು ಹಿರಿಯ ನಾಯಕರು. ಅವರು ಬೇರೆ ಕಾರಣದಿಂದ ಅವರು ದೂರ ಇದ್ದಾರೆ. ಅವರು ಪಕ್ಷದಲ್ಲಿದ್ದರೆ ಚೆನ್ನಾಗಿರುತ್ತದೆ ಎಂದು ಪಕ್ಷದ ಹಿರಿಯರಿಗೆ ಮಾತನಾಡಿದ್ದೇನೆ. ಅವರು ಸಕ್ರಿಯ ರಾಜಕಾರಣದಲ್ಲಿ ತೊಡಗುವ ವಿಚಾರ ಗೊತ್ತಿಲ್ಲ. ಅವರಿಗೆ ಆಗಿರುವ ನೋವು ಪಕ್ಷದ ಹಿರಿಯರಿಗೆ ತಿಳಿಸಿದ್ದೇನೆ ಎಂದರು

Advertisement

Udayavani is now on Telegram. Click here to join our channel and stay updated with the latest news.

Next