ಚೆನ್ನೈ: ತಮಿಳುನಾಡಿನಲ್ಲಿ ಹೊಸ ರಾಜಕೀಯ ಶಕ್ತಿಯ ಉದಯಕ್ಕೆ ಮುನ್ನುಡಿ ಹಾಡಿರುವ ಜನಪ್ರಿಯ ನಟ ರಜನಿಕಾಂತ್ ಅವರು ಇದೀಗ ತಮ್ಮ ಹೊಸ ಪಕ್ಷದ ಹೊಸ ಆಲೋಚನೆಗಳಿಗಾಗಿ ರಾಜಕೀಯ ವಲಯದಲ್ಲಿ ಚರ್ಚಾ ವಿಷಯವಾಗಿದ್ದಾರೆ.
ರಾಜ್ಯದಲ್ಲಿ ಪರ್ಯಾಯ ರಾಜಕೀಯ ಶಕ್ತಿಯೊಂದನ್ನು ಹುಟ್ಟುಹಾಕುವ ಕುರಿತಾದಂತೆ ಇಂದು ತನ್ನ ನಿರ್ಧಾರವನ್ನು ಪ್ರಕಟಿಸಿರುವ ತಲೈವಾ ಅವರು ತನ್ನ ಪಕ್ಷವನ್ನು ಯುವ ಮುಖಗಳೇ ನಡೆಸಬೇಕು ಎಂಬ ಆಶಯವನ್ನು 69 ವರ್ಷ ಪ್ರಾಯದ ಈ ಹಿರಿಯ ನಟ ವ್ಯಕ್ತಪಡಿಸಿದ್ದಾರೆ.
ಮಾತ್ರವಲ್ಲದೇ ಮುಂದೊಂದು ದಿನ ರಾಜ್ಯದಲ್ಲಿ ತಮಗೆ ಮುಖ್ಯಮಂತ್ರಿ ಹುದ್ದೆಗೇರುವ ಅವಕಾಶ ಒದಗಿಬಂದರೂ ಅದನ್ನು ತಾವು ಸ್ವೀಕರಿಸುವುದಿಲ್ಲ ಎಂಬ ಮಾತನ್ನು ರಜನಿಕಾಂತ್ ಅವರು ಇದೇ ಸಂದರ್ಭದಲ್ಲಿ ದೃಢಪಡಿಸಿದ್ದಾರೆ. ಹಾಗೂ ಅಂತಹ ಸಂದರ್ಭದಲ್ಲಿ ಪಕ್ಷದಲ್ಲಿನ ಯುವ ಮುಖಗಳಿಗೆ ತಾನು ಆದ್ಯತೆ ನೀಡುತ್ತೇನೆ ಎಂಬ ಮಾತನ್ನು ಈ ಹಿರಿಯ ನಟ ಹೇಳಿಕೊಂಡಿದ್ದಾರೆ.
ನಿಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ರಜನಿ, ಈ ಕುರಿತಾಗಿ ಯಾರ ಹೆಸರನ್ನೂ ಇದುವರೆಗೂ ಅಂತಿಮಗೊಳಿಸಿಲ್ಲ. ಮತ್ತು ಮುಂದೊಂದು ದಿನ ಅಂತಹ ಸಂದರ್ಭ ಒದಗಿ ಬಂದಿದ್ದೇ ಆದಲ್ಲಿ ಓರ್ವ ಜವಾಬ್ದಾರಿಯುತ, ಸ್ವ-ಗೌರವವನ್ನು ಹೊಂದಿರುವ ವ್ಯಕ್ತಿಯನ್ನು ಪಕ್ಷ ಆರಿಸಲಿದೆ ಎಂಬ ಮಾತನ್ನು ಹೇಳಿದ್ದಾರೆ.
ಸಿನೇಮಾ ರಂಗದಲ್ಲಿ ಮಿಂಚಿ ಬಳಿಕ ವಿವಿಧ ರಾಜಕೀಯ ಪಕ್ಷಗಳ ಮೂಲಕ ತಮಿಳುನಾಡಿನ ಮುಖ್ಯಮಂತ್ರಿಗಳಾದ ಎಂಜಿಆರ್, ಜಯಲಲಿತಾ ಹಾಗೂ ಕರುಣಾನಿಧಿ ಅವರ ಉದಾಹರಣೆಗಳು ಇರುವಂತೆಯೇ ಮುಖ್ಯಮಂತ್ರಿ ಪದವನ್ನು ನಾನು ಬಯಸುವುದಿಲ್ಲ ಎಂಬ ತಲೈವಾ ರಜನಿಕಾಂತ್ ಹೇಳಿಕೆ ಪ್ರಸ್ತುತ ಪರಿಸ್ಥಿತಿಯಲ್ಲಿ ವಿಶೇಷವಾಗಿ ಕಾಣಿಸುತ್ತದೆ.