“ನ್ಯೂರಾನ್’ ಬಗ್ಗೆ ನೀವು ಕೇಳಿರಬಹುದು. ಮನುಷ್ಯನ ದೇಹದ ವಿವಿಧ ಭಾಗಗಳಿಂದ ಮೆದುಳಿಗೆ ಸಂವಹನ ಮತ್ತು ಸಂಪರ್ಕ ಸಾಧಿಸುವಲ್ಲಿ ಈ “ನ್ಯೂರಾನ್’ ಮಹತ್ವದ ಪಾತ್ರ ವಹಿಸುತ್ತದೆ. ಒಂದೊಮ್ಮೆ “ನ್ಯೂರಾನ್’ ಕೆಲಸದಲ್ಲಿ ಏನಾದರೂ ವ್ಯತ್ಯಾಸವಾದರೆ, ಮನುಷ್ಯನ ದೇಹದ ಭಾಗಗಳು ಮತ್ತು ಮೆದುಳಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅದೆಲ್ಲ ಸರಿ ಈಗ ಯಾಕೆ “ನ್ಯೂರಾನ್’ ಬಗ್ಗೆ ಮಾತು ಅಂತೀರಾ? ಅದಕ್ಕೊಂದು ಕಾರಣವಿದೆ. ಈಗ ಇದೇ “ನ್ಯೂರಾನ್’ ಎನ್ನುವ ಹೆಸರಿನಲ್ಲಿ ಕನ್ನಡದಲ್ಲಿ ಹೊಸಬರ ಚಿತ್ರವೊಂದು ತೆರೆಗೆ ಬರುತ್ತಿದೆ. ಸದ್ಯ ಚಿತ್ರೀಕರಣ ಮತ್ತು ತನ್ನ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ಆಡಿಯೋ ಮತ್ತು ಟ್ರೇಲರ್ ಬಿಡುಗಡೆಗೊಳಿಸಿ ಚಿತ್ರದ ಪ್ರಮೋಶನ್ ಕೆಲಸಗಳಿಗೆ ಚಾಲನೆ ನೀಡಿದೆ.
ಅಂದಹಾಗೆ, “ನ್ಯೂರಾನ್’ ಚಿತ್ರಕ್ಕೆ ನವ ನಿರ್ದೇಶಕ ವಿಕಾಸ್ ಪುಷ್ಪಗಿರಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಕೆಲ ವರ್ಷಗಳ ಕಾಲ ಟೆಕ್ಕಿಯಾಗಿ ಕೆಲಸ ಮಾಡಿದ್ದ ವಿಕಾಸ್ ಪುಷ್ಪಗಿರಿ ಬಳಿಕ, ಚಿತ್ರರಂಗದ ಮೇಲಿನ ಆಸಕ್ತಿಯಿಂದ ಐ.ಟಿ ಕ್ಷೇತ್ರಕ್ಕೆ ಗುಡ್ ಬೈ ಹೇಳಿ ಸ್ಯಾಂಡಲ್‌ವುಡ್ ಕಡೆಗೆ ಮುಖ ಮಾಡಿದವರು. ಗಾಂಧಿನಗರದಲ್ಲಿ ಒಂದಷ್ಟು ಓಡಾಟದ ಬಳಿಕ ವಿಕಾಸ್ ಪುಷ್ಪಗಿರಿ ಅವರ ಸಿನಿಮಾ ಮಾಡುವ ಕನಸಿಗೆ, ಕೈ ಜೋಡಿಸಿದ ವಿನಯ್ ಕುಮಾರ್ ವಿ.ಆರ್ “ಫ್ರೆಂಡ್ಸ್ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ “ನ್ಯೂರಾನ್’ ಚಿತ್ರವನ್ನು ನಿರ್ಮಿಸಿದ್ದಾರೆ.
“ನ್ಯೂರಾನ್’ ಚಿತ್ರದಲ್ಲಿ ನವನಟ ಯುವ ನಾಯಕನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಯುವ ಅವರಿಗೆ ನೇಹಾ ಪಾಟೀಲ್, ವೈಷ್ಣವಿ ಮೆನನ್ ಮತ್ತು ಶಿಲ್ಪಾ ಶೆಟ್ಟಿ ನಾಯಕಿಯರಾಗಿ ಜೋಡಿಯಾಗಿದ್ದಾರೆ. ಉಳಿದಂತೆ ಅರವಿಂದ್ ರಾವ್, ಜೈಜಗದೀಶ್, ಕಬೀರ್ ಸಿಂಗ್ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇನ್ನು ಹೊಸಬರ “ನ್ಯೂರಾನ್’ ತಂಡಕ್ಕೆ ಸಾಥ್ ನೀಡಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, “ನ್ಯೂರಾನ್’ ಚಿತ್ರದ ಆಡಿಯೋ ಮತ್ತು ಟ್ರೇಲರ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಚಿತ್ರದ ಹಾಡುಗಳು ಮತ್ತು ಟ್ರೇಲರ್‌ಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿರುವ ದರ್ಶನ್, “ನ್ಯೂರಾನ್’ ಯಶಸ್ವಿಯಾಗಲಿ ಎಂದು ಹಾರೈಸಿದರು.
“ನ್ಯೂರಾನ್’ ಚಿತ್ರದ ಹಾಡುಗಳಿಗೆ ಗುರುಕಿರಣ್ ಸಂಗೀತ ಸಂಯೋಜನೆಯಿದ್ದು, ಡಾ. ವಿ ನಾಗೇಂದ್ರ ಪ್ರಸಾದ್, ಕವಿರಾಜ್ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಚಿತ್ರಕ್ಕೆ ಶೋಯೆಬ್ ಅಹಮದ್ ಕೆ.ಎಂ ಛಾಯಾಗ್ರಹಣ, ಶ್ರೀಧರ್ ವೈ.ಎಸ್ ಸಂಕಲನವಿದೆ. ಸದ್ಯ ಬಿಡುಗಡೆಯಾಗಿರುವ “ನ್ಯೂರಾನ್’ ಚಿತ್ರದ ಹಾಡುಗಳು ಮತ್ತು ಟ್ರೇಲರ್‌ಗಳು ನಿಧಾನವಾಗಿ ಸೋಶಿಯಲ್ ಮೀಡಿಯಾಗಳಲ್ಲಿ ನೋಡುಗರ ಗಮನ ಸೆಳೆಯುತ್ತಿದ್ದು, ಚಿತ್ರ ಅಕ್ಟೋಬರ್ ವೇಳೆಗೆ ತೆರೆಗೆ ಬರುವ ಯೋಚನೆಯಲ್ಲಿದೆ.