Advertisement

Network Problem: 5 ಟವರಿದ್ದರೂ ನಾಟ್‌ ರೀಚೆಬಲ್‌!

02:31 PM Jan 15, 2025 | Team Udayavani |

ಅಜೆಕಾರು: ಕಾರ್ಕಳ ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾದ ಅಜೆಕಾರು ಪರಿಸರವನ್ನು ನೆಟ್ವರ್ಕ್‌ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದೆ. ಸರಕಾರಿ ಸಾಮ್ಯದ ಬಿಎಸ್‌ಎನ್‌ಎಲ್ ಹಾಗೂ ವಿವಿಧ ಖಾಸಗಿ ಕಂಪೆನಿಗಳ ಒಟ್ಟು ಐದು ಮೊಬೈಲ್‌ ಟವರ್‌ಗಳು ಅಜೆಕಾರು ಪೇಟೆಯಲ್ಲಿಯೇ ಇದ್ದರೂ ಅರ್ಧ ಕಿ.ಮೀ ಪೇಟೆ ಬಿಟ್ಟು ಹೋದರೆ ಮೊಬೈಲ್‌ ನಾಟ್‌ ರೀಚೆಬಲ್‌! ಮೊಬೈಲ್‌ ಟವರ್‌ನಿಂದ 50ಮೀ ದೂರದಲ್ಲಿರುವ ಮನೆ ಒಳಗಡೆ ನೆಟ್ವರ್ಕ್‌ ಇಲ್ಲದ ಪರಿಸ್ಥಿತಿ ಅಜೆಕಾರಿನದ್ದು.

Advertisement

ಅಜೆಕಾರು ಪೇಟೆಯಲ್ಲಿಯೇ ಈ ಸ್ಥಿತಿಯಾದರೆ ಪರಿಸರದ ಗ್ರಾಮೀಣ ಭಾಗಗಳಾದ ಕಾಡುಹೊಳೆ, ಗುಡ್ಡೆಯಂಗಡಿ, ನಂದಾರು, ಮಂಗಳಾನಗರ, ಆಚಾರಿ ಪಲ್ಕೆ, ನೂಜಿಗುರಿ, ದೆಪುತ್ತೆ, ಕೈಕಂಬ, ಮಧುರಾ ಪಟ್ಟಣ ಮುಂತಾದ ಪ್ರದೇಶಗಳಲ್ಲಿ ಮೊಬೈಲ್‌ ಕರೆ ಮಾಡುವುದು ಕಷ್ಟಕರವಾಗಿದೆ. ಕರೆ ಮಾಡಬೇಕಾದರೆ ಮನೆ ಬಿಟ್ಟು ರಸ್ತೆಯಂಚಿಗೆ ಬಂದರಷ್ಟೇ ನೆಟ್ವರ್ಕ್‌ ಲಭಿಸುತ್ತದೆ. ಕೆಲವು ವರ್ಷಗಳ ಹಿಂದೆ ಈ ಭಾಗಗಳಲ್ಲಿ ಸ್ವಲ್ಪಮಟ್ಟಿಗಾದರೂ ನೆಟ್ವರ್ಕ್‌ ಸಿಗುತ್ತಿತ್ತು. ಆದರೆ ಇತ್ತೀಚೆಗೆ ಸಿಗುವ ನೆಟ್‌ವರ್ಕ್‌ ಪ್ರಮಾಣವೂ ಕಡಿಮೆಯಾಗಿದೆ.

ಈಗ ಅಜೆಕಾರು ಪೇಟೆ ಯಲ್ಲಿಯೇ ಇರುವ ಐದು ಟವರ್‌ಗಳ ನಿರ್ವಹಣೆ ಮಾಡಿ ಟವರ್‌ ಸಾಮರ್ಥ್ಯ ಹೆಚ್ಚಿಸುವ ಜತೆಗೆ ಅಜೆಕಾರು ಪರಿಸರದ ದೆಪ್ಪುತ್ತೆ, ಕೈಕಂಬ, ಮಧುರಾ ಪಟ್ಟಣ, ಗುಡ್ಡೆಯಂಗಡಿ, ಮಂಗಳಾ ನಗರ ಪ್ರದೇಶಗಳಲ್ಲಿ ಇನ್ನೂ ಐದಾರು ಟವರ್‌ ನಿರ್ಮಾಣವಾದರೆ ಸಮಸ್ಯೆ ಬಗೆಹರಿಯಬಹುದು ಎಂಬುದು ಸ್ಥಳೀಯರ ಅಭಿಪ್ರಾಯ.

ಪೇಟೆ ಬೆಳೆಯುತ್ತಿದೆ, ಸೌಲಭ್ಯ ಕೇಳುತ್ತಿದೆ
ಇತ್ತೀಚಿನ ವರ್ಷಗಳಲ್ಲಿ ಅಜೆಕಾರು ಪೇಟೆ ತ್ವರಿತಗತಿಯಲ್ಲಿ ಅಭಿವೃದ್ಧಿಗೊಳ್ಳುತ್ತಿದ್ದು ಹಲವಾರು ವಸತಿ ಸಮುಚ್ಚಯಗಳು ನಿರ್ಮಾಣಗೊಳ್ಳುತ್ತಿವೆ. ಪೇಟೆ ಬೆಳೆದಂತೆ ಅದಕ್ಕೆ ಪೂರಕವಾಗಿ ಇರಬೇಕಾದ ನೆಟ್ವರ್ಕ್‌ ವ್ಯವಸ್ಥೆ ಇಲ್ಲದಂತಾಗಿದೆ. ಅಜೆಕಾರು ಹೋಬಳಿ ಕೇಂದ್ರವಾಗಿರುವುದರಿದ ಪರಿಸರದ ಹಲವಾರು ಗ್ರಾಮ ಗಳ ನಾಗರಿಕರು ವಿವಿಧ ಕೆಲಸ ಕಾರ್ಯಗಳ ನಿಮಿತ್ತ ಅಜೆಕಾರಿಗೆ ಬರುತ್ತಾರೆ. ಈ ಸಂದರ್ಭ ಗ್ರಾಮ ಒನ್‌ ಕೇಂದ್ರ ಸೇರಿದಂತೆ ವಿವಿಧ ಸರಕಾರಿ ಕಚೇರಿಗಳಲ್ಲಿ ನೆಟ್ವರ್ಕ್‌ ಸಮಸ್ಯೆಯಿಂದ ಕೆಲಸ ಅಸಾಧ್ಯವಾಗುತ್ತದೆ. ಪರಿಣಾಮ ವಾಗಿ ಸರಕಾರದ ವಿವಿಧ ಯೋಜನೆಗಳು ಫ‌ಲಾನುಭವಿಗಳ ಕೈತಪ್ಪುವಂತಾಗಿದೆ. ಅಂಗನವಾಡಿ, ಶಾಲೆಗಳು, ಹಾಲು ಉತ್ಪಾದಕರ ಸಂಘ, ನಾಡ ಕಚೇರಿ, ಬ್ಯಾಂಕ್‌ಗಳು ಸೇರಿದಂತೆ ವಿವಿಧ ಸರಕಾರಿ ಕಚೇರಿಗಳಿಗೂ ನೆಟ್ವರ್ಕ್‌ ಸಮಸ್ಯೆ ಕಾಡುತ್ತಿದೆ. ಖಾಸಗಿ ಕಚೇರಿ ಮತ್ತು ಮಳಿಗೆಗಳಲ್ಲಿ ಕೂಡ ನೆಟ್ವರ್ಕ್‌ ಇಲ್ಲದೆ ದೊಡ್ಡ ಹೊಡೆತ ಬಿದ್ದಿದೆ.

ನಿರಂತರವಾಗಿ ಕಾಡುತ್ತಿದೆ
ಅಜೆಕಾರಿನ ಬಹುತೇಕ ಪ್ರದೇಶಗಳಲ್ಲಿ ಮೊಬೈಲ್‌ ನೆಟ್‌ವರ್ಕ್‌, ಇಂಟರ್‌ನೆಟ್‌ ಸೇವೆ ಇಲ್ಲದೆ ಜನರು ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಈಗಾಗಲೇ ಖಾಸಗಿ ಮೊಬೈಲ್‌ ಕಂಪೆನಿಗಳ ಗಮನಕ್ಕೆ ಸಮಸ್ಯೆಯನ್ನು ತರಲಾಗಿದ್ದರೂ ಅಲ್ಲಿನ ಅಧಿಕಾರಿಗಳ ಅಸಹಕಾರದಿಂದಾಗಿ ನೆಟ್ವರ್ಕ್‌ ಸಮಸ್ಯೆ ನಿರಂತರ ಕಾಡುತ್ತಿದೆ.
– ಕೃಷ್ಣಮೂರ್ತಿ, ಗ್ರಾ.ಪಂ. ಸದಸ್ಯರು, ಮರ್ಣೆ

Advertisement

-ಜಗದೀಶ್‌ ಅಂಡಾರು

Advertisement

Udayavani is now on Telegram. Click here to join our channel and stay updated with the latest news.