Advertisement

ನೆಟ್‌ವರ್ಕ್‌ ಸಮಸ್ಯೆ: ಅಧಿಕಾರಿಗಳು ತರಾಟೆಗೆ

12:42 PM Aug 14, 2020 | Suhan S |

ಯಲ್ಲಾಪುರ: ತಾಲೂಕಿನ ನಂದೊಳ್ಳಿ ಭಾಗದಲ್ಲಿ ಬಿಎಸ್‌ಎನ್‌ಎಲ್‌ ನೆಟ್‌ ವರ್ಕ್‌ ಸಮಸ್ಯೆಯಿಂದಾಗಿ ಬೇಸತ್ತ ಜನತೆ ಪಟ್ಟಣದ ಬಿಎಸ್‌ಎನ್‌ಎಲ್‌ ಕಚೇರಿಗೆ ಬಂದು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

Advertisement

ಮೊಬೈಲ್‌ ನೆಟ್‌ವರ್ಕ್‌ ಹಾಗೂ ಸ್ಥಿರ ದೂರವಾಣಿಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ಜನತೆ ತುರ್ತು ಸಂಪರ್ಕಕ್ಕೂ ಯಾವುದೇ ಸಾಧನಗಳಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ವರ್ಷದಿಂದೀಚೆಗೆ ವಿದ್ಯುತ್‌ ಸಂಪರ್ಕ ಇದ್ದರೆ ಮಾತ್ರ ಟಾವರ್‌ ಕಾರ್ಯ ನಿರ್ವಹಿಸುತ್ತಿದೆ. ವಿದ್ಯುತ್‌ ವ್ಯತ್ಯಯವಾದರೆ ನೆಟ್‌ವರ್ಕ್‌ ಅಷ್ಟಕ್ಕಷ್ಟೇ. ಕಳೆದ ವಾರ ಭಾರೀ ಮಳೆ-ಗಾಳಿಯಿಂದಾಗಿ ವಿದ್ಯುತ್‌ ವ್ಯತ್ಯಯ ಉಂಟಾದಾಗ ವಿದ್ಯುತ್‌ ಜತೆ ಹೋದ ನೆಟ್‌ವರ್ಕ್‌ ವ್ಯವಸ್ಥೆ, ವಿದ್ಯುತ್‌ ಸಂಪರ್ಕ ಸರಿಯಾದರೂ ಸರಿಯಾಗಿಲ್ಲ. ನಂದೊಳ್ಳಿಯಲ್ಲಿ ಟವರ್‌ ಇದ್ದೂ ವ್ಯರ್ಥವಾಗಿದೆ. ಹಲವು ವಿದ್ಯಾರ್ಥಿಗಳು ಆನ್‌ಲೈನ್‌ ಕ್ಲಾಸ್‌, ಅನೇಕರು ವರ್ಕ್‌ ಫ್ರಂ ಹೋಂ ಸಲುವಾಗಿ ಮೊಬೈಲ್‌ ನೆಟ್‌ವರ್ಕನ್ನೇ ನೆಚ್ಚಿಕೊಂಡಿದ್ದಾರೆ. ಜನತೆ ತುರ್ತಾಗಿ ಒಂದು ಕರೆ ಮಾಡುವುದಕ್ಕೂ ಬೆಟ್ಟ-ಗುಡ್ಡ ಹತ್ತಿ ನೆಟ್‌ವರ್ಕ್‌ ಹುಡುಕಬೇಕಾದ ದುಃ ಸ್ಥಿತಿ ಬಂದೊದಗಿದೆ.

ನಂದೊಳ್ಳಿಯಲ್ಲಿ ಟವರ್‌ ನಿರ್ವಹಣೆಗೆ ಯಾವುದೇ ಸಿಬ್ಬಂದಿ ಇರುವುದಿಲ್ಲ. ವಿದ್ಯುತ್‌ ವ್ಯತ್ಯಯವಾದಾಗ ಹೋದ ನೆಟ್‌ವರ್ಕ್‌, ವಿದ್ಯುತ್‌ ಬಂದ ನಂತರ ಮತ್ತೆ ಬರಬೇಕೆಂದರೆ ಟವರನ್ನು ಆನ್‌ ಮಾಡಲು ಯಲ್ಲಾಪುರದಿಂದಲೇ ಸಿಬ್ಬಂದಿ ಬರಬೇಕು. ಇಷ್ಟಾದರೂ ಜನರಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪದೇಪದೇ ನೆಟ್‌ವರ್ಕ್‌ ಇಲ್ಲದಂತಾಗುವ ಸಮಸ್ಯೆ ಪರಿಹರಿಸಬೇಕು. ವಿದ್ಯುತ್‌ ವ್ಯತ್ಯಯವಾದರೂ ನೆಟ್‌ವರ್ಕ್‌ ಇರುವಂತೆ ಕ್ರಮ ಕೈಗೊಳ್ಳಬೇಕು. ಟವರ್‌ ನಿರ್ವಹಣೆಗೆ ಸಿಬ್ಬಂದಿ ನೇಮಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.

ಮಳೆ-ಗಾಳಿಯಿಂದಾಗಿ ಈ ಅವ್ಯವಸ್ಥೆ ಉಂಟಾಗಿತ್ತು. ಇನ್ನು ಮುಂದೆ ಈ ರೀತಿ ಸಮಸ್ಯೆ ಆಗದಂತೆ ನೋಡಿಕೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ಸಮಸ್ಯೆ ಮುಂದುವರಿದರೆ ಬಿಎಸ್‌ ಎನ್‌ಎಲ್‌ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಎಂ.ಎನ್‌. ಭಟ್ಟ, ನಾಗರಾಜ ಭಟ್‌ ಕವಡಿಕೇರಿ, ಆರ್‌. ಎಸ್‌. ಭಟ್ಟ, ಮಹಾಬಲೇಶ್ವರ ಭಟ್ಟ ಬೆಳಶೇರ, ಗೋಪಣ್ಣ ಮೊಟ್ಟೆಪಾಲ, ರಾಮಚಂದ್ರ ಭಟ್ಟ ಕಿರಕುಂಭತ್ತಿ, ಗಣಪತಿ ಭಟ್ಟ ಉಬ್ಬಜ್ಜಿಪಾಲ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next