ಉಪ್ಪಿನಂಗಡಿ: ಕಳೆದ ಒಂದು ತಿಂಗಳ ಹಿಂದೆ ಹರಿವು ನಿಲ್ಲಿಸಿದ್ದ ನೇತ್ರಾವತಿ ನದಿಯಲ್ಲಿ ಮತ್ತೆ ನೀರು ಹರಿಯಲಾರಂಭಿಸಿದೆ.
ಕಳೆದೆರಡು ದಿನಗಳಿಂದ ಅಲ್ಲಲ್ಲಿ ಸುರಿಯುತ್ತಿರುವ ಮಳೆಯ ಪರಿಣಾಮ ಗುರುವಾರ ಮುಂಜಾನೆಯಿಂದಲೇ ನೀರಿನ ಹರಿವು ಪ್ರಾರಂಭಗೊಂಡಿದ್ದು, ನೇತ್ರಾವತಿ ಮತ್ತೆ ಜೀವಂತಿಕೆ ಪಡೆದಂತಾಗಿದೆ.
ಎಪ್ರಿಲ್ 6ನೇ ತಾರೀಕಿನಿಂದ ಹರಿವು ಸ್ಥಗಿತಗೊಂಡು ಬಳಿಕ ಸಂಪೂರ್ಣ ಬರಡಾದ ನೇತ್ರಾವತಿ ಬಯಲಿನಂತಾಗಿತ್ತು. ಜಲಚರಗಳು ಜೀವಕಳೆದುಕೊಂಡು ಪಕ್ಷಿಗಳಿಗೆ ಆಹಾರವಾಗುತ್ತಿದ್ದ ದೃಶ್ಯ ಮನ ಕರಗುವಂತಿತ್ತು.
ಭಾರೀ ಗಾಳಿ ಮಳೆ
ಗುರುವಾರ ಸಾಯಂಕಾಲ ಸಾಧಾರಣ ಮಳೆಯಾಯಿತು. ರಾತ್ರಿ ಭಾರೀ ಗಾಳಿಯೊಂದಿಗೆ ಸಿಡಿಲಬ್ಬರದ ಮಳೆ ಸುರಿಯಿತು. ಹೆದ್ದಾರಿ ವಿಸ್ತರಣೆ ಕಾಮಗಾರಿಯಿಂದಾಗಿ ಹಲವೆಡೆ ಚರಂಡಿಗಳು ಮುಚ್ಚಲ್ಪಟ್ಟಿದ್ದು, ಮಳೆ ನೀರು ಸರಾಗವಾಗಿ ಹರಿದು ಹೋಗಲಾಗದೆ ಸಮಸ್ಯೆಗಳು ಸೃಷ್ಟಿಯಾಗಿವೆ.