ಮಂಗಳೂರು: ದೇಶದೆಲ್ಲೆಡೆ ಸ್ವಾತಂತ್ರ್ಯ ದಿನ ಸಂಭ್ರಮವಾದರೂ ನೇತ್ರಾವತಿ ನದಿ ಹಾಗೂ ಪಶ್ಚಿಮ ಘಟ್ಟಕ್ಕೆ ದುಷ್ಟ ರಾಜಕೀಯ ವ್ಯವಸ್ಥೆಯಿಂದ ಸ್ವಾತಂತ್ರ್ಯ ವಂಚನೆಯಾಗಿದೆ ಎಂದು ಆರೋಪಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಂಗಳವಾರ ಸಹ್ಯಾದ್ರಿ ಸಂಚಯದ ವತಿಯಿಂದ ನದಿವನ ರೋದನ ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ನಡೆಯಿತು.
ಸಹ್ಯಾದ್ರಿ ಸಂಚಯದಲ್ಲಿ ಚಿತ್ರ ಕಲಾವಿದರೇ ಹೆಚ್ಚಿರುವ ಕಾರಣ ನೇತ್ರಾವತಿ ನದಿ ಹಾಗೂ ಪಶ್ಚಿಮ ಘಟ್ಟಗಳ ಮೇಲಾಗುವ ದುಷ್ಪರಿಣಾಮಗಳನ್ನು ಕಲಾಕೃತಿಗಳ ಮೂಲಕ ಚಿತ್ರಿಸಲಾಗಿತ್ತು. ನದಿಗಳ ಉಗಮ ಸ್ಥಳವಾದ ಪಶ್ಚಿಮ ಘಟ್ಟಗಳ ಕಲಾಕೃತಿಯ ಮೇಲೆ ವಿದ್ಯಾರ್ಥಿಗಳು ತ್ರಿವರ್ಣ ಧ್ವಜದ ಬಣ್ಣವನ್ನು ಎರಚುವ ಮೂಲಕ ಚಾಲನೆ ನೀಡಿದರು.
ಸಹ್ಯಾದ್ರಿ ಸಂಚಯದ ದಿನೇಶ್ ಹೊಳ್ಳ ಮಾತನಾಡಿ, ಎತ್ತಿನಹೊಳೆ ಯೋಜನೆಯ ಮೂಲಕ 2 ಸಾವಿರ ಕೋ.ರೂ. ಹಣವನ್ನು ವ್ಯರ್ಥ ಮಾಡಿದ ಸರಕಾರ, ನೀರಿಲ್ಲ ಎಂಬ ಕಾರಣಕ್ಕೆ ಇದೀಗ ನದಿಯ ಉಗಮವನ್ನು ಬಿಟ್ಟು ಸಂಗಮ ಸ್ಥಾನಕ್ಕೆ ಕನ್ನ ಹಾಕಲು ಹೊರಟಿದೆ. ಪಶ್ಚಿಮ ಘಟ್ಟಕ್ಕೆ ಹಾನಿಯಾಗಿರುವುದರಿಂದ ಪ್ರಸ್ತುತ ಮಳೆಯ ಪ್ರಮಾಣವೂ ಇಳಿಕೆಯಾಗಿದೆ ಎಂದರು.
1952ರ ಸೆಂಟ್ರಲ್ ರಿವರ್ ಬೋರ್ಡ್ ಆ್ಯಕ್ಟ್ ಪ್ರಕಾರ ಪ್ರತಿ ರಾಜ್ಯಗಳಲ್ಲೂ ನದಿ-ಕೆರೆಗಳ ಒತ್ತುವರಿಯನ್ನು ತಡೆಯಲು ಪ್ರಾಧಿಕಾರವೊಂದು ರಚನೆಯಾಗಬೇಕಿದ್ದರೂ ಕರ್ನಾಟಕದಲ್ಲಿ ಅದು ಇನ್ನೂ ರಚನೆಯಾಗಿಲ್ಲ. ಹೀಗಾಗಿ ಬೆಂಗಳೂರು, ಕೋಲಾರ ಸೇರಿದಂತೆ ಇತರ ಪ್ರದೇಶಗಳ ಕೆರೆಗಳ ಒತ್ತುವರಿಯನ್ನು ಕೇಳುವವರೇ ಇಲ್ಲದಾಗಿದೆ. ಹೀಗಾಗಿ ಆ ಭಾಗಗಳಲ್ಲಿ ಬರಗಾಲ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದರು.
ನದಿಗಳು ಬರಿದಾಗಿ ನೀರಿನ ಕೊರತೆ ಉಂಟಾಗಲಿದೆ ಎಂಬುದನ್ನು ಬಿಂಬಿಸುವ ರೀತಿಯಲ್ಲಿ ಖಾಲಿ ಬಾಟಲ್‌ಗಳನ್ನು ಬ್ಯಾಜ್‌ರೂಪದಲ್ಲಿ ಕುತ್ತಿಗೆಗೆ ಹಾಕಿದ್ದರು. ಎಸ್ಟೇಟ್ ಮಾಫಿಯ, ಗಣಿಗಾರಿಕೆ, ರೆಸಾರ್ಟ್ ಮಾಫಿಯಾ, ಅರಣ್ಯ ಅತಿಕ್ರಮಣ, ಮರಗಳ ಕಳ್ಳ ಸಾಗಾಣಿಕೆ, ಗಾಂಜಾ ಮಾಫಿಯಾದಿಂದಲೂ ಪಶ್ಚಿಮ ಘಟ್ಟಕ್ಕೆ ಹಾನಿಯಾಗುತ್ತಿದೆ ಎಂದು ಚಿತ್ರಿಸಲಾಗಿತ್ತು.
ನದಿ ಬರಿದಾಗುತ್ತಿರುವುದರಿಂದ ಕರಾವಳಿಯ ಪ್ರಮುಖ ಉದ್ಯಮ ಮೀನುಗಾರಿಕೆಗೂ ಹೊಡೆತ ನೀಡುತ್ತಿದೆ ಎಂದು ಬಿಂಬಿಸಿ ಮೀನಿನ ಬರೀ ಮುಳ್ಳಿನ ಕಲಾಕೃತಿಯನ್ನು ನೇತಾಡಿಸಿದ್ದರು. ‘ಎಲ್ಲಿ ಹೋದವೋ ಕಣ್ಣಿಗೆ ಕಾಣದಾದವೋ, ಗಿಡ ಮರ-ಪ್ರಾಣಿ ಪಕ್ಷಿಗಳು ಎಲ್ಲಿ ಹೋದವೋ ಕಣ್ಣಿಗೆ ಕಾಣದಾದವೋ ಎಂಬ ಗೀತೆಯನ್ನು ನಗರದ ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಹಾಡಿದರು.’
ಕಾರ್ಯಕ್ರಮವನ್ನುದ್ದೇಶಿಸಿ ಸ್ವರೂಪ ಅಧ್ಯಯನ ಕೇಂದ್ರದ ನಿರ್ದೇಶಕ ಗೋಪಾಡ್ಕರ್, ದಿನೇಶ್ ಕೊಡಿಯಾಲ್‌ಬೈಲ್ ಮಾತನಾಡಿದರು. ಪ್ರಮುಖರಾದ ಹರೀಶ್ ಅಡ್ಯಾರ್, ಸಪ್ನಾ ನೊರೊನ್ಹಾ, ರಾಜೇಶ್ ದೇವಾಡಿಗ, ಕಟೀಲು ದಿನೇಶ್ ಪೈ, ಪವನ್ ಜೈನ್ ಮೊದಲಾದವರು ಭಾಗವಹಿಸಿದ್ದರು.