Advertisement

ನೇತ್ರಾವತಿ ತಿರುವು ಯೋಜನೆ

10:20 AM Jan 28, 2018 | Team Udayavani |

ಮಹಾನಗರ: ಕರಾವಳಿಯ ಜೀವನದಿ ನೇತ್ರಾವತಿಯನ್ನು ಉಳಿಸುವಲ್ಲಿ ಎರಡನೇ ಹಂತದ ಹೋರಾಟಕ್ಕೆ ಪರಿಸರ ಸಂಘಟನೆಗಳು ಸಜ್ಜಾಗಿವೆ.

Advertisement

ನಾಲ್ಕೈದು ತಿಂಗಳಿನಲ್ಲಿ ವಿಧಾನಸಭಾ ಚುನಾವಣೆ ಬರಲಿದ್ದು, ಈ ವೇಳೆಗೆ ತೀವ್ರ ಹೋರಾಟದ ಮೂಲಕ ನೇತ್ರಾವತಿ ನದಿ
ತಿರುವು ಯೋಜನೆಯನ್ನು ಕೈಬಿಡುವಂತೆ ಸರಕಾರದ ಮೇಲೆ ಒತ್ತಡ ಹೇರಲು ಪರಿಸರ ಸಂಘಟನೆಗಳು ಹಾಗೂ ಜಿಲ್ಲೆಯ ನಾಡು-ನುಡಿಗಾಗಿ ಹೋರಾಟ ಮಾಡುತ್ತಿರುವ ಕೆಲವು ಸಂಘಟನೆಗಳು ಮುಂದಾಗಿವೆ. ಈ ಮೂಲಕ ಜೀವನದಿ ಸಂರಕ್ಷಣೆಯತ್ತ ಅಸಡ್ಡೆ ತೋರಿದ ಕರಾವಳಿ ಭಾಗದ ಚುನಾಯಿತ ಜನಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸಲು ಹೋರಾಟದ ರೂಪುರೇಷೆ ಸಿದ್ಧಪಡಿಸುತ್ತಿದ್ದಾರೆ. ತುಳುನಾಡ ರಕ್ಷಣಾ ವೇದಿಕೆಯು ಮತ್ತೆ ಹೋರಾಟಕ್ಕೆ ಸಜ್ಜಾಗುತ್ತಿದೆ.

ಈಗಾಗಲೇ ಅನೇಕ ಸಂಘಟನೆಗಳು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಯೋಜನೆಯನ್ನು ಕೈಬಿಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇತ್ತೀಚೆಗೆ ಜಿಲ್ಲೆಯಲ್ಲಿ ಬಿಜೆಪಿ ನಡೆಸಿದ ಪರಿವರ್ತನ ಯಾತ್ರೆಯಲ್ಲಿಯೂ ನೇತ್ರಾವತಿ ತಿರುವು ವಿರುದ್ಧ ಕೂಗು ಕೇಳಿಬಂದಿತ್ತು. ಈಗಾಗಲೇ ನಗರದ ಕೆಲ ಮನೆಗಳ ಗೇಟ್‌ಗಳಲ್ಲಿ ‘ಮತ ಕೇಳಲು ಬರಬೇಡಿ, ನಿಮಗೆ ಧಿಕ್ಕಾರ’ ಎಂಬ ಬರಹ ಫ‌ಲಕಗಳು ತೂಗುತ್ತಿವೆ.

ಎರಡು ವರ್ಷಗಳ ಹಿಂದೆ ನಡೆದಿದ್ದ ಹೋರಾಟಕ್ಕಿಂತ ಭಿನ್ನ ಸ್ವರೂಪದಲ್ಲಿ ಗ್ರಾಮ, ಪಟ್ಟಣ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಹೋರಾಟ ನಡೆಸಲು ತೀರ್ಮಾನಿಸಿದ್ದು, ಮಂಗಳೂರಿನಲ್ಲಿ ಎರಡು ಸಭೆ ನಡೆಸಿ ಚರ್ಚಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿಯೂ ಹೋರಾಟ ನಡೆಯಲಿದೆ. ಇದಕ್ಕೆಂದು ಸಮಿತಿ ರಚಿಸಲಾಗುತ್ತಿದೆ.

2015ರ ಸೆ.15ರಂದು ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿಯ ಸೇತುವೆ ಬಳಿ ರಸ್ತೆಯಲ್ಲಿ ಕುಳಿತು ಧರಣಿ ನಡೆಸಲಾಗಿತ್ತು. ಆಗ ಕೆಲವು ಮಂದಿ ಬಂಧನಕ್ಕೊಳಗಾಗಿದ್ದರು. ಇದಾದ ಎರಡು ತಿಂಗಳಿನಲ್ಲಿ ಪಡೀಲ್‌ನಲ್ಲಿ ಪ್ರತಿಭಟನೆ ನಡೆದಿತ್ತು.

Advertisement

ಹೋರಾಟಕ್ಕೆ ಸಜ್ಜಾಗಬೇಕು
‘ನೇತ್ರಾವತಿ ನದಿ ತಿರುವು ಯೋಜನೆ ಕ್ಷುಲ್ಲಕ ವಿಚಾರವಲ್ಲ. ಮುಂದಿನ ಚುನಾವಣೆ ಬಳಿಕ ಆಡಳಿತ ನಡೆಸುವ ಸರಕಾರ ಖಂಡಿತವಾಗಿಯೂ ಪರಮಶಿವಯ್ಯ ವರದಿಯನ್ನು ಅನುಷ್ಠಾನಕ್ಕೆ ತರುತ್ತದೆ. ಮುಂದಿನ ಹೋರಾಟಕ್ಕೆ ಯುವ ಜನತೆ ಈಗಾಗಲೇ ಸಜ್ಜಾಗಬೇಕು.’
ದಿನೇಶ್‌ ಹೊಳ್ಳ,
  ಸಹ್ಯಾದ್ರಿ ಸಂಚಯದ ಸಂಚಾಲಕ

ಬೆಂಬಲ ಅಗತ್ಯ
‘ನೇತ್ರಾವತಿ ನದಿ ತಿರುವು ಯೋಜನೆ ವಿರೋಧಿಸಿ ಎರಡನೇ ಹಂತದಲ್ಲಿ ಬೃಹತ್‌ ಹೋರಾಟಕ್ಕೆ ಸಿದ್ಧರಾಗುತ್ತಿದ್ದೇವೆ. ಈಗಾಗಲೇ ಸಮಾಲೋಚನ ಸಭೆ ನಡೆಸಲಾಗಿದೆ. ಒಂದು ತಿಂಗಳಿನಲ್ಲಿ ಹೋರಾಟ ಆರಂಭಿಸಲಾಗುವುದು. ಜಿಲ್ಲೆಯ ಪ್ರತಿ ಸಂಘಟನೆ, ಸಾರ್ವಜನಿಕರು ಬೆಂಬಲಿಸಬೇಕು’.
ಯೋಗೀಶ್‌ ಶೆಟ್ಟಿ,
   ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ 

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next