Advertisement
ದಿಡುಪೆ ಪ್ರದೇಶದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಒಂದು ವಾರದ ಹಿಂದೆ ಮಲವಂತಿಗೆಯಿಂದ ಹರಿಯಲಾರಂಭಿಸಿದ್ದ ನದಿ ನೀರು ಹಲವಾರು ನೀರಿನ ಕಟ್ಟಗಳಲ್ಲಿ ತುಂಬಿ ಕಡಿರುದ್ಯಾವರ, ಗಜಂತೋಡಿ, ಬೊಳ್ಳುರು ಬೈಲು, ಅರಸುಮಜಲು, ಕಜಂಗಾಡಿ ಮುಂತಾದೆಡೆ ಹರಿದು ಮೇ 18ರಂದು ಕಲ್ಮಂಜ ಗ್ರಾಮದ ನಿಡಿಗಲ್ ಪ್ರದೇಶ ವನ್ನು ದಾಟಿ ಕಾಯರ್ತೋಡಿಯತ್ತ ಮುಂದುವರಿದಿದೆ. ರವಿವಾರ ಸಂಜೆ ಯಿಂದ ನೇತ್ರಾವತಿ ನದಿ ಹರಿಯುವ ಪ್ರದೇಶಗಳಲ್ಲಿ ಮಳೆಯಾಗುತ್ತಿರುವ ಕಾರಣ ನೀರಿನ ಹರಿವಿನಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದ್ದು ಒಂದೆರಡು ದಿನಗಳಲ್ಲಿ ಕಲ್ಮಂಜ ಗ್ರಾಮದ ಹುಣಿಪ್ಪಾಜೆ, ಕುಡೆಂಚಿ ಮೂಲಕ ಫಜಿರಡ್ಕದಲ್ಲಿ ಮೃತ್ಯುಂಜಯ ನದಿ ಜತೆ ಸಂಗಮಗೊಳ್ಳುವ ನಿರೀಕ್ಷೆ ಇದೆ. ಮೃತ್ಯುಂಜಯ ನದಿಯಲ್ಲಿ ನೀರಿನ ಹರಿವು ಈಗಾಗಲೇ ಹೆಚ್ಚಳವಾಗಿದ್ದು, ಫಜಿರಡ್ಕದಿಂದ ಧರ್ಮಸ್ಥಳ ಕಡೆ ನೇತ್ರಾವತಿ ನೀರು ಅಧಿಕವಾಗಲಿದೆ.
ಸುಳ್ಯ: ರವಿವಾರ ತಡರಾತ್ರಿಯಿಂದ ಸೋಮವಾರ ಬೆಳಗ್ಗೆ ತನಕ ತಾಲೂಕಿನ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಬೀಸಿದ ಗಾಳಿಗೆ ಹಲವೆಡೆ ಮರ, ವಿದ್ಯುತ್ ಕಂಬಕ್ಕೆ ಹಾನಿ ಉಂಟಾಗಿದೆ. ನಗರ ಮತ್ತು ಗ್ರಾಮಾಂ ತರ ಪ್ರದೇಶಗಳಲ್ಲಿನ ರಸ್ತೆಗಳಲ್ಲಿ ನೀರು ತುಂಬಿ ಕೆಸರಿನಿಂದ ಕೂಡಿ ಸಂಚಾರಕ್ಕೂ ತೊಡಕು ಉಂಟಾಯಿತು. ಈ ಬಾರಿ ಹೊಳೆಯಲ್ಲಿ ನೀರಿನ ಪ್ರಮಾಣ ಪೂರ್ಣವಾಗಿ ಬತ್ತುವ ಮೊದಲೇ ಮಳೆ ನೀರು ಹರಿದಿರುವುದರಿಂದ ಕೃಷಿ ತೋಟಕ್ಕೆ ಬರದ ಬಿಸಿ ತಟ್ಟಿಲ್ಲ. ನಗರದ ನೀರಿನ ಪೂರೈಕೆಗೆ ನಾಗಪಟ್ಟಣ ಬಳಿ ಪಯಸ್ವಿನಿ ನದಿಗೆ ಅಳವಡಿಸಲಾಗಿದ್ದ ಮರಳು ಕಟ್ಟವು ಮಳೆ ನೀರಿನ ಹರಿವಿನ ಪರಿಣಾಮ ಮುಳುಗಿದೆ. ಮರಳು ಕಟ್ಟಿದ ಮೇಲ್ಭಾಗದಿಂದ ನೀರು ಉಕ್ಕಿ ಕೆಳಭಾಗಕ್ಕೆ ಹರಿದಿದೆ. ಪಯಸ್ವಿನಿ ನದಿಯ ನೀರಿನ ಮಟ್ಟ ಏರಿಕೆಯಾಗಿದೆ.