Advertisement
ಹೀಗೆ ನಮ್ಮ ಜೀವಕ್ಕೆ ಜೀವನಕ್ಕೆ ಪೂರಕವಾಗುವಂತಹ ಪ್ರತಿಯೊಂದು ಸಂಪನ್ಮೂಲಗಳಲ್ಲೂ ನಾವು ದೇವರನ್ನು ಕಾಣುತ್ತೇವೆ. ಅಂತಹ ದೇವರ ಸ್ವರೂಪವೆಂದು ತಿಳಿದು, ಆರಾಧಿಸುವ ಸಂಪನ್ಮೂಲಗಳಲ್ಲಿ ನದಿಗಳು ಕೂಡಾ ಒಂದು. ನದಿಗಳು ನೀರಿನ ಮೂಲಗಳಾಗಿದ್ದು ಇವನ್ನು ನಾವು ಜಲದೇವತೆ, ಜಲದುರ್ಗೆ, ಗಂಗಾಮಾತೆ ಹೀಗೆ ನಾನಾ ರೀತಿಯ ಹೆಸರಿನ ಮೂಲಕ ಪೂಜಿಸುತ್ತೇವೆ. ಅಂತಹ ಪೂಜ್ಯನೀಯ ಪುಣ್ಯ ನದಿಗಳಲ್ಲಿ ನಮ್ಮ ದಕ್ಷಿಣ ಕನ್ನಡದ ಕುಮಾರಧಾರ – ನೇತ್ರಾವತಿ ನದಿಗಳು ಕೂಡ ಪ್ರಮುಖವಾದುದು.
Related Articles
Advertisement
ನೇತ್ರಾವತಿಯು ಮಂಗಳೂರಿಗರ ಜೀವನದಿ ಎಂಬುವುದರಲ್ಲಿ ಎರಡು ಮಾತಿಲ್ಲ. ನೇತ್ರಾವತಿ ನೀರು ಬಹಳಷ್ಟು ಜನರ ಜೀವಧಾತೆ. ನಮ್ಮ ಜಿಲ್ಲೆಯ ಹಲವಾರು ಊರಿನ ಜನರ ದೈನಂದಿನ ಬದುಕಿಗೆ ಪೂರಕವೇ ನೇತ್ರಾವತಿ ನದಿ ನೀರು. ಕುಡಿಯಲು, ಬೇಸಾಯಕ್ಕೆ ಹಾಗೂ ಇನ್ನಿತರ ಪ್ರತಿದಿನದ ಚಟುವಟಿಕೆಗೆ ನೇತ್ರಾವತಿ ನದಿಯು ಬಹಳಷ್ಟು ಉಪಕಾರಿ ಹಾಗೂ ಮಾತಾ ಸ್ವರೂಪಿ.
ಕುಮಾರಧಾರ – ನೇತ್ರಾವತಿ ಪವಿತ್ರ ಸಂಗಮ ಕ್ಷಣ ಈ ಬಾರಿ ಅತಿಹೆಚ್ಚು ಮಳೆ ಸುರಿದಿದ್ದು, ದಕ್ಷಿಣ ಕನ್ನಡದ ಜನರು ಕುಮಾರಧಾರ – ನೇತ್ರಾವತಿ ನದಿಗಳ ಸಂಗಮ ಕ್ಷಣದ ಭಾಗ್ಯವನ್ನು ನೋಡಿ ಅನುಭವಿಸುವಂತಾಗಿದೆ. ಈ ಸಂಗಮ ಕ್ಷಣವು ಮಂಗಳೂರಿನ ಜನತೆಗೆ ಸಂತಸದ ಕ್ಷಣ ಎಂದರೆ ತಪ್ಪಾಗಲಾರದು. ಮಂಗಳೂರಿಗರು ಪ್ರತಿ ಮಳೆಗಾಲದಲ್ಲೂ ಅತಿ ಹೆಚ್ಚು ಮಳೆ ಸುರಿದು ಕುಮಾರಧಾರ – ನೇತ್ರಾವತಿ ಸಂಗಮವಾಗಲಿ ಎಂದು ಬಯಸುತ್ತಾರೆ.
ನೆರೆ, ಪ್ರವಾಹ, ಮುಳುಗಡೆ ಭೀತಿ ಎದುರಾದರೂ ಅವುಗಳಿಗೆ ಕುಗ್ಗದೆ ಸಂಗಮದ ದೃಶ್ಯ ಕಣ್ತುಂಬುವಂತಾಗಲಿ ಎಂದು ಬೇಡಿಕೊಳ್ಳುತ್ತಾರೆ. ಅಂತೆಯೇ ನಾವು ಈ ಪುಣ್ಯ ಕ್ಷಣವನ್ನು 2019ರಲ್ಲಿ ಕಂಡಿದ್ದೇವು. ಅನಂತರ 4 ವರ್ಷಗಳ ಬಳಿಕ ಇದೇ 2024 ಜುಲೈ 31ರಂದು ಸಾಯಂಕಾಲ 7.20ಕ್ಕೆ ಈ ವರ್ಷದ ವರ್ಷಧಾರೆಯ ಪ್ರಭಾವದಿಂದಾಗಿ ಕುಮಾರಧಾರ – ನೇತ್ರಾವತಿ ನದಿಗಳು ಉಪ್ಪಿನಂಗಡಿಯ ದಕ್ಷಿಣ ಕಾಶಿ, ಗಯಾಪದ ತೀರ್ಥ ಕ್ಷೇತ್ರವಾದ ಮಹತೋಭಾರ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಂಗಮಗೊಂಡಿದ್ದಾರೆ.
ನೇತ್ರಾವತಿ ನದಿ ನೀರಿನ ಮಟ್ಟ ಸ್ವಲ್ಪ ಸ್ವಲ್ಪ ಮಧ್ಯಾಹ್ನದಿಂದಲೇ ಏರುತ್ತಿದ್ದರಿಂದ ಸಂಗಮದ ಶುಭ ಕ್ಷಣವನ್ನು ಕಾಣಲು ಜನರು ಕಾತರಿಸುತ್ತಿದ್ದರು. ಸಾಯಂಕಾಲದ ವೇಳೆಯಲ್ಲಿ ನೇತ್ರಾವತಿ ನದಿ ನೀರಿನ ಮಟ್ಟ ಹೆಚ್ಚುತ್ತಾ ಹೋಗಿ ಸಹಸ್ರಲಿಂಗೇಶ್ವರ ದೇಗುಲದ ಮುಂಭಾಗದಲ್ಲಿ ಹರಿಯತೊಡಗಿತು. ಅನಂತರದಲ್ಲಿ ಕುಮಾರಧಾರ ನದಿಯ ನೀರಿನ ಮಟ್ಟ ಹೆಚ್ಚಿ, ನೇತ್ರಾವತಿ – ಕುಮಾರಧಾರ ನದಿಯ ಸಂಗಮ ಘಟಿಸಿತು. ಸಂಗಮದ ಸಂದರ್ಭದಲ್ಲಿ ಜನ ಸಾಗರವೇ ಅಂದು ನೆರೆಯಿತು.
ಈ ಸಂಗಮದ ಶುಭ ಸಂದರ್ಭದಲ್ಲಿ ಗಂಗಾಮಾತೆಗೆ ಬಾಗಿನ ಸಮರ್ಪಣೆ ಮಾಡಲಾಯಿತು. ಸಂಗಮದ ಸಂದರ್ಭದಲ್ಲಿ ವೇದ ಮಂತ್ರಗಳ ಪವಿತ್ರ ವಿಧಿ ವಿಧಾನದೊಂದಿಗೆ ಗಂಗಾ ಪೂಜೆ ನೆರವೇರಿ ಪುಣ್ಯ ಸಂಗಮ ತೀರ್ಥ ಸ್ನಾನ ನಡೆಯಿತು. ಭಕ್ತರು ಗಂಗಾ ಮಾತೆಗೆ ಭಕ್ತಿಭಾವ ತುಂಬಿದ ಜೈಕಾರ ಸಲ್ಲಿಸಿದರು.
ಗಂಗಾ ಪೂಜೆ ಬಳಿಕ ಭಕ್ತರು ಸಂಗಮದ ತೀರ್ಥ ನೀರನ್ನು ಸಂಪೋ›ಕ್ಷಣೆ ಮಾಡಿ ತೀರ್ಥ ಸ್ನಾನ ಮಾಡುವ ಮೂಲಕ ಸಂಗಮದ ಪುಣ್ಯ ಫಲವನ್ನು ಪಡೆದರು. ಸಂಗಮದ ಮೊದಲು ಅತ್ಯಧಿಕವಾದ ರಭಸದಲ್ಲಿ ಹರಿಯುತ್ತಿದ್ದ ನೇತ್ರಾವತಿಯ ಮಟ್ಟವು ಸಂಗಮದ ಅನಂತರ ಬಹಳ ಶಾಂತ ರೂಪಕ್ಕೆ ಬದಲಾಯಿತು.
ಮಳೆಗಾಲದಲ್ಲಿ ಮಂಗಳೂರಿಗರು ಕಾತುರತೆಯಿಂದ ಕಾಯುತ್ತಿದ್ದ ಪ್ರೀತಿಯ ಮನಸ್ಸಿನ ಬೇಡಿಕೆಯೇ ಕುಮಾರಧಾರ – ನೇತ್ರಾವತಿ ನದಿಗಳ ಸಂಗಮದ ಕ್ಷಣ. ಅದು ಹೇಳತೀರದಷ್ಟು ಖುಷಿಯಿಂದ ಈ ಬಾರಿ ಘಟಿಸಿದ್ದು ಮತ್ತಷ್ಟು ಸಂತೋಷದ ವಿಚಾರ. ಇನ್ನು ಮುಂದೆ ಪ್ರತಿ ವರ್ಷ ವರ್ಷವೂ ಕುಮಾರಧಾರ – ನೇತ್ರಾವತಿ ನದಿಗಳು ಸಂಗಮವಾಗುತ್ತಿರಲಿ. ಜನರ ಮನಸ್ಸಿನ ಈ ಪ್ರಾರ್ಥನೆಯು ಭವಿಷ್ಯದಲ್ಲಿ ನಿಜವಾಗುತ್ತಿರಲಿ. ಈ ಸುಂದರವಾದ ಸಂಗಮದ ಕ್ಷಣ ನಮ್ಮೆಲ್ಲ ಮಂಗಳೂರಿಗರ ಮನದಲ್ಲಿ ಅವಿಸ್ಮರಣೀಯ.
ಕುಮಾರಧಾರ ನೇತ್ರಾವತಿ ನದಿಗಳು ಸಂಗಮವಾಗಬೇಕು ಎಂಬುದು ನಮ್ಮ ಹಿರಿಯರ ವಾಡಿಕೆ. ಹಿರಿಯರಿಗಿರುವಂತಹ ಆಸಕ್ತಿ ಎಲ್ಲವೂ ನಮ್ಮ ಇಂದಿನ ಯುವ ಜನತೆಯಲ್ಲಿ ಕಾಣಸಿಗುವುದಿಲ್ಲ. ನಾವು ಕುಮಾರಧಾರವಾಗಿರಲಿ ನೇತ್ರಾವತಿಯಾಗಿರಲಿ ಪುಣ್ಯ ತೀರ್ಥ ಸ್ನಾನ ಎಂದು ಹೇಳುವಾಗ ನಾವು ನದಿಗಿಳಿಯುವ ಮುನ್ನ ಎಚ್ಚರಿಕೆಯಿಂದಿರಬೇಕು. ನಾವು ಪ್ರಕೃತಿ ಮಾತೆಯೊಂದಿಗಿರುವ ನದಿಯನ್ನು ಎಂದಿಗೂ ಅಶುದ್ಧಗೊಳಿಸಲು ಮುಂದಾಗಬಾರದು. ನಾವು ಯಾವಾಗ ಅಶುದ್ಧಗೊಳಿಸುತ್ತೇವೋ ಪ್ರಕೃತಿ ಮನುಜನ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗುತ್ತದೆ. ಇದಕ್ಕೆ ನಿದರ್ಶನ ಎನ್ನುವಂತೆ ಇಂದು ನಾವೂ ಸುದ್ದಿ ಪತ್ರಿಕೆಗಳನ್ನು ತೆರೆದಾಗ, ಸಾಮಾಜಿಕ ಜಾಲಾತಾಣದಲ್ಲಿನ ಸುದ್ದಿಗಳನ್ನು ಕಂಡಾಗ ನೀರಿನಲ್ಲಿ ಕೊಚ್ಚಿ ಹೋದರು, ನೀರಿನಲ್ಲಿ ಮುಳುಗಿದರು ಎಂಬ ಈ ರೀತಿಯ ನೀರಿನ ಅವಘಡಗಳ ಸುದ್ದಿಗಳನ್ನೇ ಕಾಣುತ್ತಿದ್ದೇವೆ.
ಒಂದಷ್ಟು ಹಿಂದಿನ ವರ್ಷಗಳತ್ತ ನೋಡಿದರೆ ಹೆಚ್ಚು ಕಾಡುಗಳೇ ಇದ್ದವು. ಆದರೆ ಇಂದು ಸರಾಗವಾಗಿ ನದಿಗಳಿಗೆ ಹರಿಯಲು ಸಹ ದಾರಿಯಿಲ್ಲ. ನದಿ ಹರಿಯಬೇಕಾದ ಸ್ಥಳದಲ್ಲಿ ಮನೆ ನಿರ್ಮಿಸುವುದು, ಕಟ್ಟಡ ನಿರ್ಮಿಸುವುದು ಅಥವಾ ಸರಕಾರದ ಹೆಸರಿನಲ್ಲಿ ಬೇರೆ ಯಾವುದೋ ಯೋಜನೆಗಳನ್ನು ಜಾರಿಗೆ ತಂದಿರಿಸಿ ಪ್ರಕೃತಿಗೆ ಅನ್ಯಾಯವನ್ನೇ ಮಾಡುತ್ತಿದ್ದಾರೆ. ಇದರಿಂದಾಗಿ ನೀರಿಗೆ ಸರಾಗವಾಗಿ ಹರಿಯಬೇಕಾದ ಮಾರ್ಗ ದೊರಕದಂತಾಗಿದೆ.
ಮಳೆ ವೇಗವಾಗಿ ಸುರಿದಾಗ ತನ್ನ ನೀರಿನ ರಭಸವನ್ನು ಎಲ್ಲೆಂದರಲ್ಲೋ ಹರಿಯಲು ಬಿಡುತ್ತಿದೆ. ಇದು ಮಾನವನಿಂದಲೇ ಹುಟ್ಟಿ ಮಾನವನ ವಿನಾಶಕ್ಕೆ ಇದುವೇ ಕಾರಣವಾಗುತ್ತಿದೆ. ನಾವು ಪ್ರಕೃತಿಯನ್ನು ಕಾಪಾಡಬೇಕು. ಪ್ರಕೃತಿಯ ವರದಾನಗಳಲ್ಲಿ ಒಂದಾದ ಹರಿಯುವ ನದಿಗಳನ್ನು ಸಂರಕ್ಷಿಸಬೇಕು. ಪ್ರಕೃತಿ ಮತ್ತು ಮಾನವನಿಗೂ ಅವಿನಾಭಾವ ಸಂಬಂಧವಿದೆ.
ಪ್ರಕೃತಿ ಇಲ್ಲದೆ ಮಾನವನಿಲ್ಲ, ಮಾನವನಿಲ್ಲದೆ ಪ್ರಕೃತಿ ಇಲ್ಲ ಎನ್ನುವ ಸತ್ಯವನ್ನು ನಾವೆಲ್ಲರೂ ಅರಿತು ಇಂತಹ ಮೌಲ್ಯಯುತವಾದ ಮನೋಭಾವವನ್ನು ನಾವು ಬೆಳೆಸಿಕೊಳ್ಳಬೇಕು. ಆಗ ಮಾತ್ರ ನಾವೂ ನೆಮ್ಮದಿಯಿಂದ ಬದುಕಲು ಸಾಧ್ಯವಿದೆ. ಯಾವಾಗ ನಾವೂ ಪ್ರಕೃತಿಯ ವಿರುದ್ಧ ತಿರುಗಿಬೀಳುತ್ತೇವೋ ಪ್ರಕೃತಿಯು ನಮಗೆ ಅರಿವಿಲ್ಲದಷ್ಟು ಮತ್ತು ನಮ್ಮ ಊಹೆಗೂ ನಿಲುಕದಂತಹ ಪರಿಸ್ಥಿತಿಯನ್ನು ತಂದೊಡ್ಡುತ್ತದೆ ಎಂಬುವುದರಲ್ಲಿ ಸಂದೇಹವಿಲ್ಲ.
ಇಂದು ನಾವು ನೆಮ್ಮದಿಯ ಜೀವನ ಸಾಗಿಸುತ್ತೀದ್ದೇವೆ ಎಂದರೆ ನಮ್ಮ ಸುತ್ತ ಮುತ್ತ ಹರಿಯುವ ನದಿ, ಕಾನನಗಳೇ ಕಾರಣವಾಗಿರುತ್ತದೆ. ನಾವೂ ಅವುಗಳ ವಿನಾಶಕ್ಕೆ ಕಾರಣರಾಗಬಾರದು. ಅವು ನಮ್ಮನ್ನು ಸುರಕ್ಷಿವಾಗಿರಿಸುತ್ತವೆ. ಇದು ಒಬ್ಬ, ಇಬ್ಬರಿಂದ ಆಗುವಂತಹ ಕೆಲಸವಲ್ಲ ಪ್ರತಿಯೊಬ್ಬರು ಸಹ ಪ್ರಕೃತಿಯ ಉಳಿವಿಗೆ ಕಾರಣವಾಗಬೇಕು.
-ವಿದ್ಯಾಪ್ರಸಾದ್
ವಿವೇಕಾನಂದ ಕಾಲೇಜು, ಪುತ್ತೂರು