Advertisement
ಶುಕ್ರವಾರ ರಾತ್ರಿ ಸುರಿದ ಮಳೆಗೆ ಉಪ್ಪಿನಂಗಡಿ ಪರಿಸರದಲ್ಲಿ ಹಲವೆಡೆ ಹಾನಿಯಾಗಿದ್ದು, ಅಲ್ಲಲ್ಲಿ ಧರೆ, ಕಾಂಪೌಂಡ್‌ಗಳು ಕುಸಿದು ಬಿದ್ದಿದೆ. ಪೆರಿಯಡ್ಕದ ಜನತಾ ಕಾಲನಿಯಲ್ಲಿ ಬದ್ರುದ್ದೀನ್ ಎಂಬವರ ಆವರ ಣದ ತಡೆಗೋಡೆ ಝೈನಾಬಿ ಎಂಬ ವರ ಮನೆಯ ಮೇಲೆ ಕುಸಿದು ಬಿದ್ದಿದೆ. ಅಬ್ದುಲ್ ಖಾದರ್ ಅವರ ಮನೆಯ ತಡೆಗೋಡೆ ಸುಮಾ ಆಚಾರ್ಯ ಅವರ ಮನೆಯ ಮೇಲೆ ಕುಸಿದು ಬಿದ್ದಿದೆ. ಇದರಿಂದ ಈ ಮನೆಗಳ ಗೋಡೆಗೆ ಹಾನಿಯಾಗಿದೆಯಲ್ಲದೆ, ನಷ್ಟ ಸಂಭವಿಸಿದೆ. ನೆಡ್ಚಿಲ್ ನ ಜನತಾ ಕಾಲನಿಗೆ ಹೋಗುವ ಕಾಂಕ್ರೀಟ್ ರಸ್ತೆ ಕುಸಿದು ಬಿದ್ದಿದ್ದು, ಉಪ್ಪಿನಂಗಡಿ- ಮರ್ದಾಳ ರಸ್ತೆ ವಿಸ್ತರಣೆ ಸಂದರ್ಭ ರಸ್ತೆ ಬದಿಯ ಧರೆ ಅಗೆದಿದ್ದೇ ರಸ್ತೆ ಕುಸಿಯಲು ಕಾರಣ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಧರೆ ಜರಿದು ಬಿದ್ದಿದ್ದರಿಂದ ವಿದ್ಯುತ್ ಕಂಬವೊಂದು ಅಪಾಯಕ್ಕೆ ಸಿಲುಕಿದ್ದು, ಬೀಳುವ ಸಾಧ್ಯತೆ ಎದುರಾಗಿದೆ. ರಾಮನಗರದ ಜಿತೇಂದ್ರ ಜೋಗಿ ಎಂಬವರ ಮನೆ ವಠಾರಕ್ಕೆ ತೋಟಗಾರಿಕಾ ಇಲಾಖೆಯ ವಸತಿ ಗೃಹದ ಬಳಿಯ ಧರೆ ಕುಸಿದು ಬಿದ್ದಿದ್ದು, ಇದರಿಂದ ಜಿತೇಂದ್ರ ಜೋಗಿ ಅವರ ಮನೆಯೊಳಗೆ ಕೆಸರು ನೀರು ನುಗ್ಗಿದೆ.
ಬಜತ್ತೂರು ಗ್ರಾಮದಲ್ಲಿ ಹಲವೆಡೆ ಧರೆ ಕುಸಿದಿದ್ದು, ಇಲ್ಲಿನ ವಳಾಲು ಪಡ್ಪು ನಿವಾಸಿ ರಾಮಣ್ಣ ಗೌಡ, ವಿಶ್ವನಾಥ ಹಾಗೂ ವಳಾಲು ಬೈಲು ನಿವಾಸಿ ಶೀನಪ್ಪ ಗೌಡ ಅವರ ತೋಟಕ್ಕೆ ಮಳೆ ನೀರು ನುಗ್ಗಿ ಕೃಷಿಗೆ ಹಾನಿಯಾಗಿದೆ. ಚತುಷ್ಪಥ ಕಾಮಗಾರಿಯ ಸಂದರ್ಭ ಹೆದ್ದಾರಿಯ ಚರಂಡಿಯನ್ನು ಮುಚ್ಚಿದ್ದೇ ಈ ಅವಾಂತರಕ್ಕೆ ಕಾರಣವೆನ್ನಲಾಗಿದೆ.