Advertisement
ನೆದರ್‌ಲ್ಯಾಂಡಿಗೆ ಬನ್ನಿ ಎಂದು ಮಗ ಆಹ್ವಾನಿಸಿದಾಗ ನಾನು ಕೇಳಿದ ಮೊದಲ ಪ್ರಶ್ನೆ, ಅಲ್ಲಿನವರಿಗೆ ಇಂಗ್ಲೀಷು ಅರ್ಥವಾಗುತ್ತದಾ? ನಮ್ಮ ಇಂಗ್ಲೀಷು ಎಲ್ಲರಿಗೂ ಅರ್ಥವಾಗುತ್ತದೆ ಎಂಬುದೂ, ಎಲ್ಲರ ಇಂಗ್ಲೀಷನ್ನು ನಾವು ಅರ್ಥ ಮಾಡಿಕೊಳ್ಳಬಲ್ಲೆವು ಎಂಬುದೂ ಭ್ರಮೆ ಎನ್ನುವುದು ಹತ್ತು ವರ್ಷದ ಹಿಂದೆ ಅಮೆರಿಕೆಗೆ ಹೋಗಿದ್ದಾಗ ಅರ್ಥವಾಗಿದ್ದರೂ ಈ ಪ್ರಶ್ನೆ ಕೇಳಿದ್ದೆ. “ಓ…ಇಲ್ಲಿ ಎಲ್ಲರಿಗೂ ಇಂಗ್ಲೀಷು ಗೊತ್ತಿರುತ್ತೆ. ಧೈರ್ಯವಾಗಿ ಬಾ…’ ಎಂದಿದ್ದ. ಆದರೆ ಇಂಗ್ಲೀಷನ್ನು ಬಳಸುವುದಿರಲಿ, ಮಾತೇ ಇಲ್ಲದೆ ಪಯಣಿಸುವುದು ಸಾಧ್ಯ ಎಂದು ತಿಳಿದಿದ್ದೂ ಇಲ್ಲಿಯೇ.
Related Articles
Advertisement
ಇದರೊಟ್ಟಿಗೆ ಇರುವ ಒಂದು ಆಪ್ ಗೂಗಲ್ ಮ್ಯಾಪಿನಂತೆಯೇ ಎಲ್ಲಿಂದ ಎಲ್ಲಿಗೆ ಹೇಗೆ ಹೋಗಬಹುದು ಎಂದು ಹಾದಿ ತೋರಿಸುತ್ತದೆ. ಹಾದಿಯನ್ನಷ್ಟೆ ಅಲ್ಲ. ಎಷ್ಟು ಹೊತ್ತಿಗೆ ಹೊರಟರೆ ಎಷ್ಟು ಹೊತ್ತಿಗೆ ಗುರಿ ತಲುಪಬಹುದು ಎಂದೂ ಸೂಚಿಸುತ್ತದೆ, ಅತ್ಯಂತ ನಿಖರವಾಗಿ. ಬಸ್ ನಿಲ್ದಾಣದಲ್ಲಿ ಎಲ್ಲ ಕಡೆಯೂ ಬಸ್ಸುಗಳು ಬರುವ ಸಮಯವನ್ನು ತೋರಿಸುವ ಡಿಜಿಟಲ್ ಫಲಕ ಇದೆ. (ಮೈಸೂರಿನಲ್ಲಿ ಒಮ್ಮೆ ಈ ಪ್ರಯೋಗ ಆರಂಭವಾಗಿತ್ತು. ಮುಗಿದೂ ಹೋಯಿತು ಎನ್ನಿ.) ಹೀಗಾಗಿ, ನೀವು ಯಾರನ್ನೂ ಬಸ್ಸು ಎಷ್ಟು ಹೊತ್ತಿಗೆ ಬರುತ್ತದೆ? ಬಂತಾ? ಹೋಯಿತಾ ಅಂತೆಲ್ಲ ಕೇಳುವ ಅವಶ್ಯಕತೆಯೇ ಇಲ್ಲ.
ಕಂಡಕ್ಟರು ಇಲ್ಲವೇ ಇಲ್ಲ!:
ಬಸ್ಸುಗಳಲ್ಲಿ ಕಂಡಕ್ಟರು ಇಲ್ಲವೇ ಇಲ್ಲ. ಬಾಗಿಲ ಬಳಿಯೇ ಕಾರ್ಡ್ ಸ್ಕ್ಯಾನ್ ಮಾಡುವ ಯಂತ್ರವಿದೆ. ಅದಕ್ಕೆ ಕಾರ್ಡು ಮುಟ್ಟಿಸಿದರೆ ಸಾಕು. ನೀವು ಬಸ್ಸು ಹತ್ತಿರುವುದು ದಾಖಲಾಗಿ ಬಿಡುತ್ತದೆ. ಇಳಿಯುವಾಗಲೂ ಅಷ್ಟೆ. ಕಾರ್ಡು ಮುಟ್ಟಿಸಬೇಕು. ರೈಲು ಸ್ಟೇಷನ್ನುಗಳಲ್ಲಿ, ಟ್ರಾಮುಗಳನ್ನು ಹತ್ತಿ ಇಳಿಯುವ ಕಡೆಗಳಲ್ಲಿಯೂ ಇಂತಹ ಯಂತ್ರಗಳಿರುತ್ತವೆ. ಬೆಂಗಳೂರಿನ ಮೆಟ್ರೊ ಸ್ಟೇಷನ್ನಿನಲ್ಲಿಯೂ ಹೀಗೆಯೇ ಕಾರ್ಡ್ ವ್ಯವಸ್ಥೆ ಇದೆ. ಆದರೆ ಅಲ್ಲಿಂದ ಇಳಿದು ಬಸ್ಸು ಹತ್ತಿದರೆ ಟಿಕೇಟು ಕೊಳ್ಳಲೇಬೇಕು. ಬಸ್ಸು ಯಾವ ಕಡೆಗೆ ಹೋಗುತ್ತದೆ ಎಂದು ಕಂಡಕ್ಟರನನ್ನು ಕೇಳಲೇಬೇಕು.
ಬಸ್ಸು, ಟ್ರೇನು, ಟ್ರಾಮುಗಳಲ್ಲಿ ಎಲ್ಲದರಲ್ಲಿಯೂ ನೀವು ಎಲ್ಲಿದ್ದೀರಿ, ಮುಂದಿನ ಸ್ಟೇಷನ್ನು ಯಾವುದು, ಎಂಬುದೆಲ್ಲದರ ಮಾಹಿತಿ ಪರದೆಯ ಮೇಲೆ ಕಾಣಿಸುತ್ತಲೇ ಇರುತ್ತದೆ. ನಿದ್ರೆ ಮಾಡದ ಹೊರತು ನಿಲ್ದಾಣ ತಪ್ಪಿ ಹೋಗುತ್ತದೆನ್ನುವ ಭಯ ಇರುವುದಿಲ್ಲ. ಹೀಗೆ ಆಪ್ ನೋಡಿ, 9.42ರ ಬಸ್ ನಂಬರ್ 295 ಹಿಡಿದು ಹೊರಟರೆ ಒಂದು ಟ್ರೇನು, ಒಂದು ಮೆಟ್ರೊ, ಒಂದು ಟ್ರಾಮು ಎಲ್ಲವನ್ನೂ ಬದಲಿಸಿ, 11.32ರ ಹೊತ್ತಿಗೆ ಮ್ಯೂಸಿಯಂ ಸೇರಬಹುದು ಎಂದು ಆಪ್ ತೋರಿಸಿತು. ಬಸ್ಸು ನಿಲ್ದಾಣದಿಂದ ಎತ್ತ ಕಡೆಗೆ ನಡೆಯಬೇಕು ಎಂದೂ ಹಾದಿ ಗುರುತಿಸಿತ್ತು.
ಮ್ಯೂಸಿಯಮ್ಮಿಗೂ ಒಂದು ಕಾರ್ಡ್ ಇದೆ. ನೆದರ್‌ಲ್ಯಾಂಡಿನಲ್ಲಿ ಇರುವ ಐದು ನೂರಕ್ಕೂ ಹೆಚ್ಚು ಮ್ಯೂಸಿಯಮ್‌ಗಳಿಗೆ ಒಂದೇ ಕಾರ್ಡು. ಆನ್‌ಲೈನ್ ದಾಖಲಿಸಿ ದರೆ, ಒಂದು ಕ್ಯೂಆರ್ ಕೋಡ್ ಬರುತ್ತದೆ. ಅದನ್ನು ಅಲ್ಲಿ ತೋರಿಸಿ ದರೆ ಸಾಕು. ಮಾತೇ ಬೇಕಿಲ್ಲ. ಹೀಗೆ ಡಚ್ ಭಾಷೆ ತಿಳಿಯದಿದ್ದರೂ ತಂತ್ರಜ್ಞಾನದ ನೆರವಿನಿಂದ ಸರಾಗವಾಗಿ ಮ್ಯೂಸಿಯಂ ನೋಡಿ ಬಂದೆವು.
ಇನ್…ಔಟ್..!
ಡಿಜಿಟಲೀಕರಣದ ಕೃಪೆಯಿಂದಾಗಿ ಪರದೇಶದಲ್ಲಿ ಟಿಕೇಟು ಇಲ್ಲದೆ, ಅಂದರೆ ಕಾಸು ಕೊಡದೆಯೂ ಪಯಣಿಸಿದೆ! ಬಸ್ಸು ಹತ್ತುವಾಗ ಕಾರ್ಡನ್ನು ಸರಿಯಾಗಿ ಮುಟ್ಟಿಸಿರಲಿಲ್ಲ ಎನಿಸುತ್ತದೆ. ಇಳಿಯುವಾಗ ಕಾರ್ಡು ತೋರಿಸಿದರೆ, ಯಂತ್ರ “ಇನ್’ ಅಂದರೆ ಬಸ್ಸು ಹತ್ತಿದ್ದೀ ಎಂದು ಹೇಳಿತು. ತಪ್ಪಾಯಿತಲ್ಲ ಎಂದು, ಮತ್ತೆ ಕಾರ್ಡು ಮುಟ್ಟಿಸಿದಾಗ “ಔಟ್’ ಎಂದು ತೋರಿಸಿತು. ಮನೆಗೆ ಬಂದು ಹೀಗಾಯಿತು ಎಂದಾಗ ಮಗ- “ನೀನು ಟಿಕೆಟು ಇಲ್ಲದೆ ಉಚಿತವಾಗಿ ಪ್ರಯಾಣ ಮಾಡಿದೆ ಎಂದ. ಸದ್ಯ ಔಟ್ ಮಾಡಿದೆಯಲ್ಲ. ಇಲ್ಲದಿದ್ದರೆ ಬಸ್ಸು ಎಷ್ಟು ಟ್ರಿಪ್ ಹೋಗಿ ಬಂದು ಮಾಡುತ್ತಿತ್ತೋ, ಅಷ್ಟೂ ಟ್ರಿಪ್ ಪಯಣಿಸಿದ್ದೀ ಎಂದು ಛಾರ್ಜು ಆಗುತ್ತಿತ್ತು!’ ಎಂದು ಪಾಠವನ್ನೂ ಹೇಳಿದ. ಡಿಜಿಟಲ್ ಲೋಕದಲ್ಲಿ ಮಾತೇ ಇಲ್ಲದೆ ನಾವು ಪಯಣಿಸಿದ್ದು ಹೀಗೆ.
-ಕೊಳ್ಳೇಗಾಲ ಶರ್ಮ