ಪ್ರಯಾಗ್‌ರಾಜ್: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ವಂಶಾವಳಿಯನ್ನು ಗುರುತಿಸುವ ರಾಜಶ್ರೀ ಚೌಧರಿ ಬೋಸ್ ವಾರಣಾಸಿಯಲ್ಲಿ ವಿವಾದಾತ್ಮಕ ಬಲಪಂಥೀಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹೋಗುತ್ತಿದ್ದಾಗ ರೈಲಿನಿಂದ ಕೆಳಗಿಳಿಸಿ ವಶಕ್ಕೆ ಪಡೆಯಲಾಗಿದೆ.
ವಾರಣಾಸಿಯ ಭೇಲುಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಅಸ್ಸಿ ಘಾಟ್‌ನಲ್ಲಿ ವಿಶ್ವ ಹಿಂದೂ ಸೇನೆಯ ಅಧ್ಯಕ್ಷ ಅರುಣ್ ಪಾಠಕ್ ಮತ್ತು ನಾಲ್ವರು ಬೆಂಬಲಿಗರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಖಿಲ ಭಾರತೀಯ ಹಿಂದೂ ಮಹಾಸಭಾದ ಮುಖ್ಯಸ್ಥೆ ರಾಜಶ್ರೀ ಬೋಸ್ ಅವರನ್ನು ಸೇನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಯಲ್ಲಿ ‘ಜಲಾಭಿಷೇಕ’ ನಡೆಸುವುದಾಗಿ ವಿಶ್ವ ಹಿಂದೂ ಸೇನೆ ಮತ್ತು ಶಿವಸೇನೆ ಘೋಷಿಸಿವೆ. ಮಸೀದಿ ಸ್ಥಳದಲ್ಲಿ ಮೂಲತಃ ಹಿಂದೂ ದೇವಾಲಯವಿತ್ತು ಎಂದು ಅವರು ಹೇಳುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜಶ್ರೀ ನವದೆಹಲಿಯಿಂದ ಪ್ರಯಾಣಿಸುತ್ತಿದ್ದರು ಮತ್ತು ಭಾನುವಾರ ಪ್ರಯಾಗರಾಜ್‌ನಲ್ಲಿ ರೈಲಿನಿಂದ ಇಳಿಯಲು ಕೇಳಲಾಯಿತು. ನಂತರ ಮೀಸಲು ಪೊಲೀಸ್ ಲೈನ್‌ನಲ್ಲಿರುವ ಅತಿಥಿ ಗೃಹದಲ್ಲಿ ವಶಕ್ಕೆ ಪಡೆಯಲಾಯಿತು ಮತ್ತು ಸೋಮವಾರವೂ ಅಲ್ಲಿಯೇ ಇರಿಸಲಾಗುವುದು ಎಂದು ತಿಳಿಸಿದ್ದಾರೆ.
ಬಲಪಂಥೀಯ ಗುಂಪುಗಳು ಘೋಷಿಸಿದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮುನ್ನೇಚ್ಚರಿಕೆಯನ್ನು ಕೈಗೊಳ್ಳಲಾಗಿದೆ ಎಂದು ಕಾಶಿ ಉಪ ಪೊಲೀಸ್ ಆಯುಕ್ತ ಆರ್.ಎಸ್.ಗೌತಮ್ ಹೇಳಿದ್ದಾರೆ.