Advertisement

Netaji: ನೇತಾಜಿಯ “ಆಜಾದ್‌ ಹಿಂದ್‌’ಗೆ ಮರುಜೀವ

06:13 PM Aug 28, 2023 | Team Udayavani |

ಹುಮನಾಬಾದ: ನೇತಾಜಿ ಸುಭಾಷ ಚಂದ್ರ ಬೋಸ್‌ ಅವ ರು “ಆಜಾದ್‌ ಹಿಂದ್‌’ ತಾತ್ಕಾಲಿಕ ಸರ್ಕಾರದ ರಚನೆಯನ್ನು ಘೋಷಿಸಿದ ದಿನ (ಅ.21, 1943)ದ ನೆನಪಿಗೆ ಬೀದರ ಜಿಲ್ಲೆಯ ಹುಮನಾಬಾದ್‌ ನ ಲಾಲಧರಿ ಸಂಸತ್‌ ಭವನದಲ್ಲಿ ಅಖಿಲ ಭಾರತ ಸಮಾವೇಶ ನಡೆಯಲಿದೆ.

Advertisement

ನೇತಾಜಿ ಅವರ ಮರಿ ಮೊಮ್ಮಗಳಾದ ರಾಜಶ್ರೀ ಚೌಧರಿ (ಭೋಸ್‌) ನೇತೃತ್ವದಲ್ಲಿ ಆಜಾದ್‌ ಹಿಂದ್‌ ಸರ್ಕಾರದ ವಾರ್ಷಿಕೋತ್ಸವ ಸಮಾರಂಭ ನಡೆಯಲಿದೆ. ಅ.19, 20, 21ರಂದು ಮೂರು ದಿನಗಳ ಕಾಲ ದೇಶದ ವಿವಿಧ ವಿಷಯಗಳ ತಜ್ಞರು ಚಿಂತನ-ಮಂಥನ ನಡೆಸಲಿದ್ದಾರೆ. ಈಗಾಗಲೇ ಹುಮನಾಬಾದ್‌ನ ವಿವಿಧ ವಸತಿ ನಿಲಯಗಳ ಬುಕ್ಕಿಂಗ್‌ ಸೇರಿದಂತೆ ವಿವಿಧ ಪೂರ್ವ ತಯಾರಿಗಳು ನಡೆದಿವೆ. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಹಾಗೂ ಶಾಸಕ ಡಾ|ಸಿದ್ದು ಪಾಟೀಲ ಭೇಟಿ ನೀಡಿ ಸಿದ್ಧತೆ ನಡೆಸಿದ್ದಾರೆ.

ಯಾವ ಉದ್ದೇಶಕ್ಕೆ ಸಭೆ?: ದೇಶದ ಸ್ವಾತಂತ್ರ್ಯಕ್ಕಾಗಿ ನೇತಾಜಿ ನೇತೃತ್ವದಲ್ಲಿ ಸಂಘಟಿತಗೊಂಡಿದ್ದ ಆಜಾದ್‌ ಹಿಂದ್‌ ಸಂಘಟನೆಯ ಪುನಾರಂಭಕ್ಕೆ ರಾಜಶ್ರೀ ಅವರು ಕಳೆದ ಡಿಸೆಂಬರ್‌ನಲ್ಲೇ ದೆಹಲಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದರು. ಅಲ್ಲದೇ, ಈ ಸಂಘಟನೆಯ ಮುಖ್ಯ ಕೇಂದ್ರ ಕಚೇರಿಯಾಗಿ ಹುಮನಾಬಾದ್‌ ನ ಲಾಲಧರಿ ಬಾಬಾ ಅವರ ಸಂಸತ್‌ ಭವನವನ್ನೇ ಆಯ್ಕೆ ಮಾಡಿಕೊಂಡಿದ್ದರು. ಈಗ ಇಲ್ಲಿ ಆಜಾದ್‌ ಹಿಂದ್‌ ಸರ್ಕಾರದ ವಾರ್ಷಿಕೋತ್ಸವ ನಡೆಸುವ ಮೂಲಕ ದೇಶದ ಎಲ್ಲ ಪ್ರಮುಖರನ್ನು ಜೋಡಿಸುವ ಕೆಲಸ ಇಲ್ಲಿಂದ ನಡೆಯಲಿದೆ. ಜತೆಗೆ ಸಂಘಟನೆ ಕುರಿತು ಅನೇಕ ತೀರ್ಮಾನಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ.

ಯಾರು ಲಾಲಧರಿ ಬಾಬಾ?: ಲಾಲಧರಿ ಮುತ್ಯಾ (ಲಾಲಧರಿ ಬಾಬಾ) ಅವರು ಜೀವಿತ ಅವಧಿ ಯಲ್ಲಿ ಸ್ವಯಂ ನೇತಾಜಿ ಸುಭಾಸ ಚಂದ್ರಭೋಸ್‌ ಎಂದು ಹೇಳಿಕೊಂಡಿರುವ ಕುರಿತು ಹುಮನಾಬಾದ್‌ ಪರಿಸರದ ಜನರ ಹೇಳಿಕೆ 2016ರಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿತ್ತು, ಮಹಾರಾಷ್ಟ್ರದ ಉಮರ್ಗಾ ಮೂಲದ ಸಂತರಾಮ್‌ ಮುರ್ಜಾನಿ ಅವರು ಬಾಬಾ ಅವರಿಗೆ ಸಂಬಂಧಿಸಿದ ವಿವಿಧ
ಪರಿಕರಗಳನ್ನು ಪ್ರದರ್ಶಿಸಿ, ಬಾಬಾ ಅವರೇ ನೇತಾಜಿ ಆಗಿರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಪರಿಶೀಲನೆ ನಡೆಸಬೇಕು. ಇಲ್ಲಿ ದೇಶಭಕ್ತಿಯ ಕೇಂದ್ರವಾಗಿ ಮಾಡಿದ ಬಾಬಾ ಯಾರು ಎಂಬುದನ್ನು ತಿಳಿಯಲು ಕೇಂದ್ರ ಸರ್ಕಾರ ಬಾಬಾ ಅವರ ಹಲ್ಲು ಹಾಗೂ ಕೂದಲಿನ ಡಿಎನ್‌ಎ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದ್ದರು. ಅಲ್ಲದೇ, ನೇತಾಜಿ ಅವರ ಮರಿಮೊಮ್ಮಗಳು ಸೇರಿದಂತೆ
ಇತರೆ ಪ್ರಮುಖರು ಭೇಟಿ ನೀಡಿ ಪರಿಶೀಲನೆ ಕೂಡ ನಡೆಸಿದ್ದರು.

ಏಕೆ ಸಂಸತ್‌ ಭವನ ಆಯ್ಕೆ?: ಲಾಲಧರಿ ಮುತ್ಯಾ ಸ್ವಂತ ಖರ್ಚಿನಲ್ಲಿ ದೆಹಲಿಯ ಸಂಸತ್‌ ಭವನದ ಮಾದರಿಯಲ್ಲಿ ಎರಡು ದಶಕಗಳ ಹಿಂದೆಯೇ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಆ.15 ಹಾಗೂ ಜ.26ರಂದು ವಿಶೇಷ ಹಬ್ಬ ಆಚರಣೆ ಜತೆಗೆ ರಾಷ್ಟ್ರ ಧ್ವಜಾರೋಹಣ ಜಾತ್ರೆ ಮಾದರಿಯಲ್ಲಿ ಆಚರಣೆ ಮಾಡುವುದು ಇಲ್ಲಿನ ವಿಶೇಷವಾಗಿದೆ. 2022ರಲ್ಲಿ ಆಜಾದ್‌ ಹಿಂದ್‌ ಸಂಘಟನೆ ಮರು ಆರಂಭಕ್ಕೆ ಮುಂದಾದ ರಾಜಶ್ರೀ ಚೌಧರಿ ಅವರು, ಇದನ್ನೇ ಸಂಘಟನೆಯ ಮುಖ್ಯ ಕೇಂದ್ರವಾಗಿ ಘೋಷಣೆ ಮಾಡಿದ್ದರು.

Advertisement

ಆಜಾದ್‌ ಹಿಂದ್‌ ಸಂಘಟನೆಯಲ್ಲಿ ಸೇವೆ ಸಲ್ಲಿಸಿದ ಸೇನಾನಿಗಳು, ಇಂಡಿಯನ್‌ ನ್ಯಾಷನಲ್‌ ಆರ್ಮಿ ಹಾಗೂ ದೇಶಕ್ಕಾಗಿ ಬಲಿದಾನ ಮಾಡಿದ ಭಗತ್‌ಸಿಂಗ್‌, ಲಾಲಾ ಲಜಪತ ರಾಯ್‌, ಮಂಗಲ್‌ ಪಾಂಡೆ  ಸೇರಿದಂತೆ ಅನೇಕ ಪ್ರಮುಖ ಹೋರಾಟ ಗಾರರ ಕುಟುಂಬಸ್ಥರನ್ನು ಸಂಪರ್ಕ ಸಾಧಿಸಿದ್ದು, ಆಜಾದ್‌ ಹಿಂದ್‌ ವಾರ್ಷಿಕೋತ್ಸವದಲ್ಲಿ ಭಾಗವಹಿಸುವಂತೆ ಮನವರಿಕೆ ಮಾಡಲಾಗಿದೆ. ಅವರಿಂದ ಉತ್ತಮ ಪ್ರತಿಕ್ರಿಯೆಗಳು ಬಂದಿವೆ.
ಸಂತರಾಮ್‌ ಮುರ್ಜಾನಿ,
ಲಾಲಧರಿ ಸಂಸತ್‌ ಭವನದ ಉಸ್ತುವಾರಿ ಹಾಗೂ ಆಜಾದ್‌ ಹಿಂದ್‌ ಕಮಿಟಿ ಸದಸ್ಯ

ಈ ಭಾಗದಲ್ಲಿ ದೇಶ ಪ್ರೇಮ ಬೆಳೆಸಿದ ಲಾಲಧರಿ ಸಂಸತ್‌ ಭವನದಲ್ಲಿ ಅಕ್ಟೋಬರ್‌ ತಿಂಗಳಲ್ಲಿ ಆಜಾದ್‌ ಹಿಂದ್‌ ಸರ್ಕಾರದ ರಚನೆಯ ವಾರ್ಷಿಕೋತ್ಸವ ನಿಮಿತ್ತ ಆಲ್‌ ಇಂಡಿಯಾ ಮೀಟ್‌ ಕಾರ್ಯಕ್ರಮ ಏರ್ಪಡಿಸಲಾಗಿದೆ. ದೇಶಕ್ಕಾಗಿ ಹೋರಾಡಿದ ವೀರರ ಕುಟುಂಬದವರು ಕೂಡ ಬರುತ್ತಿರುವ ಕಾರಣಕ್ಕೆ ಇಲ್ಲಿನ ಜನರು ಸಹ ಈ ಸಮಾರಂಭದಲ್ಲಿ ಭಾಗವಹಿಸಬೇಕು.
ದೂರ ದೂರದಿಂದ ದೇಶ ಪ್ರೇಮಿಗಳು ಆಗಮಿಸುತ್ತಿರುವ ಕಾರಣಕ್ಕೆ ಇಲ್ಲಿನ ಜನರು ಸ್ವಯಂ ಪ್ರೇರಿತರಾಗಿ ಸಹಾಯ, ಸಹಕಾರಕ್ಕೆ
ಮುಂದಾಗಬೇಕು.
ಬಸವರಾಜ ಪಾಟೀಲ ಸೇಡಂ,
ಮಾಜಿ ಸಂಸದ

*ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next