Advertisement
ನಗರದ ಸೊಬಗು ಹೆಚ್ಚಾಗಬೇಕಾದರೆ ನಗರದ ಭಿತ್ತಿಗಳು ಅಂದವಾಗಿ ಶೃಂಗಾರಗೊಂಡಿರಬೇಕು. ಮಂಗಳೂರು ನಗರದ ವೆನ್‌ಲಾಕ್ ಆಸ್ಪತ್ರೆ ಹಾಗೂ ಸರಕಾರಿ ಕಾಲೇಜಿನ ಮುಂಭಾಗದ ಗೋಡೆಗಳಲ್ಲಿ ಕಲಾವಿದ ವಿಕ್ರಮ್ ಶೆಟ್ಟಿ ಹಾಗೂ ಶೈಲೇಶ್ ಕೋಟ್ಯಾನ್ ನೇತೃತ್ವದ ಆದಿತತ್ವ ಕಲಾತಂಡವು ಬಣ್ಣಗಳ ತೋರಣ ಕಟ್ಟಿ ವಿಶೇಷ ಮೆರುಗನ್ನು ನೀಡಿದೆ. ಮಹಾಲಸ ಕಲಾಶಿಕ್ಷಣ ಸಂಸ್ಥೆಯ ಸೌಮ್ಯಾ ಭಟ್, ಕಮಿಲ್‌ರಾಜ್, ಶರತ್ ಕುಲಾಲ್, ಶಾಶ್ವತ್ ಕಿಣಿ ಹಾಗೂ ಇನ್ನೊಂದಷ್ಟು ಯುವ ಕಲಾವಿದರು ಈ ಭಿತ್ತಿಬಣ್ಣದ ಸಂಭ್ರಮದಲ್ಲಿ ಕುಂಚ, ವರ್ಣಗಳನ್ನೆಳೆದವರು. ತುಳುನಾಡಿನ ಸಂಸ್ಕೃತಿ, ಪದ್ಧತಿ, ಪ್ರಕೃತಿಯ ವಿವಿಧ ಪ್ರಕಾರಗಳನ್ನು ಈ ಗೋಡೆಯಲ್ಲಿ ಬಣ್ಣಗಳಲ್ಲಿ ಚಿತ್ರಿಸಿ ರಸ್ತೆಯನ್ನು ಕಲಾತ್ಮಕವಾಗಿ ಅನಾವರಣಗೊಳಿಸಿದುದರಿಂದ ಈ ರಸ್ತೆಯು ಶುಚಿತ್ವದ ಹೊದಿಕೆಯಿಂದ ಕಂಗೊಳಿಸುತ್ತಿದೆ. ತುಳುನಾಡಿನ ಯಕ್ಷಗಾನ, ಕಂಬಳ, ದೈವಾರಾಧನೆ, ಗುತ್ತಿನಮನೆ, ಮೀನುಗಾರಿಕೆ ಮುಂತಾದ ವಿಷಯಗಳೇ ಇಲ್ಲಿನ ಗೋಡೆಗಳಲ್ಲಿ ಕಲಾಕೃತಿಗಳಾಗಿವೆ. ನೀರು, ಕಾಡು, ನದಿ, ಪಶ್ಚಮಘಟ್ಟದ ಬಗ್ಗೆ ಅರಿವು, ಜಾಗೃತಿ ಮೂಡಿಸುವಂತಹ ಚಿತ್ತಾರಗಳೂ ಇವೆ. ಜತೆಗೆ ಮದ್ಯಪಾನ ಮಾಡದಂತೆ, ಪರಿಸರ ಮಾಲಿನ್ಯವಾಗದಂತೆ ಒಂದಷ್ಟು ಎಚ್ಚರಿಕೆಯ ಹಿತವಾಕ್ಯಗಳು, ಸಂದೇಶಗಳು ಗೋಡೆಯನ್ನಲಂಕರಿಸಿವೆ. ಬಾಲಕಾರ್ಮಿಕರ ಶೋಷಣೆ, ಶಬ್ದಮಾಲಿನ್ಯ, ಶಿಕ್ಷಣ ವಂಚಿತ ಬಾಲಕರು, ನೀರು ಪೋಲಾಗದಂತೆ ಜಾಗೃತಿ ವಹಿಸಬೇಕಾದಂತಹ ವಿಚಾರಗಳು ಕಲಾಕೃತಿಗಳಿಗೆ ಪೂರಕವಾಗುವಂತೆ ಹೊಂದಾಣಿಕೆಯಲ್ಲಿವೆ.
Related Articles
Advertisement