ಬೆಂಗಳೂರು: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್‌ಇ) ವತಿಯಿಂದ ವೈದ್ಯಕೀಯ,ದಂತ ವೈದ್ಯಕೀಯ ಸೀಟುಗಳ ಪ್ರವೇಶಕ್ಕೆ ಭಾನುವಾರ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ನಡೆಯಲಿದ್ದು, ದೇಶಾದ್ಯಂತ 104 ನಗರಗಳ ಪರಿಕ್ಷಾ ಕೇಂದ್ರಗಳಲ್ಲಿ 11,35,104 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.
ಭಾನುವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಪರೀಕ್ಷೆ ನಡೆಯಲಿದ್ದು, ಬೆಂಗಳೂರು,ಮೈಸೂರು,ಹುಬ್ಬಳ್ಳಿ,ಬೆಳಗಾವಿ,
ಮಂಗಳೂರು,ಉಡುಪಿ ದಾವಣಗೆರೆ ಮತ್ತಿತರೆಡೆ ಪರೀಕ್ಷಾ ಕೇಂದ್ರಗಳಲ್ಲಿ ನೀಟ್ ಪರೀಕ್ಷಗೆ ಸಿಬಿಎಸ್‌ಇ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.
ರಾಜ್ಯದ ವಿದ್ಯಾರ್ಥಿಗಳು ಇದೇ ಮೊದಲ ಬಾರಿಗೆ ನೀಟ್ ಪರೀಕ್ಷೆ ಬರೆಯಲಿದ್ದಾರೆ. ಸಿಬಿಎಸ್‌ಇ ದೇಶಾದ್ಯಂತ ಏಕರೂಪದ ನೀಟ್ ಪರೀಕ್ಷೆ ನಡೆಸುವುದಾಗಿ ಕೆಲ ತಿಂಗಳ ಹಿಂದೆ ಪ್ರಕಟಿಸಿದಾಗ ಗೊಂದಲ ಸೃಷ್ಟಿಯಾಗಿತ್ತು. ರಾಜ್ಯ ಸರ್ಕಾರದ ಮಟ್ಟದಲ್ಲೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ದೇಶಾದ್ಯಂತ ಏಕರೂಪದ ಪರೀಕ್ಷಾ ವಿಧಾನ ಅಳವಡಿಸಿಕೊಂಡಿರುವುದರಿಂದ ಕರ್ನಾಟಕದ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗುವುದು ಅನಿವಾರ್ಯ. ನೀಟ್‌ನಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಸರಕಾರಿ ವೈದ್ಯಕೀಯ ಸೀಟು ಪಡೆಯಲಿದ್ದಾರೆ.
ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡ ಪ್ರವೇಶ ಪತ್ರಗಳಲ್ಲಿ ಅಭ್ಯರ್ಥಿಗಳ ಭಾವಚಿತ್ರ, ಸಹಿ ಸ್ಪಷ್ಟವಾಗಿ ಕಾಣುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಪ್ರವೇಶ ಪತ್ರದ ಜತೆಗೆ ಆಧಾರ್ ಕಾರ್ಡ್ ಅಥವಾ ಭಾವಚಿತ್ರವಿರುವ ಸರ್ಕಾರದ ಅಧಿಕೃತ ಯಾವುದೇ ಗುರುತಿನ ಚೀಟಿ ತೆಗೆದುಕೊಂಡು ಹೋಗುವುದು ಕಡ್ಡಾಯ ಎಂದು ಸಿಬಿಎಸ್‌ಇ ತಿಳಿಸಿದೆ.
ವಿದ್ಯಾರ್ಥಿಗಳು ಕ್ಯಾಲ್ಕುéಲೇಟರ್, ಮೊಬೈಲ್ ಫೋನ್, ಇಯರ್‌ಫೋನ್, ಮೈಕ್ರೋಫೋನ್ ಸೇರಿದಂತೆ ಇತರೆ ಯಾವುದೇ ಪರಿಕರಗಳನ್ನು ಪರೀಕ್ಷಾ ಕೇಂದ್ರದೊಳಗೆ ತೆಗೆದುಕೊಂಡು ಹೋಗುವಂತಿಲ್ಲ. ಪರೀಕ್ಷಾ ಸಮಯಕ್ಕೆ ಒಂದು ಗಂಟೆ ಮೊದಲು ಪರೀಕ್ಷೆ ಕೇಂದ್ರ ತಲುಪಿರಬೇಕು. ಹೇರ್‌ಬ್ಯಾಂಡ್, ಹೇರ್‌ಪಿನ್ ಧರಿಸುವಂತಿಲ್ಲ. ಬ್ಲೂ ಅಥವಾ ಬ್ಲಾಕ್ ಬಾಲ್‌ಪೆನ್ ಬಳಸುವಂತೆ ಸಿಬಿಎಸ್‌ಇ ಸೂಚನೆ ನೀಡಿದೆ.