ಮುಂಬಯಿ: ಚೊಚ್ಚಲ ಬಾರಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಕ್ಕೆ ರೋಮಾಂಚನಗೊಂಡಿರುವ ಎಡಗೈ ವೇಗಿ ಅರ್ಷದೀಪ್ ಸಿಂಗ್ ಅವರು ಶಕ್ತಿಶಾಲಿಯಾಗಿ ಹೊಡೆಯುವ ಪಂಜಾಬ್ ಕಿಂಗ್ಸ್ ತಂಡದ ಬ್ಯಾಟ್ಸ್‌ಮನ್‌ಗಳಿಗೆ ನೆಟ್‌ನಲ್ಲಿ ಬೌಲಿಂಗ್ ನಡೆಸಿದ್ದರಿಂದ ಪರ್ಫೆಕ್ಟ್ ಯಾರ್ಕರ್ ಎಸೆಯಲು ನೆರವಾಯಿತು ಎಂದಿದ್ದಾರೆ.
ಈ ಐಪಿಎಲ್ ಋತುವಿನಲ್ಲಿ ಡೆತ್ ಓವರ್‌ಗಳಲ್ಲಿ ಅರ್ಷದೀಪ್ ಸಿಂಗ್ ಗಮನಾರ್ಹ ಬೌಲಿಂಗ್ ದಾಳಿ ಸಂಘಟಿಸಿ ಗಮನ ಸೆಳೆದಿದ್ದಾರೆ. 7.70 ಸರಾಸರಿಯಲ್ಲಿ ಅವರು 10 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ.
ಯಾರ್ಕರ್ ಎಸೆತಗಳಿಂದ ಗಮನ ಸೆಳೆದ ಅವರು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಟಿ20 ಸರಣಿಗೆ ಭಾರತೀಯ ತಂಡಕ್ಕೆ ಆಯ್ಕೆಯಾಗಲು ಸಹಕಾರಿಯಾಯಿತು. ರವಿವಾರ ನಡೆದ ಸನ್‌ರೈಸರ್ ಹೈದರಾಬಾದ್ ವಿರುದ್ಧದ ಈ ಬಾರಿಯ ಐಪಿಎಲ್‌ನ ಕೊನೆಯ ಲೀಗ್ ಪಂದ್ಯದ ವೇಳೆ ಅರ್ಷದೀಪ್ ಅವರಿಗೆ ಭಾರತೀಯ ತಂಡಕ್ಕೆ ಆಯ್ಕೆಯಾದ ಸುದ್ದಿ ಸಿಕ್ಕಿದೆ. ಈ ಪಂದ್ಯದಲ್ಲಿ ಪಂಜಾಬ್ ಗೆಲುವು ಸಾಧಿಸಿ ಸಂಭ್ರಮಿಸಿತ್ತು.
ಕಳೆದ ವರ್ಷ ಶ್ರೀಲಂಕಾ ವಿರುದ್ಧದ ಸರಣಿ ವೇಳೆ ಯುವ ಆಟಗಾರ ಅರ್ಷದೀಪ್ ಅವರು ಭಾರತೀಯ ತಂಡಕ್ಕೆ ನೆಟ್ ಬೌಲರ್ ಆಗಿ ಕರ್ತವ್ಯ ಸಲ್ಲಿಸಿದ್ದರು.
ಪಂಜಾಬ್ ಕಿಂಗ್ಸ್ ತಂಡದ ಆಟಗಾರರಾದ ಜಾನಿ ಬೇರ್‌ಸ್ಟೋ, ಶಿಖರ್ ಧವನ್, ಲಿಯಮ್ ಲಿವಿಂಗ್‌ಸ್ಟೋನ್ ಅವರಿಗೆ ನೆಟ್‌ನಲ್ಲಿ ಬೌಲಿಂಗ್ ಮಾಡಿದ್ದರಿಂದ ಭಾರತೀಯ ತಂಡಕ್ಕೆ ಆಯ್ಕೆಯಾಗಲು ಸಾಧ್ಯವಾಯಿತು ಎಂದವರು ಹೇಳಿದರು.