Advertisement

ಗ್ರಾ.ಪಂ.ನಿಂದ ನೆಟ್‌ ಅಳವಡಿಕೆ, ಕಾವಲು ವ್ಯವಸ್ಥೆ 

03:05 PM Oct 31, 2017 | Team Udayavani |

ಮಳವೂರು: ಮಳವೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕಲ್ಲೋಡಿ ಪ್ರದೇಶದಲ್ಲಿ ಜನರು ತ್ಯಾಜ್ಯ ಎಸೆಯದಂತೆ ಗ್ರಾ.ಪಂ. ನೆಟ್‌ ಅಳವಡಿಸಿದೆ. ಅಲ್ಲದೆ, ಪಂಚಾಯತ್‌ ಸದಸ್ಯರ ಜತೆಗೆ ಸಾರ್ವಜನಿಕರೂ ನಿಂತು ಕಾವಲು ಕಾಯುತ್ತಿದ್ದಾರೆ.

Advertisement

ಕಲ್ಲೋಡಿ ಪರಿಸರದಲ್ಲಿ ತ್ಯಾಜ್ಯಗಳ ದೊಡ್ಡ ರಾಶಿಯೇ ನಿರ್ಮಾಣವಾಗಿ ಸಮೀಪದ ಮಾರ್ನಿಂಗ್‌ ಸ್ಟಾರ್‌ ಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಮಳವೂರು ಗ್ರಾ.ಪಂ. ಈ ಕ್ರಮ ಕೈಗೊಂಡಿದೆ.

ಇದು ಬಜಪೆ ಹಾಗೂ ಮಳವೂರು ಗ್ರಾ.ಪಂ.ಗಳ ಗಡಿ ಪ್ರದೇಶ. ಸಮೀಪದಲ್ಲೇ ವಸತಿ ಸಂಕೀರ್ಣಗಳಿವೆ. ಬೇರೆ ಪಂಚಾಯತ್‌ಗಳಿಂದ ಇಲ್ಲಿಗೆ ತ್ಯಾಜ್ಯ ತಂದು ಸುರಿಯುತ್ತಿದ್ದಾರೆ ಎಂಬ ಆರೋಪವಿದೆ.

ಶಾಲೆಗೆ ಹಾಗೂ ಮಂಗಳೂರು ಕಡೆಯಿಂದ ಹಳೇ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಯೂ ಇದೇ ಆಗಿದೆ. ಆದರೆ, ಇಲ್ಲಿ ತ್ಯಾಜ್ಯ ಎಸೆದು ರಾಶಿ ಬೆಳೆಯುತ್ತಿದೆ. ಪಂಚಾಯತ್‌ ವತಿಯಿಂದ ಹಲವಾರು ಬಾರಿ ಇಲ್ಲಿ ತ್ಯಾಜ್ಯ ತೆಗೆದು ಸಮತಟ್ಟು ಮಾಡಲಾಗಿತ್ತು. ಕಸ ಎಸೆಯದಂತೆ ನಾಮಫಲಕ ಹಾಕಿತ್ತು. ಅದು ಪ್ರಯೋಜನವಾಗಲಿಲ್ಲ. ತ್ಯಾಜ್ಯ ಎಸೆದ
ಕಾರಣ ಈ ಪರಿಸರದಲ್ಲಿ ಗಬ್ದು ವಾಸನೆ ಹರಡುತ್ತಿದ್ದು, ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗುತಿತ್ತು. ತ್ಯಾಜ್ಯ ತಿನ್ನಲು 20ಕ್ಕೂ ಹೆಚ್ಚು ಬೀದಿ ನಾಯಿಗಳು ಈ ರಸ್ತೆಯಲ್ಲೇ ಠಿಕಾಣಿ ಹೂಡಿದ್ದವು. ಈ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ಮಳವೂರು ಗ್ರಾ.ಪಂ.ಗೆ ದೂರು ನೀಡಿದ್ದರು.

15 ಸಾವಿರ ರೂ. ವೆಚ್ಚದಲ್ಲಿ ಇಲ್ಲಿ ನೆಟ್‌ ಅಳವಡಿಕೆ
ತಾಜ್ಯ ಎಸೆಯುವುದನ್ನು ತಡೆಗಟ್ಟಲು ಮಳವೂರು ಗ್ರಾಮ ಪಂಚಾಯತ್‌ ಈ ಜಾಗದಲ್ಲಿ 15 ಸಾವಿರ ರೂ. ವೆಚ್ಚದಲ್ಲಿ ನೆಟ್‌ ಹಾಕಿದೆ. ತ್ಯಾಜ್ಯ ಎಸೆಯದಂತೆ, ಎಸೆದರೆ ಕಾನೂನು ಕ್ರಮ ಕೈಗೊಳ್ಳುವ ಕುರಿತು ಎಚ್ಚರಿಸುವ ಫ‌ಲಕವನ್ನೂ ಅಳವಡಿಸಿದೆ. 

Advertisement

ಕಾವಲು
ಇತರ ಪ್ರದೇಶದಿಂದ ವಾಹನದಲ್ಲಿ ಬರುವವರು ಇಲ್ಲಿ ತ್ಯಾಜ್ಯ ಎಸೆಯುವ ಬಗ್ಗೆ ಮಾಹಿತಿ ಇದೆ. ಇದನ್ನು ತಡೆಯಲು ಗ್ರಾ.ಪಂ. ಅಧ್ಯಕ್ಷರು, ಪಿಡಿಒ ಹಾಗೂ ಗ್ರಾ.ಪಂ. ಸದಸ್ಯರು ಸ್ಥಳಕ್ಕೆ ದಿನನಿತ್ಯ ಭೇಟಿ ನೀಡುತ್ತಿದ್ದಾರೆ. ಸಂಘ – ಸಂಸ್ಥೆಗಳ ಸದಸ್ಯರು ಇದಕ್ಕೆ ಸಹಕಾರ ನೀಡುತ್ತಿದ್ದಾರೆ. ಶಾಲಾ ಮಕ್ಕಳ ಜತೆ ಸಾರ್ವಜನಿಕ ಹಿತ ಹಾಗೂ ಸ್ವಚ್ಛತೆ ದೃಷ್ಟಿಯಿಂದ ನೆಟ್‌ ಅಳವಡಿಸಲಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ.
ಗಣೇಶ್‌ ಆರ್ಬಿ,ಗಾ.ಪಂ.ಅಧ್ಯಕ್ಷ

ದೂರು ನೀಡಿದ್ದೇವೆ
ಶಾಲಾ ಮಕ್ಕಳ ಹಿತದೃಷ್ಟಿಯಿಂದ ಪರಿಸರದಲ್ಲಿ ಸ್ವಚ್ಛತೆಗೆ ಆದ್ಯತೆ ಹಾಗೂ ಬೀದಿ ನಾಯಿಗಳ ಕಾಟದ ಬಗ್ಗೆ ಮಳವೂರು ಗ್ರಾಮ ಪಂಚಾಯತ್‌ಗೆ ತಿಳಿಸಿದ್ದೇವೆ. ಸಾರ್ವಜನಿಕರು ಇಲ್ಲಿ ತ್ಯಾಜ್ಯ ಬಿಸಾಡದಂತೆ ಮಾಡುವ ಬಗ್ಗೆ ಮನವಿಯನ್ನೂ ಮಾಡಿದ್ದೆ. ತ್ಯಾಜ್ಯ ಎಸೆಯುವುದನ್ನು ತಡೆಗಟ್ಟಲು ಗ್ರಾ.ಪಂ. ನೆಟ್‌ ಅಳವಡಿಸಿದೆ. ಕಾವಲು ವ್ಯವಸ್ಥೆ ಮಾಡಿದೆ. ಇದಕ್ಕೆ ನಮ್ಮದೂ ಸಹಕಾರ ಇದೆ.
 –ಭಗಿನಿ ಸೆಲಿನ್‌, ಶಾಲಾ ಮುಖ್ಯೋಪಾಧ್ಯಾಯಿನಿ

Advertisement

Udayavani is now on Telegram. Click here to join our channel and stay updated with the latest news.

Next